ಕೊಪ್ಪಳ : ಬೆಂಗಳೂರು ಡಿಜೆ ಹಳ್ಳಿ ಕೆಜಿ ಹಳ್ಳಿಯಲ್ಲಿ ನಡೆದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್ ನಲ್ಲಿ ಹಿಂದೂಗಳ ಕುರಿತು ಪ್ರಸ್ತಾಪಿಸಿದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಣ್ಣನಿಂದ ಹೆಚ್ಚು ನೀರಿಕ್ಷೆ ಮಾಡಲು ಆಗಲ್ಲ ಎಂದಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮಾತ್ರ ಇದ್ದರು. ಆದರೆ ಮುಖ್ಯಮಂತ್ರಿವಾಗಿ ವರ್ತನೆ ಮಾಡಲಿಲ್ಲ. ಅಧಿಕಾರದಲ್ಲಿ ಇದ್ದಾಗ ಗಲಭೆಗಳು ಆದಾಗ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇವತ್ತು ಇದು ನಡೆಯುತ್ತಿರಲಿಲ್ಲ. 21 ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಕ್ರಮ ತಗೆದುಕೊಳ್ಳಲಿಲ್ಲ. ಎಸ್ಡಿಪಿಐ, ಸಿಮಿ ಸಂಘಟನೆಯವರ ಮೇಲಿನ ಕೇಸ್ ಗಳಿಗೆ ಬಿ ರಿಪೋರ್ಟ್ ಹಾಕಿದರು. ಇದರಿಂದ ಅವರಿಗೆ ಧೈರ್ಯ ಬಂತು, ಆ ಧೈರ್ಯವೇ ಇವತ್ತು ಇದನ್ನು ಮಾಡಿಸುತ್ತಿದೆ ಎಂದು ಗುಡುಗಿದರು.
ಇನ್ನು ಗಲಭೆ ವಿಚಾರದಲ್ಲಿ ಸಿದ್ದರಾಮಯ್ಯ ಮೌನವಾಗಿರಬೇಕಾಗಿದೆ. ಇದರ ಹಿಂದೆ ಅವರದ್ದೆ ಶಕ್ತಿ ಇದೆ ಎಂದು ದೂರಿದ ಕಟೀಲ್, ಈ ಘಟನೆಗೆ ಸಿದ್ದರಾಮಯ್ಯ ನೇರ ಕಾರಣ ಎಂದು ನಾನು ಹೇಳಲ್ಲ. ಆದರೆ ಸಿದ್ದರಾಮಯ್ಯ ಸರಿಯಾಗಿ ಆಡಳಿತ ನೀಡದಿರುವುದು, ಅಂದು ಕಠಿಣ ಕ್ರಮ ತೆಗೆದು ಕೊಳ್ಳದಿರುವುದು, ಈ ಜನರಿಗೆ ಧೈರ್ಯ ಬಂದಿದೆ ಎಂದು ಹೇಳಿದ್ದಾರೆ.








