ರೈತರ ಜೊತೆ ಸರ್ಕಾರವಿದೆ ಎಂಬ ಧೈರ್ಯ ತುಂಬಿ : ಬಿ.ಸಿ.ಪಾಟೀಲ್
ಬೆಂಗಳೂರು : ಕ್ಷೇತ್ರಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸುವಾಗ ರೈತರೊಂದಿಗೆ ಸರ್ಕಾರವಿದೆ, ಕೃಷಿ ಇಲಾಖೆಯಿದೆ ಎಂಬ ಭಾವನೆಯನ್ನು ಮೂಡಿಸಿ ರೈತರಲ್ಲಿ ಆತ್ಮಸ್ಥೈರ್ಯ ಗಟ್ಟಿಗೊಳಿಸಲು ಅಧಿಕಾರಿಗಳು ಮುಂದಾಗಬೇಕೆಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲರು ಕರೆ ನೀಡಿದ್ದಾರೆ.
ಇತ್ತೀಚೆಗೆ ಅಕಾಲಿಕ ಸುರಿದ ಮಳೆಯಿಂದ ನಷ್ಟವಾದ ರೈತರ ಬೆಳೆ ಬಗ್ಗೆ ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ನಡೆಸುವ ನಿಟ್ಟಿನಲ್ಲಿ ಕೃಷಿ ಸಚಿವರಿಂದು ಕೃಷಿ ಇಲಾಖೆಯ ಸಮ್ಮೇಳನ ಸಭಾಂಗಣದಲ್ಲಿ ಕೃಷಿ ಇಲಾಖಾ ಕೇಂದ್ರ ಕಚೇರಿ ಅಧಿಕಾರಿಗಳೊಂದಿಗೆ ಜಿಲ್ಲೆಯ ಕೃಷಿ ಅಧಿಕಾರಿಗಳ ವಿಡಿಯೋ ಸಂವಾದ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು.
ಬೆಳೆ ನಷ್ಟದ ಸಮೀಕ್ಷೆ ನಡೆಸಿದ ದಿನವೇ ಬೆಳೆ ಪರಿಹಾರ ಆಪ್ ನಲ್ಲಿ ವಿವರಗಳನ್ನು ನೋಂದಾಯಿಸಬೇಕು.ಜಿಲ್ಲಾಧಿಕಾರಿಗಳ ಜೊತೆ ಬೆಳೆ ವಿಮಾ ಕಂಪನಿಗಳ ಸಭೆ ಮಾಡಿ ಬೆಳೆ ವಿಮೆ ನೋಂದಾಯಿಸಿದ ರೈತರಿಗೆ ವಿಮಾ ಕಂಪನಿ ಆದಷ್ಟು ಬೇಗ ಪರಿಹಾರ ಧನ ಮಂಜೂರು ಮಾಡಿಸುವಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.ಎಲ್ಲಕ್ಕಿಂತಲೂ ಪ್ರಮುಖವಾಗಿ ಅಕಾಲಿಕ ಮಳೆಯಿಂದ ಬೆಳೆ ನಷ್ಟದಿಂದ ನೊಂದಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಿ ಸರ್ಕಾರ ರೈತರ ಬೆನ್ನಿಗಿದೆ ಎಂಬ ಧೈರ್ಯ ನೀಡಬೇಕು ಎಂದು ಸೂಚಿಸಿದರು.
ರೈತರಿಗೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೀಡುತ್ತಿರುವ ಇನ್ಪುಟ್ ಸಬ್ಸಿಡಿ ಬಗ್ಗೆ ಮಾಧ್ಯಮಗಳ ಮೂಲಕ ರೈತರಿಗೆ ಅಧಿಕಾರಿಗಳು ಪ್ರಚುರ ಪಡಿಸಬೇಕು. ಹಿಂಗಾರು ಹಂಗಾಮಿಗೆ ಎಲ್ಲಿಯೂ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸುವವರ ಮೇಲೆ ನಿಗಾ ವಹಿಸಬೇಕು. ಡಿಎಪಿ ರಸಗೊಬ್ಬರಕ್ಕೆ ರೈತರು ಹೆಚ್ಚಿನ ಅವಲಂಬಿತರಾಗದೇ ಕಾಂಪ್ಲೆಕ್ಸ್ ಗೊಬ್ಬರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕೃಷಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಬಿ.ಸಿ.ಪಾಟೀಲ್ ಹೇಳಿದರು.