ಬೆಲೆ ಏರಿಕೆ | ಕೇಂದ್ರ ಸಚಿವರ ಜೊತೆ ಮಾತಾಡ್ತೀನಿ ಎಂದ ಬೊಮ್ಮಾಯಿ
ಧಾರವಾಡ : ದೇಶದಲ್ಲಿ ರಾಕೇಟ್ ವೇಗದಲ್ಲಿ ಬೆಲೆ ಏರಿಕೆ ಆಗುತ್ತಿದೆ. ಬಡವನ ಬದುಕು ಸದ್ಯ ಬರ್ಬಾದ್ ಆಗಿದ್ದು, ಅಸಹಾಯಕನಾಗಿ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಕಳೆದೊಂದು ವಾರದಲ್ಲಿ ಅಡುಗೆ ಅನಿಲ ಬೆಲೆ 50 ರೂಪಾಯಿ ಹೆಚ್ಚಾಗಿರುವುದು ಸೇರಿದಂತೆ ಜನರು ನಿತ್ಯ ಬಳಕೆ ವಸ್ತುಗಳ ಬೆಲೆ ಆಕಾಶ ಮುಟ್ಟುತ್ತಿವೆ. ಈ ವಿಚಾರವಾಗಿ ವಿಪಕ್ಷಗಳು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ಈ ಮಧ್ಯೆ ಬೆಲೆ ಏರಿಕೆ ವಿಚಾರವಾಗಿ ಧಾರವಾಡದಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾತಿ ಪ್ರತಿಕ್ರಿಯೆ ನೀಡಿದ್ದು, ಸಿಲೆಂಡರ್ ಗ್ಯಾಸ್ ಹಾಗೂ ತೈಲ ಬೆಲೆ ಏರಿಕೆಯೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರ್ಧಾರವಾಗುತ್ತೆ. ಇದರ ಬಗ್ಗೆ ಕಾಂಗ್ರೆಸ್ ಅವರಿಗೆ ಗೊತ್ತಿದೆ. ಹಿಂದೆ ಅವರು ಏನನ್ನು ಮಾಡಿದ್ದಾರೆ ಎಂದು ಅವರಿಗೆ ಗೊತ್ತಿದೆ. ಆಯಿಲ್ ಬಾಂಡ್ ವಿಚಾರ ಏನಾಗಿತ್ತು ಎಂದು ಕಾಂಗ್ರೆಸ್ ನಾಯಕರಿಗೂ ತಿಳಿದಿದೆ ಎಂದು ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ.
ಇದೇ ವೇಳೆ ಬೆಲೆ ಏರಿಕೆ ಬಗ್ಗೆ ಸೆಪ್ಟೆಂಬರ್ 5 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಜೊತೆ ಚರ್ಚೆ ಮಾಡುವೆ ಎಂದು ತಿಳಿಸಿದ್ದಾರೆ.