ಢಾಕಾ: ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಾಗೂ ಸೇನೆಯ ವಿರುದ್ಧದ ಕಿತ್ತಾಟದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ (Sheikh Hasina) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಅವರು ಭಾರತದ ಮೂಲಕ ಇಂಗ್ಲೆಂಡ್ ಗೆ ತೆರಳಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ನೀಡಿದ ಕೂಡಲೇ ಸೇನಾ ಹೆಲಿಕಾಪ್ಟರ್ ನಲ್ಲಿ ಬಂಗಾಬಬಾನ್ ನಿಂದ ತಮ್ಮ ಕಿರಿಯ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಸುರಕ್ಷಿತ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಭಾರತದೊಂದಿಗೆ ಅವರ ಸಂಬಂಧ ಉತ್ತಮವಾಗಿದ್ದರಿಂದಾಗಿ ಇಲ್ಲಿಗೆ ಆಗಮಿಸಿ ನಂತರ ಲಂಡನ್‌ಗೆ (London) ತೆರಳಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ (Prime Minister) ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಕೂಡ ಎಚ್ಚರಿಕೆ ವಹಿಸಲಾಗಿದೆ. ಬಿಎಸ್‌ಎಫ್ ಭದ್ರತಾ ಪಡೆಯನ್ನು ನಿಯೋಜಿಸಲಾಗಿದ್ದು, ಬಿಎಸ್‌ಎಫ್ ಡಿಜಿ ಕೂಡ ಬಾಂಗ್ಲಾ ಗಡಿಗೆ ತಲುಪಿದ್ದಾರೆ ಎಂದು ಬಿಎಸ್‌ಎಫ್ ಪ್ರಕಟಣೆ ಹೇಳಿದೆ.
ರಾಜೀನಾಮೆ ಖಚಿತ ಪಡಿಸಿರುವ ಸೇನಾ ಮುಖ್ಯಸ್ಥರು, ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ. ದೇಶ ಕಳೆದುಕೊಂಡಿದ್ದ ಶಾಂತಿಯನ್ನು ಮರುಸ್ಥಾಪಿಸುತ್ತೇವೆ. ನಾನು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದೇನೆ. ಹಿಂಸೆ ನಿಲ್ಲಿಸುವಂತೆ ನಾಗರಿಕರಿಗೆ ಮನವರಿಕೆ ಮಾಡಿಕೊಡುತ್ತೇವೆ. ಎಲ್ಲಾ ಹತ್ಯೆಗಳ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಇನ್ಮುಂದೆ ದೇಶದಲ್ಲಿ ಕರ್ಫ್ಯೂ ಅಥವಾ ಯಾವುದೇ ತುರ್ತು ಪರಿಸ್ಥಿತಿಯ ಅಗತ್ಯವಿಲ್ಲ. ಬಿಕ್ಕಟ್ಟಿಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಬಾಂಗ್ಲಾದೇಶ ಸೇನಾ ಮುಖ್ಯಸ್ಥ ವಾಕರ್ ಉಜ್ ಝಮಾನ್ ಹೇಳಿದ್ದಾರೆ.