ಕೊರೊನಾ ಸೋಂಕಿಗೆ ‌ಬಾಂಗ್ಲಾ ದೇಶದ ರಕ್ಷಣಾ ಕಾರ್ಯದರ್ಶಿ ಬಲಿ

ಕೊರೊನಾ ಸೋಂಕಿಗೆ ‌ಬಾಂಗ್ಲಾ ದೇಶದ ರಕ್ಷಣಾ ಕಾರ್ಯದರ್ಶಿ ಬಲಿ

ಢಾಕಾ, ಜೂನ್ 30: ಕೊರೊನಾ ಸೋಂಕಿಗೆ ‌ಬಾಂಗ್ಲಾ ದೇಶದ ರಕ್ಷಣಾ ಕಾರ್ಯದರ್ಶಿ ಅಬ್ದುಲ್ಲಾ ಅಲ್‌ ಮೊಹ್ಸಿನ್‌ ಚೌಧರಿ ಬಲಿಯಾಗಿದ್ದಾರೆ. ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬಾಂಗ್ಲಾ ದೇಶದ ರಕ್ಷಣಾ ಕಾರ್ಯದರ್ಶಿ ಅಬ್ದುಲ್ಲಾ ಅಲ್‌ ಮೊಹ್ಸಿನ್‌ ಚೌಧರಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅಬ್ದುಲ್ಲಾ ಅಲ್‌ ಮೊಹ್ಸಿನ್‌ ಚೌಧರಿ ಅವರಿಗೆ ಢಾಕಾದ ಸಂಯೋಜಿತ ಮಿಲಿಟರಿ ಆಸ್ಪತ್ರೆ (ಸಿಎಂಎಚ್‌) ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸೆಲೀನಾ ಹಕ್‌ ಹೇಳಿದ್ದಾರೆ.
ಮೇ 29ರಂದು ಚೌಧರಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬಳಿಕ‌ ಅವರನ್ನು ಢಾಕಾದ ಸಂಯೋಜಿತ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್‌ 6ರಂದು ಆರೋಗ್ಯ ‌ಸ್ಥಿತಿ ತೀವ್ರ ಹದೆಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ಜೂನ್‌ 18ರಂದು ವೆಂಟಿಲೇಟರ್‌ ಅನ್ನು ಅಳವಡಿಸಲಾಯಿತು ಎಂದು ಕಾರ್ಯದರ್ಶಿಯ ಆಡಳಿತಾಧಿಕಾರಿ ಭಸಾನಿ ಮಿರ್ಜಾ ತಿಳಿಸಿದ್ದಾರೆ.
2020ರ ಜನವರಿಯಲ್ಲಿ ಚೌಧರಿ ರಕ್ಷಣಾ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದರು. ಇಲ್ಲಿಯವರೆಗೆ ಬಾಂಗ್ಲಾ ದೇಶದಲ್ಲಿ ಒಟ್ಟು 1,37,787 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 1,738 ಸಾವು ಸಂಭವಿಸಿವೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This