ಬೆಂಗಳೂರು : ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ನೋಟಿಸ್ ನೀಡಲಾಗಿದ್ದು, ಈ ಬಗ್ಗೆ ಟ್ರಬಲ್ ಶೂಟರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ನಾವು ಗಮನಿಸುತ್ತಿದ್ದೇವೆ. ಶೃಂಗೇರಿ ಘಟನೆ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ. ಕಾವಲ್ ಬೈರಸಂದ್ರದಲ್ಲೂ ಏನ್ಮಾಡ್ತಿದ್ದಾರೆ. ಗೃಹ ಸಚಿವರ ಪ್ರತಿಯೊಂದು ಹೇಳಿಕೆಯನ್ನೂ ಗಮನಿಸುತ್ತಿದ್ದೇವೆ. ನಮ್ಮ ಪಾಲಿಕೆ ಸದಸ್ಯರಿಗೆ ನೋಟಿಸ್ ಕೊಟ್ಟು ಹೆದರಿಸುವ ಕೆಲಸ ನಡೆಯುತ್ತಿದೆ. ಇದಕ್ಕೆಲ್ಲ ನಾವು ಹೆದರೋದಿಲ್ಲ. ನಮ್ಮ ಶಾಸಕರ ಬೆಂಬಲಕ್ಕೆ ನಾವಿದ್ದೇವೆ. ನಮ್ಮವರನ್ನು ಹೆದರಿಸಿ ಕೇಸ್ ಮುಚ್ಚೋಕೆ ನಾವು ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.
ಇನ್ನು ಗಲಭೆಗೆ ಕಾಂಗ್ರೆಸ್ ನಾಯಕರಲ್ಲಿನ ಆಂತರಿಕ ಭಿನ್ನಾಭಿಪ್ರಾಯವೇ ಕಾರಣ ಎಂಬ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ರಬಲ್ ಶೂಟರ್, ಆ ಮಾತು ಹೇಳಲು ಬೊಮ್ಮಾಯಿ ಯಾರು?, ಅಥಾರಿಟೀನಾ?, ಸಬ್ ಇನ್ಸ್ ಪೆಕ್ಟರಾ? ಅಥವಾ ಆಯೋಗನಾ?. ನಮ್ಮ ಕಾರ್ಪೊರೇಟರ್ ಗಳಿಗೆ ನೋಟಿಸ್ ಕೊಟ್ಟು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಏನ್ ನಡೀತಿದೆ ಇಲ್ಲಿ? ನಾವೇನು ಸುಮ್ನೆ ಕೂತಿದ್ದೀವಾ? ಅವರ ಕಾರ್ಯಕರ್ತ ಟ್ವೀಟ್ ಮಾಡಿದ್ದೇ ಗಲಭೆಗೆ ಕಾರಣ ಎಂದು ಆರೋಪಿಸಿದರು.
ಮುಂದುವರಿದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ, ಗಲಭೆ ನಿಯಂತ್ರಣ ಮಾಡಲು ಹೋಮ್ ಮಿನಿಸ್ಟರ್ ಕಂಪ್ಲೀಟ್ ವಿಫಲರಾಗಿದ್ದಾರೆ. ಮೂರು ಗಂಟೆ ಅವಧಿಯಲ್ಲಿ ಗಲಭೆ ನಿಯಂತ್ರಿಸಲಿಲ್ಲ. ಗಲಾಟೆ ಮಾಡಲು ಬಿಟ್ಟು ಈಗ ಜಾತಿ ಬಣ್ಣ ಬಳಿಯುತ್ತಿದ್ದಾರೆ. ಅಖಂಡ ನಮ್ಮ ಶಾಸಕ. ನಮ್ಮ ಶಾಸಕ ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆ. ನಮ್ಮ ಶಾಸಕನ ಮನೆ ಮೇಲಿನ ದಾಳಿಯನ್ನ ನಾವು ಕಟುವಾಗಿ ಖಂಡಿಸಿದ್ದೇವೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ತಗೊಳ್ಳಿ. ಇದಕ್ಕೆ ನಮ್ಮ ಬೆಂಬಲವೂ ಇದೆ. ಅದು ಬಿಟ್ಟು ಕಾಂಗ್ರೆಸ್ಸಿನಲ್ಲಿ ಒಳ ಜಗಳ ಇದೆ ಎಂದು ಹೇಳಲು ಬೊಮ್ಮಾಯಿ ಯಾರು ಎಂದು ಪ್ರಶ್ನೆ ಮಾಡಿದರು.









