ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಯುದ್ಧ ಸಾರಿದ್ದಾರೆ. ಸ್ವಪಕ್ಷದ ನಾಯಕರನ್ನೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ಯೈ. ವಿಜಯೇಂದ್ರ ಅವರ ವಿರುದ್ಧ ಕೆಂಡ ಕಾರಿದ್ದಾರೆ.
ಪೇಡೆ ಹಂಚುವವರಿಗೆ ಯತ್ನಾಳ್ ಚಾಟಿ
ಬೇರೆ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದಾಗ ಇಲ್ಲಿನ ನಾಯಕರು ಸಂಭ್ರಮದಿಂದ ಪೇಡೆ ಹಂಚುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಬಿಜೆಪಿ ಸಾಧನೆಯೇನು ಎಂದು ಯತ್ನಾಳ್ ಖಾರವಾಗಿ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸಂಘಟನೆ ಸಂಪೂರ್ಣವಾಗಿ ಹಳಿ ತಪ್ಪಿದೆ. ಇಲ್ಲಿ ಎಲ್ಲವೂ ಗೊಡ್ಡಿಯಾಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಮಕ್ಕಳಾಗಲು ಸಾಧ್ಯವೇ? ಎಂದು ಮಾರ್ಮಿಕವಾಗಿ ವ್ಯಂಗ್ಯವಾಡಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ನಡೆದ ಪ್ರತಿಯೊಂದು ಚುನಾವಣೆಯಲ್ಲೂ ಪಕ್ಷ ಸೋಲನ್ನು ಕಂಡಿದೆ. ಕಳೆದ ಬಾರಿ 25 ಸಂಸದರಿದ್ದ ಸ್ಥಾನ ಈಗ ಕೇವಲ 17ಕ್ಕೆ ಕುಸಿದಿದೆ. ಇದೆಲ್ಲವೂ ಅವರ ಡೀಲಿಂಗ್ ರಾಜಕಾರಣದ ಪ್ರತಿಫಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಂದೆ ಮಕ್ಕಳ ವಿರುದ್ಧ ಬಹಿರಂಗ ಸಮರ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಅವರ ವಿರುದ್ಧ ಕಟು ಶಬ್ದಗಳಲ್ಲಿ ಟೀಕಿಸಿದ ಯತ್ನಾಳ್, ಈ ತಂದೆ ಮಕ್ಕಳು ಇರುವವರೆಗೂ ನಾನು ಬಿಜೆಪಿ ಕಚೇರಿಯ ಮೆಟ್ಟಿಲು ಹತ್ತುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಹೈಕಮಾಂಡ್ ಮುಂದೆ ತಾವು ದೊಡ್ಡ ಲಿಂಗಾಯತ ನಾಯಕರು ಎಂದು ಬಿಂಬಿಸಿಕೊಳ್ಳಲು ಯಡಿಯೂರಪ್ಪ ಅಭಿಮಾನೋತ್ಸವ ಎಂಬ ನಾಟಕವಾಡುತ್ತಿದ್ದಾರೆ. ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನದ ಅವಧಿ ಮುಗಿಯುತ್ತಾ ಬಂದಿದ್ದು, ಅದನ್ನು ಉಳಿಸಿಕೊಳ್ಳಲು ಈ ರಿನಿವಲ್ ತಂತ್ರ ಹೂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಸಾವಿರಾರು ಕೋಟಿ ಆಸ್ತಿ ಮಾಡಿದ್ದೀರಿ, ಸಮಾಜಕ್ಕೆ ನಿಮ್ಮ ಕೊಡುಗೆ ಏನು?
ಯಡಿಯೂರಪ್ಪ ಕುಟುಂಬದ ಆಸ್ತಿಪಾಸ್ತಿಗಳ ಬಗ್ಗೆ ನೇರವಾಗಿ ಪ್ರಶ್ನಿಸಿದ ಯತ್ನಾಳ್, ಹಿಂದೆ ಒಂದು ಕಾರು ಕೂಡ ಇಲ್ಲದವರು ಇಂದು ಸಾವಿರಾರು ಕೋಟಿ ರೂಪಾಯಿ ಗಳಿಸಿದ್ದಾರೆ. ನೀವು ಪ್ರದರ್ಶನಕ್ಕಿಟ್ಟಿರುವ ಹಳೆಯ ಅಂಬಾಸಿಡರ್ ಕಾರ್ ಕೂಡ ಬಿಜೆಪಿಯದ್ದು. ಇಷ್ಟೆಲ್ಲಾ ಸಂಪತ್ತು ಗಳಿಸಿದ ನೀವು ಸಮಾಜಕ್ಕೆ ನೀಡಿದ ವೈಯಕ್ತಿಕ ಕೊಡುಗೆ ಏನು? ಕೇವಲ ಅಧಿಕಾರ ಅನುಭವಿಸಿ ಹಣ ಮಾಡುವುದೇ ನಿಮ್ಮ ಗುರಿಯೇ ಎಂದು ಕಿಡಿಕಾರಿದ್ದಾರೆ.
ಡಿ.ಕೆ. ಶಿವಕುಮಾರ್ ಅಯೋಗ್ಯ ರಾಜಕಾರಣಿ
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಬಗ್ಗೆಯೂ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರನ್ನು ಅಯೋಗ್ಯ ಮತ್ತು ರಾಕ್ಷಸ ರಾಜಕಾರಣಿ ಎಂದು ಕರೆದಿದ್ದಾರೆ. ಅವರಿಗಿಂತ ಸಿದ್ದರಾಮಯ್ಯ ಎಷ್ಟೋ ಉತ್ತಮ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಪಕ್ಷದಲ್ಲಿ ಹಿಂದುತ್ವದ ವಿಚಾರಧಾರೆ ಇರುವವರು ನಾಯಕತ್ವ ವಹಿಸಿಕೊಂಡರೆ ಮಾತ್ರ ನಾನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ಅಲ್ಲಿಯವರೆಗೆ ಭ್ರಷ್ಟರ ಜೊತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.







