ಮಂಡ್ಯ: ನನ್ನ ಹುಟ್ಟುಹಬ್ಬ ಆಚರಿಸಲು ರೈತರಿಗೊಂದು ದಿನ ಆರಂಭಿಸಿಲ್ಲ. ರೈತರ ಶಕ್ತಿಗಾಗಿ ರೈತರ ದಿನ ಆರಂಭಿಸಿದ್ದೇನೆ. ರೈತರ ಕಷ್ಟನಷ್ಟ ಅರಿಯಲು ಅನುಭವ ಅರಿಯಲು ಸಮಸ್ಯೆಗೆ ಪರಿಹಾರ ಏನೆಂಬುದನ್ನು ಅರಿಯಲು ಮಂಡ್ಯಕ್ಕೆ ಬಂದಿದ್ದೇನೆ. ರೈತರ ಶಕ್ತಿಯಾಗಲು ಬಯಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಮಂಡ್ಯದ ಮಡುವಿನ ಕೋಡಿಯಲ್ಲಿ ಧಾನ್ಯದ ರಾಶಿಗೆ ಪೂಜೆ ನೆರವೇರಿಸುವ ಮೂಲಕ “ರೈತರೊಂದಿಗೊಂದು ದಿನ” ವೇದಿಕೆ ಉದ್ಘಾಟಿಸಿ ಮಾತನಾಡಿದ ಬಿ.ಸಿ ಪಾಟೀಲ್, ಸರ್ಕಾರ ರೈತರ ಮನೆಗೆ ಬರಬೇಕೇ ವಿನಃ, ರೈತ ಸರ್ಕಾರದ ಹತ್ತಿರ ಹೋಗಿಲ್ಲ. ಟ್ರ್ಯಾಕ್ಟರ್ ಚಲಾವಣೆ ಮಾಡಿ, ಬಿತ್ತನೆ ಮಾಡಿ ಕೆಸರಿನಲ್ಲಿ ಕಾಲಿಟ್ಟಿದ್ದೇವೆ. ಇದು ಯಾರೂ ಮಾಡುವುದಿಲ್ಲ ಎಂದಲ್ಲ. ಇತರರಿಗೂ ಕೃಷಿಗೆ ಸ್ಫೂರ್ತಿಯಾಗಲಿ ಎಂಬ ಉದ್ದೇಶವಿದೆ ಎಂದರು.
ಇನ್ನೊಬ್ಬರಿಗೆ ಗುಲಾಮರಾಗಿ ಹೋಗುವುದಕ್ಕಿಂತ ಕೃಷಿ ಭೂಮಿಯಿದ್ದಾಗ ಹೊಲದಲ್ಲಿ ಒಡೆಯನಾಗಿ ದುಡಿಯುವುದೇ ಪುಣ್ಯ. ಕೋವಿಡ್ ಸಾಕಷ್ಟು ಪಾಠ ಕಲಿಸಿದೆ, ಯುವಕರ ಉತ್ಸಾಹ ಕೃಷಿ ಉದ್ಯಮ ರೈತೋದ್ಯಮವಾಗಬೇಕು. ಸಮಗ್ರ ಕೃಷಿಯತ್ತ ಆಹಾರ ಸಂಸ್ಕರಣೆಯಾಗಬೇಕು. ಆತ್ಮನಿರ್ಭರ್ ಯೋಜನೆಯಡಿ ಅನುದಾನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಘಗಳು ಆಹಾರ ಸಂಸ್ಕರಣಾ ಘಟಕ ಮಾಡಿದರೆ, ಅವುಗಳಿಗೆ ಸರ್ಕಾರ ಅನುದಾನದ ಸಹಕಾರ ನೀಡುತ್ತದೆ. ಮಧ್ಯವರ್ತಿಗಳನ್ನು ಬಿಟ್ಟು ರೈತ ಯುವಕರು ನೇರ ಮಾರ್ಕೆಟಿಂಗ್ ಮಾಡಬೇಕು. ಬರೀ ಬೆಳೆ ಬೆಳೆದರೆ ಸಾಲದು.ನಮ್ಮ ಬೆಳೆಗೆ ನಾವೇ ಮಾರ್ಕೆಟಿಂಗ್ ಮಾಡಬೇಕು ಎಂದು ಬಿ.ಸಿ ಪಾಟೀಲ್ ಸಲಹೆ ನೀಡಿದರು.
ಮಂಡ್ಯದಲ್ಲಿ ನೀರಾವರಿ ಇದೆ. ಬರೀ ಕಬ್ಬು ಭತ್ತವನ್ನೇ ನೆಚ್ಚಿಕೊಂಡರೆ ಸಾಲದು. ಸಮಗ್ರ ಕೃಷಿಯತ್ತ ಮಂಡ್ಯದ ರೈತರು ಮುಂದಾಗಬೇಕು. ಭತ್ತದ ಜೊತೆ ಇತರೆ ಕೃಷಿಯನ್ನು ಮಾಡಬೇಕು. ಮಿಶ್ರಬೆಳೆ ಬೆಳೆಯಬೇಕು. ನೀರೇ ಬರದ ಕೋಲಾರದಲ್ಲಿ ಸಮಗ್ರ ಕೃಷಿ ಅಳವಡಿಸಿ ನೇರ ಮಾರ್ಕೆಟಿಂಗ್ ಮಾಡಿ ನಾವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. ಅದರಂತೆ ಮಂಡ್ಯದವರು ಆತ್ಮವಿಶ್ವಾಸಿಗಳಾಗಬೇಕು. ವಾಣಿಜ್ಯ ಬೆಳೆ, ಸಾವಯವ ಬೆಳೆ, ದ್ವಿದಳ ಧಾನ್ಯ ಸಮಗ್ರ ಕೃಷಿಯನ್ನು ಮಂಡ್ಯ ರೈತರು ಮಾಡಲಿ ಎಂದು ಬಿ.ಸಿ.ಪಾಟೀಲ್ ರೈತರಿಗೆ ಕಿವಿಮಾತು ಹೇಳಿದರು.
ನನ್ನ ಜನ್ಮದಿನವನ್ನು ರೈತರೊಂದಿಗೆ ಕಳೆಯಬೇಕೆಂದು ತೀರ್ಮಾನಿಸಿ ರೈತರೊಂದಿಗೊಂದು ದಿನ ಆರಂಭಿಸಿದೆ. ಯಾವ ಜನ್ಮದ ಪುಣ್ಯವೋ, ಕೆ.ಆರ್.ಪೇಟೆಯಲ್ಲಿ ಸಾಕಷ್ಟು ಪ್ರೀತಿ ಸಿಕ್ಕಿದೆ. ಮಂಡ್ಯ ಜನರ ಪ್ರೀತಿ ಮರೆಯಲು ಸಾಧ್ಯವೇ ಇಲ್ಲ ಎಂದು ಸಂತಸ ವ್ತಕ್ತಪಡಿಸಿದರು.
ನನಗೂ ಮಂಡ್ಯಕ್ಕೂ ಅವಿನಾಭಾವ ನಂಟಿದೆ. 1999ರಲ್ಲಿ ಬಂದ ಕೌರವ ಚಿತ್ರ ಮಂಡ್ಯದಿಂದ ಆರಂಭವಾಗಿತ್ತು. ಯಡಿಯೂರಪ್ಪ ಹುಟ್ಟಿದ ತಾಲೂಕು ಕೆ.ಆರ್.ಪೇಟೆ. ಯಡಿಯೂರಪ್ಪ ಅವರ ಕನಸನ್ನು ನನಸು ಮಾಡಲು ನಾನು ನಾರಾಯಣಗೌಡ ಪ್ರಯತ್ನಿಸಿ ದುಡಿಯುತ್ತಿದ್ದೇವೆ ಎಂದರು.
ಬೇರೆ ಉದ್ಯಮಗಳಂತೆ ರೈತ ವರ್ಕ್ ಫ್ರಮ್ ಹೋಮ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಲಾಕ್‍ಡೌನ್ ಸಂಕಷ್ಟದಲ್ಲಿ ರೈತನ ಸಂಕಷ್ಟವನ್ನು ಅರಿತು ನನ್ನೊಂದಿಗೆ ನಾರಾಯಣಗೌಡ ಶ್ರಮಿಸಿದ್ದಾರೆ. ಕೃಷಿ ಎಲ್ಲಾ ಕ್ಷೇತ್ರಗಳಿಗಿಂತಲೂ ಹೆಚ್ಚು ಪ್ರಮುಖವಾಗಿದೆ. ಎಂದಿಗೂ ನಿಲ್ಲಿಸದ ಕಾಯಕ ಕೃಷಿ. ಲಾಕ್‍ಡೌನ್ ವೇಳೆ ಕೃಷಿಕರಿಗೆ ನಿಬರ್ಂಧ ಹಾಕಿದ್ದರೆ ಇಂದಿಗೆ ತಿನ್ನಲು ಅನ್ನ ಸಿಗುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರ ಬಿತ್ತನೆ ಹೆಚ್ಚಾಗಿದೆ. ಯಡಿಯೂರಪ್ಪ ಕಾಲ್ಗುಣದಿಂದ ಹೆಚ್ಚು ಮಳೆಯಾಗಿದೆ. ಈ ಬಾರಿ ಶೇ.106ಕ್ಕೂ ಹೆಚ್ಷು ಬಿತ್ತನೆಯಾಗಿದೆ ಎಂದು ಬಿ.ಸಿ.ಪಾಟೀಲ್ ವಿವರ ನೀಡಿದರು.
ಕಿತ್ತೂರು ರಾಣಿ ಚೆನ್ನಮ್ಮನಂತೆ ರೈತ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಸ್ಫೂರ್ತಿಯಾಗಬೇಕು.ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಬೇಕು. ರಾಜ್ಯದಲ್ಲಿ ಸದ್ಯ ಒಟ್ಟು 242 ಮಣ್ಣಿನ ಪರೀಕ್ಷಾ ಕೇಂದ್ರಳಿವೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗೊಂದು ಮಣ್ಣು ಪರೀಕ್ಷಾ ಕೇಂದ್ರ ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದರು.
ಯಾವುದೇ ಸಾಫ್ಟವೇರ್ ಆಗಲೀ ಅಥವಾ ನಗರದಲ್ಲಿ ಇರುವವರಾಗಲೀ ವೀಕೆಂಡ್ ಅಗ್ರಿಕಲ್ಚರ್ ಫ್ಯಾಷನ್ ಆರಂಭಿಸಿ. ಕೃಷಿಯತ್ತ ಆಕರ್ಷಕ ಹವ್ಯಾಸ ಮೂಡಿಸಿಕೊಳ್ಳಬೇಕೆಂದರು. ವೈಜ್ಞಾನಿಕ ಪದ್ಧತಿ, ತಂತ್ರಜ್ಞಾನ ಅಳವಡಿಸಿ ಹನಿ ನೀರಾವರಿ ಸಮಗ್ರ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಎಲ್ಲರೂ ಜೈ ಕಿಸಾನ್ ಎನ್ನುವಂತಾಗಲಿ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಹೋಬಳಿಯಲ್ಲಿ ರೈತರಿಗೊಂದು ದಿನ
ರೈತರೊಂದಿಗೊಂದು ದಿನ ನನ್ನ ಮತಕ್ಷೇತ್ರ ಕೆ.ಆರ್.ಪೇಟೆಯಿಂದಲೇ ಕೃಷಿ ಸಚಿವರು ಆರಂಭಿಸಿರುವುದು ಖುಷಿಯ ವಿಚಾರ. ಬಿ.ಸಿ.ಪಾಟೀಲರು ಸದಾ ಮೆಚ್ಚುವಂತಹ ತೀರ್ಮಾನವನ್ನೇ ಕೈಗೊಳ್ಳುತ್ತಾರೆ ಎಂದು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಪ್ರಗತಿಪರ ರೈತ ಮಹಿಳೆ ಲಕ್ಷ್ಮಿದೇವಮ್ಮ ಜಿಲ್ಲೆಯಲ್ಲಿ ಸಮಗ್ರ ಕೃಷಿ ಮಾಡಿ ಮಾದರಿಯಾಗಿದ್ದಾರೆ. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳು ಸಿಕ್ಕೇ ಸಿಗಲಿವೆ. ಆದರೆ ಅದನ್ನೇ ನೆಚ್ಚಿಕೊಂಡು ಪ್ರಯತ್ನ ಮಾಡುವುದನ್ನು ಬಿಡಬಾರದು. ಲಾಕ್‍ಡೌನ್ ಸಂದರ್ಭದಲ್ಲಿ ತರಕಾರಿ ಮಾರಾಟ ಸಾಗಾಣೆಗೆ ತೊಂದರೆಯಾಗದಂತೆ ನೋಡಿಕೊಂಡೆ. ತರಕಾರಿ ರಫ್ತು ಬರೀ ಎಂಟು ತಿಂಗಳಿನಲ್ಲಿ ಶೇ.2.5 ರಿಂದ 5.5ಕ್ಕೆ ಏರಿದೆ.
ಬಿ.ಸಿ ಪಾಟೀಲ್ ಅವರು ಲಾಕ್‍ಡೌನ್ ಸಂದರ್ಭದಲ್ಲಿ ದುಡಿದು ಸರ್ಕಾರಕ್ಕೆ ರೈತರಿಗೆ ಶಕ್ತಿತಂದಿದ್ದಾರೆ. ನಮ್ಮದು ಮಳೆ ಬಿಸಿಲಿನ ಕೆಲಸ. ಅಧಿಕಾರಿಗಳು ಬಹಳ ಉತ್ಸುಕರಾಗಿ ಕೆಲಸ ಮಾಡುತ್ತಿರುವುದು ಮೆಚ್ಚುಗೆ ವಿಷಯ. ತೋಟಗಾರಿಕೆ ಮತ್ತು ಕೃಷಿ ಅಣ್ಣ-ತಮ್ಮ ಇಲಾಖೆಗಳಿದ್ದಂತೆ. ಮುಖ್ಯಮಂತ್ರಿಗಳ ಹೋಬಳಿಯಲ್ಲಿ ರೈತರಿಗೊಂದು ದಿನ ಕಾರ್ಯಕ್ರಮ ಮಾಡಿದ್ದು ಸಂತಸ ತಂದಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ರೈತರು ಹಾಗೂ ಕುಟುಂಬಸ್ಥರೊಡನೆ ಕೇಕ್ ಕತ್ತರಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ 65ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಕೃಷಿ ಸಾಧಕಿ ವಿತಾ ಮಿಶ್ರಾ ಅವರನ್ನು ಸನ್ಮಾನಿಸಲಾಯಿತು. ಕೃಷಿ ನಿರ್ದೇಶಕ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.
ಶಾಸಕ ಶ್ರೀನಿವಾಸ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ರಾಜೇಂದ್ರ ಪ್ರಸಾದ್, ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್, ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್, ತೋಟಗಾರಿಕಾ ನಿರ್ದೇಶಕ ವೆಂಕಟೇಶ್, ರಾಜ್ಯದ ಎಲ್ಲಾ ಜಂಟಿ ನಿರ್ದೇಶಕರು ಜಿ.ಪಂ.ಅಧ್ಯಕ್ಷೆ ನಾಗರತ್ನ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel