BBMP : ಎರಡನೇ ಮದುವೆಯಾದರೇ ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದ ಬಿಬಿಎಂಪಿ…
ಬಹಳ ವರ್ಷಗಳ ನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗುತ್ತಿದೆ. 3,673 ಹುದ್ದೆಗಳಿಗೆ ನೇಮಕಾತಿ ಮಾಡಲು ಮುಂದಾಗಿದೆ. ಇವುಗಳಲ್ಲಿ 430 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಡಲಾಗಿದೆ, ಉಳಿದ 3,243 ಹುದ್ದೆಗಳು ರಾಜ್ಯದ ವಿವಿಧ ಭಾಗಗಳ ಅಭ್ಯರ್ಥಿಗಳಿಗೆ ಮುಕ್ತವಾಗಿವೆ.
ನೇಮಕಾತಿ ಪ್ರಕ್ರಿಯೆಯ ಭಾಗವಾಗಿ, BBMP ಅರ್ಜಿದಾರರಿಗೆ ಕೆಲವು ಹೊಸ ನಿಯಮಗಳನ್ನು ಪರಿಚಯಿಸಿದೆ. ಅರ್ಜಿದಾರರು ಎರಡು ಬಾರಿ ಮದುವೆಯಾಗಿದ್ದರೆ, ಅವರನ್ನು ನೇಮಕಾತಿ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುತ್ತದೆ.
ಪಾಲಿಕೆ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಮಾತನಾಡಿ, “ ಪೌರಕಾರ್ಮಿಕರ ನೇಮಕಾತಿಯಲ್ಲಿ ಹಲವು ಷರತ್ತುಗಳನ್ನ ಹಾಕಲಾಗಿದೆ. ಅರ್ಜಿದಾರರು ಗುತ್ತಿಗೆ ಆಧಾರದ ಮೇಲೆ ಕನಿಷ್ಠ 2 ವರ್ಷಗಳ ಕಾಲ ಪೌರ ಕಾರ್ಮಿಕರಾಗಿ ಕೆಲಸ ಮಾಡಿರಬೇಕು. ಅಭ್ಯರ್ಥಿಯ ವಯಸ್ಸು 23 ರಿಂದ 55 ವರ್ಷಗಳ ನಡುವೆ ಇರಬೇಕು. ಅಲ್ಲದೆ, ಪ್ರತಿ ಅಭ್ಯರ್ಥಿಯು ಸಂಬಂಧಪಟ್ಟ ಆಸ್ಪತ್ರೆ ಅಥವಾ ಪ್ರಾಧಿಕಾರದಿಂದ ದೈಹಿಕ ಸಾಮರ್ಥ್ಯ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಕನ್ನಡ ಮಾತನಾಡಬಲ್ಲವರು ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಅರ್ಜಿ ಸಲ್ಲಿಸುವ ಪುರುಷ ಪೌರಕಾರ್ಮಿಕರು ಇಬ್ಬರು ಹೆಂಡತಿಯರನ್ನು ಹೊಂದಿರಬಾರದು ಅಲ್ಲದೆ, ಕ್ರಿಮಿನಲ್ ಪ್ರಕರಣದ ಹಿನ್ನೆಲೆ ಹೊಂದಿರುವವರು ಅಥವಾ ಸೇವೆಯಿಂದ ವಜಾಗೊಳಿಸಲ್ಪಟ್ಟವರು ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ” ಎಂದು ತಿಳಿಸಿದ್ದಾರೆ.
ಆದರೇ ಈ ಕುರಿತು ಪೌರಕಾರ್ಮಿಕ ಫೆಡರೇಷನ್ ಅಧ್ಯಕ್ಷ ಬಾಬು ಅಸಮಧಾನ ವ್ಯಕ್ತಪಡಿಸಿದ್ದಾರೆ. ‘ಎರಡನೇ ಮದುವೆ ಮಾಡಿಕೊಂಡರೆ ತಪ್ಪೇನು? ಅವನು ಅಥವಾ ಅವಳು ಚಿಕ್ಕ ವಯಸ್ಸಿನಲ್ಲಿ ತಮ್ಮ ಸಂಗಾತಿಯನ್ನು ಕಳೆದುಕೊಂಡರೆ, ಅವರು ಏನು ಮಾಡುತ್ತಾರೆ? ಇದು ಪಾಲಿಕೆ ತೆಗೆದುಕೊಂಡ ತಪ್ಪು ನಿರ್ಧಾರ. ಒಬ್ಬ ವ್ಯಕ್ತಿಯು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ಎರಡನೇ ಬಾರಿಗೆ ಮದುವೆಯಾದರೆ, ಅದನ್ನು ಆಕ್ಷೇಪಿಸಬಹುದು. ಬಿಬಿಎಂಪಿ ವ್ಯಾಪ್ತಿಯಲ್ಲಿ 18,000 ಮಂದಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಕಳೆದ ಬಾರಿ ಅವರ ಕೆಲಸವನ್ನು ಕಾಯಂಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. “ಬಿಬಿಎಂಪಿ ಹೊಸ ನೀತಿಯ ಪ್ರಕಾರ ಜನ ಉದ್ಯೋಗ ಕಳೆದುಕೊಂಡರೆ ಏನು ಮಾಡುತ್ತಾರೆ. ಕಥೆ ಏನು ? ಎಂದು ಪ್ರಶ್ನೆ ಮಾಡಿದ್ದಾರೆ.
BBMP: BBMP says that you cannot apply for civil service post after second marriage.