Basavaraja Bommai | ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ
ಬೆಂಗಳೂರು : ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ಎಡೆಯಿಲ್ಲ ಎಂಬ ನಿರ್ಣಯ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಪಿ.ಎಫ್.ಐ ಸಂಘಟನೆಯ ಬಹಳಷ್ಟು ಜನ ಪ್ರಮುಖರು ಗಡಿಯಾಚೆ ಹೋಗಿ ತರಬೇತಿ ಪಡೆದವರಿದ್ದಾರೆ.
ಅವರು ಅಲ್ಲಿಂದಲೇ ಕಾರ್ಯಾಚರಣೆ ಮಾಡುತ್ತಿದ್ದು, ಸಂಸ್ಥೆ ಹಲವಾರು ವರ್ಷ, ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದೆ.
ಕರ್ನಾಟಕದಾದ್ಯಂತ ವಿಧ್ವಂಸಕ ಕೃತ್ಯಗಳನ್ನು ನಡೆಸಿರುವುದು ಜಗ ಜ್ಜಾಹೀರಾಗಿದೆ.
ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಎಲ್ಲಾ ರಾಜ್ಯಗಳ ಜನ ಒಕ್ಕೊರಲಿನಿಂದ ಬೇಡಿಕೆ ಇಟ್ಟಿದ್ದಾರೆ.
ವಿರೋಧ ಪಕ್ಷದವರೂ, ಸಿಪಿಐ, ಕಾಂಗ್ರೆಸ್, ಸಿ.ಪಿ.ಎಂ ಎಲ್ಲರೂ ಕೂಡ ಪಿ.ಎಫ್.ಐ ನಿಷೇಧಿಸಬೇಕೆಂದು ಬೇಡಿಕೆ ಇಟ್ಟಿದ್ದರು.
ನಿಷೇಧಿತ ಸಂಸ್ಥೆಗಳೊಂದಿಗೆ ಯಾರೂ ಸಂಪರ್ಕ ಅಥವಾ ನಂಟನ್ನು ಇಟ್ಟುಕೊಳ್ಳಬಾರದು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.