ಐಪಿಎಲ್ 2020 – ಕೋವಿಡ್ ಟೆಸ್ಟ್ ಗೆ ಬಿಸಿಸಿಐ ಭರಿಸುವ ವೆಚ್ಚ ಬರೋಬ್ಬರಿ 10 ಕೋಟಿ ರೂ.
ಕೋವಿಡ್ ಸೋಂಕಿನ ನಡುವೆಯೂ ಇಷ್ಟಪಟ್ಟು… ಕಷ್ಟ ಪಟ್ಟು.. ಕಠಿಣ ಸವಾಲನ್ನು ಎದುರು ಹಾಕೊಂಡು ಬಿಸಿಸಿಐ ಯುಎಇ ನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದೆ. ಡ್ರೀಮ್ ಇಲೆವೆನ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಬಿಸಿಸಿಐಗೆ ಇಲ್ಲಿ ದುಡ್ಡಿಗಿಂತ ಪ್ರತಿಷ್ಠೆಯೇ ಮುಖ್ಯವಾಗಿದೆ. ಕೊರೋನಾ ಸೋಂಕಿನ ಆತಂಕದ ನಡುವೆಯೂ ಐಪಿಎಲ್ ಟೂರ್ನಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಆಟಗಾರರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಜೈವಿಕ ಸುರಕ್ಷತೆ ಹಾಗೂ ಕೋವಿಡ್ ಮಾರ್ಗಸೂಚಿಗಳ ಪ್ರಕಾರವೇ ನಡೆಸುತ್ತಿದೆ.
ಅಂದ ಹಾಗೇ ಬಿಸಿಸಿಐಗೆ ಈ ಬಾರಿಯ ಐಪಿಎಲ್ ಟೂರ್ನಿಯ ವೆಚ್ಚ ಜಾಸ್ತಿಯಾಗಲಿದೆ. ಟೂರ್ನಿಯ ಆಯೋಜನೆಯ ಹೊರತಾಗಿ ಬಿಸಿಸಿಐ ಕೋವಿಡ್ -19 ಸೋಂಕು ಪರೀಕ್ಷೆಗೆ ಪ್ರತ್ಯೇಕ ಹಣವನ್ನು ಮೀಸಲಿಡಬೇಕಾಗಿದೆ. ಮೂಲಗಳ ಪ್ರಕಾರ ಬಿಸಿಸಿಐ ಈ ಬಾರಿಯ ಐಪಿಎಲ್ ನಲ್ಲಿ 20,000ಕ್ಕೂ ಹೆಚ್ಚು ಕೋವಿಡ್ ಟೆಸ್ಟ್ ಗಳನ್ನು ನಡೆಸಲಿದೆ. ಇದಕ್ಕಾಗಿ ಸರಿ ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚ ಮಾಡಲಿದೆ.
ಎಂಟು ಫ್ರಾಂಚೈಸಿಗಳು ಯುಎಇಗೆ ಆಗಮಿಸುತ್ತಿದ್ದಂತೆ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಹಾಗೇ 53 ದಿನಗಳ ಕಾಲ ಎಂಟೂ ಫ್ರಾಂಚೈಸಿಗಳಿಗೂ ಕೋವಿಡ್ ಟೆಸ್ಟ್ ಮಾರ್ಗಸೂಚಿಗಳ ಪ್ರಕಾರ ನಡೆಯಲಿದೆ. ಯುಎಇನ ವಿಪಿಎಸ್ ಕಂಪೆನಿಯ ಜೊತೆಗೆ ಒಪ್ಪಂದ ಕೂಡ ಬಿಸಿಸಿಐ ಮಾಡಿಕೊಂಡಿದೆ. 75 ಹೆಲ್ತ್ ಕೇರ್ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಟೆಸ್ಟ್ಗೆ 200 ದಿರ್ಹಾಮ್ ಖರ್ಚು ಮಾಡಲಿದೆ.
ಇಲ್ಲಿ ಬಿಸಿಸಿಐ ಯಾವುದೇ ರಿಸ್ಕ್ ತೆಗೆದುಕೊಳ್ಳುವ ಮುಂದಾಗುತ್ತಿಲ್ಲ. ಹೊಟೇಲ್ ಗಳಿಗೂ ಪ್ರತ್ಯೇಕ ಜೈವಿಕ ಸುರಕ್ಷತೆಯನ್ನು ಅಳವಡಿಸಲಾಗಿದೆ. ಸುಮಾರು 50 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, 25 ಸಿಬ್ಬಂದಿಗಳು ಲ್ಯಾಬ್ಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಆಗಸ್ಟ್ 20ರಿಂದ 28ರವರೆಗೆ 1988 ಕೋವಿಡ್ ಟೆಸ್ಟ್ ಗಳನ್ನು ಮಾಡಲಿದೆ. ಇದರಲ್ಲಿ ಸಿಎಸ್ಕೆ ತಂಡದ 13 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಈಗಾಗಲೇ ಇವರೆಲ್ಲಾ ಕ್ವಾರಂಟೈನ್ನಲ್ಲಿದ್ದು, ನೆಗೆಟಿವ್ ವರದಿ ಬಂದ ನಂತರವೇ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸೆಪ್ಟಂಬರ್ 3ರಂದು ಸಿಎಸ್ಕೆ ಆಟಗಾರರಿಗೆ ಕೋವಿಡ್ ಟೆಸ್ಟ್ ನಡೆಯಲಿದ್ದು, ಅಲ್ಲಿ ನೆಗೆಟಿವ್ ಬಂದ ನಂತರ ಅವರು ತರಬೇತಿ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ.