ಯಾಕಂದರೆ ಪ್ರೀತಿ ಅನ್ನುವುದು ಹಾಗೆಯೇ, ಅದರ ಮಿತಿ ಅಮಿತ; ಅದರ ವ್ಯಾಖ್ಯಾನಗಳೂ ಸಹ..

1 min read
saakshatv

ಯಾಕಂದರೆ ಪ್ರೀತಿ ಅನ್ನುವುದು ಹಾಗೆಯೇ, ಅದರ ಮಿತಿ ಅಮಿತ;
ಅದರ ವ್ಯಾಖ್ಯಾನಗಳೂ ಸಹ..

saakshatvಅದೊಂದು ಸುಂದರ ಭಾನುವಾರ ಬೆಂಗಳೂರಿನ ಬೀದಿಗಳು ಮಂಜಿನಿಂದ ತೊಳೆದು ನಿಂತಿತ್ತು, ಅವತ್ತು ಅವನು ಅವಳನ್ನು ಮೊದಲ ಬಾರಿಗೆ ಕಂಡಿದ್ದ. ಅವತ್ತು ಕಬ್ಬನ್‌ ಪಾರ್ಕಿನೊಳಗೆ ಸಿರಿವಂತರ ಮುಂಜಾನೆಯ ವಾಕಿಂಗ್‌ ಸಂಭ್ರಮ ನಡೆಯುತ್ತಿತ್ತು. ಮಹಾತ್ಮ ಕಬ್ಬನ್‌ನ ಪ್ರತಿಮೆಯ ಆಸುಪಾಸು ಪಾರ್ಕಿಂಗ್‌ ಸ್ಥಳ ತರಹೇವಾರಿ ಐಶರಾಮಿ ಕಾರುಗಳಿಂದ ತುಂಬಿಹೋಗಿತ್ತು. ಅಲ್ಲಿ ಪಾರ್ಕಿಂಗ್‌ ಸ್ಥಳದ ಕಲ್ಲು ಬೆಂಚಿನ ಮೇಲೆ ಕೂತಿದ್ದಳು ಅವಳು; ಅವನಿಂದ ಆಜಮಾಸು 100 ಮೀಟರ್‌ ದೂರದಲ್ಲಿ. ಮೊದಲ ಬಾರಿಗೆ ಕಣ್ಣುಗಳು ಸಂಧಿಸಿದಾಗಲೇ ಅವರಿಬ್ಬರ ಅಂತರಂಗದಲ್ಲಿ ಅನೂಹ್ಯವಾದ ಒಂದು
ಒಡಂಬಡಿಯಾಗಿ ಹೋಗಿತ್ತೇನೋ, ಅವಳು ಅವನ ಚಾಯ್‌ ದುಖಾನಿಗೆ ಬಂದಿದ್ದಳು. ಅವರಿಬ್ಬರ ನಡುವೆ ನಡೆದ ಸಂವಹನದ ಮಾಧ್ಯಮಕ್ಕೇನು ಹೆಸರು? ಟೆಲಿಪಥಿಯಾ! ಮೈಟ್‌ ಬೀ. ಅದಾಗಿ ಒಂದು ತಿಂಗಳ ನಂತರ ಅವರು ಹೊಸ ಮನೆ ಪ್ರವೇಶಿಸಿದ್ದರು; ನರಸಿಂಹರಾಜ ಕಾಲೋನಿಯ ಕರ್ಮಠ ಬ್ರಾಹ್ಮಣ ವಠಾರದ ನಡುವೆ ವೃದ್ಧ ದಂಪತಿಗಳ ಮನೆಯ ಮೇಲಿನ ಒಂಟಿ ಬೆಡ್‌ರೂಂ ಕೋಣೆಯ ಮನೆಗೆ.

ಮೊದಲ ಕೆಲವು ತಿಂಗಳುಗಳು ಕಾಲ ಅವರಿಬ್ಬರು ಅಸಲಿಗೆ ಮನಸು ಬಿಚ್ಚಿ ಮಾತಾಡೇ ಇರಲಿಲ್ಲ. ಬೆಂಗಳೂರಿನಲ್ಲಿ ಆಗ ಅದ್ಭುತ ಚಳಿಯಿದ್ದ ದಿವ್ಯ ದಿನಗಳವು. ಬೆಳಿಗ್ಗೆ 4ಕ್ಕೆ ಅವಳು ಏದ್ದು ಅವನನ್ನು ಎಬ್ಬಿಸುತ್ತಿದ್ದಳು. ಅವನು ಮುಖತೊಳೆದು ಬರುವಷ್ಟರಲ್ಲಿ ಒಂದು ಕಪ್‌ ಅದ್ಭುತ ಘಮದ ಕಾಫಿ ಕಾಯಿಸಿ ಕಪ್‌ನಲ್ಲಿ ತುಂಬಿಸಿ ಟೆರೇಸಿನಲ್ಲಿ ಅವನಿಗಾಗಿ ಕಾಯುತ್ತಿದ್ದಳು. ಅಲ್ಲಿ ಅವರು ಸಾಕಿಕೊಂಡಿದ್ದ ಪಾರಿವಾಳಗಳಿದ್ದವು. ಅವಕ್ಕೆ ಒಂದಷ್ಟು ಕಾಳು ಎರಚುತ್ತಲೇ ಮೌನವಾಗಿ ಕಾಫಿ ಹೀರಿ ಮುಗಿಸುತ್ತಿದ್ದರು. ಆನಂತರ ಲೆಕ್ಕ ಮಾಡಿ ಬರೆದಿಟ್ಟಂತೆ 20 ನಿಮಿಷಗಳ ಕ್ಲುಪ್ತ ನಿಧಾನ ನಡಿಗೆಯಲ್ಲಿ ಮಬ್ಬಡರಿದ ರಸ್ತೆಯಲ್ಲೊಂದು ವಾಕ್‌ ಮಾಡುತ್ತಿದ್ದರು; ಕೈ ಕೈ ಹಿಡಿದುಕೊಂಡು.  ಅದು ಅವರ ನಡುವಿನ ಬೆಚ್ಚಗಿನ ಬಾಂದವ್ಯದ ಕುರುಹು. ಆಗಲೂ ಇಬ್ಬರೂ ಮಾತಾಡುತ್ತಿರಲಿಲ್ಲ.
ಬ್ರಾಹ್ಮಿ ಮಹೂರ್ತದ ವಾಕ್‌ ನಂತರ ಅವನು ತಯಾರಾಗಿ ಚಹಾದಂಗಡಿ ತೆರಯಲು ಹೊರಟರೆ, ಅವಳು ತನ್ನ ಪಾಡಿಗೆ ಮುಕೇಶನ ಹಾಡನ್ನು ಕೇಳುತ್ತಾ ಅದೇನೋ ಬರೆಯುತ್ತಿದ್ದಳು.

ಮೊದಲ ಎಂಟೊಬತ್ತು ತಿಂಗಳು ಅವರಿಬ್ಬರು ಮಾತಾಡೇ ಇರಲಿಲ್ಲವಂತೆ. ಅವಳು ಎಲ್ಲಿ ಕೆಲಸ ಮಾಡುತ್ತಾಳೆ ಅನ್ನುವ ಸಂಗತಿಯನ್ನೂ ಅವನು ಕೇಳಿರಲಿಲ್ಲವಂತೆ. ತಿಂಗಳ ಕೊನೆಯಲ್ಲಿ ಒಂದಷ್ಟು ಹಣವನ್ನು ತನ್ನ ಪಾಡಿನ ಬಾಡಿಗೆ ಎಂದು ಅವನ ಕೈಗೊಪ್ಪಿಸಿದರೆ, ಅವನು ಮರುಮಾತಾಡದೇ ವೃದ್ಧನಿಗೆ ಬಾಡಿಗೆ ಕೊಡಲು ಹೊರಟುಬಿಡುತ್ತಿದ್ದ. ಅವಳು ಸೆಂಟ್ರಲ್‌ ಲೈಬ್ರರಿಯಲ್ಲಿ ಇನ್‌ಚಾರ್ಜ್‌ ಆಗಿ ಗುತ್ತಿಗೆಯ ಆಧಾರದಲ್ಲಿ ಕೆಲಸಕ್ಕಿದ್ದಳು ಎನ್ನುವುದು ಅವನಿಗೆ ಗೊತ್ತಾಗಿದ್ದು ಅವಳು ಪರಿಚಯವಾಗಿ ಬರೋಬ್ಬರಿ ವರ್ಷ ಕಳೆದ ನಂತರವಂತೆ. ಅವತ್ತು ಮೊದಲ ಬಾರಿಗೆ ಅವಳು ಅವನ ಪೂರ್ತಿ ಹೆಸರೇನು ಎಂದು ಕೇಳಿದ್ದಳಂತೆ.

ದೇವ್‌ ಎಂದು ಕರೆದು ಅಭ್ಯಾಸವಾಗಿದ್ದವಳಿಗೆ ʻದೊಡ್ಡದೇವರಾಯಸ್ವಾಮಿ ಸೀತಾಳಯ್ಯನಗಿರಿʼ
ಎನ್ನುವ ಹೆಸರು ಕೇಳಿದಾಗ ಮೂರ್ಚೆ ಹೋಗುವುದೊಂದೆ ಬಾಕಿ. ಅವನೂ ಕೂಡಾ ಅವಳು
ಮಾತಾಡಿಸಿದ ಸಂಭ್ರಮದಲ್ಲಿ ಅವಳ ಹೆಸರು ಕೇಳಿದ್ದ. ಅಲ್ಲಿಯವರೆಗೆ ಅವಳ ಹೆಸರು ಸೋನು ಎಂದು ಬರೆದಿದ್ದನ್ನು ಮಾತ್ರ ಓದಿ ಅವಳ ಹೆಸರು ಅದೇ ಅಂದುಕೊಂಡಿದ್ದ. ಅವಳ ನಿಜವಾದ ಹೆಸರು ʻಶರಣವ್ವ ಯೆಲ್ಲಪ್ಪ ಕಲ್ಲಂಗಡಿ..ʼ ಅಷ್ಟು ಕಾಲ ಅದುಮಿಟ್ಟುಕೊಂಡಿದ್ದ ಭಾವನೆಗಳಿಗೆ ರೆಕ್ಕೆ ಮೂಡಿ ಮುಗಿಲೆತ್ತರಕ್ಕೆ ಸಂಭ್ರಮಿಸಿ ಪಟಪಟಿಸಿ ಹಾರಿದಂತೆ, ಇಬ್ಬರೂ ತಮ್ಮ ತಮ್ಮ ಹೆಸರುಗಳನ್ನು ಹೇಳಿಕೊಂಡು ಮನಸಾರೆ ನಕ್ಕಿದ್ದರು.

ಪರಿಚಯವಾದ ಮರುಕ್ಷಣವೇ ಹೆಸರೇನು ಎಂದು ಕೇಳುವುದು ವಾಡಿಕೆ. ಅದಾದ ನಂತರ ಯಾವ ಊರು? ಏನು ಕೆಲಸ? ಪೋಷಕರು ಏನು ಮಾಡುತ್ತಾರೆ? ಎಲ್ಲಿದ್ದಾರೆ? ಜಾತಿ ಯಾವುದು? ಗೋತ್ರ ಯಾವುದು? ಹುಟ್ಟಿದ ತಾರೀಕು ಯಾವುದು? ನಕ್ಷತ್ರ-ರಾಶಿ-ಫೆವರೇಟ್‌ ರೆಸ್ಟೋರೆಂಟ್‌! ಎಂದೆಲ್ಲಾ ತಿಳಿದುಕೊಳ್ಳಲು ಹಪಹಪಿಸುವ ಇಂದಿನ ಪೀಳಿಗೆಗೆ 90ರ ದಶಕದ ಈ ಕಥೆ ಅರ್ಥವೇ ಆಗದ ವಿಚಿತ್ರ ಅನ್ನಿಸುತ್ತದೆ. ಆದರೆ ಹೀಗೂ ಒಂದು ಸಂಬಂಧವಿತ್ತು.

ಇಬ್ಬರೂ ಈ ಸಮಾಜದ ರೀತಿ ರಿವಾಜುಗಳಿಗೆ ವಿರುದ್ಧವಾಗಿ ಪರಂಪರೆಯನ್ನು ಧಿಕ್ಕರಿಸಿ ಬದುಕಿದ್ದರು. ತಮ್ಮ ನಡುವಿನ ಸಂಬಂಧಕ್ಕೆ ಹೆಸರೇ ಬೇಡ ಎಂದು ಹಠ ಹಿಡಿದು ಒಂಟಿ ಕೋಣೆಯಲ್ಲಿ ಉಸಿರಾಡಿದ್ದರು. ಇವತ್ತಿಗೂ ಅವರಿಬ್ಬರು ಜಾತಿ ಯಾವುದೂ ಎಂದು ಕೇಳಿಕೊಂಡಿಲ್ಲ. ಇನ್‌ ಫ್ಯಾಕ್ಟ್‌ ಅಂತಹ ಮನಸ್ಥಿತಿ ಇಬ್ಬರಿಗೂ ಇಲ್ಲ, ಅಂತಹ ಸಂದರ್ಭವೂ ಬಂದಿಲ್ಲ. ಆದರೆ ಎಲ್ಲದಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಅವರು ಒಬ್ಬರೊನ್ನಬ್ಬರು ಪ್ರೀತಿಸಿದ್ದರಾ?

ಅವರು ಒಬ್ಬರೊನ್ನೊಬ್ಬರು ಇಷ್ಟಪಟ್ಟಿದ್ದರು. ಒಬ್ಬರ ಮೇಲೊಬ್ಬರು ಅವಲಂಬಿತರಾಗಿದ್ದರು.
ಒಬ್ಬರನ್ನೊಬ್ಬರು ಪರಸ್ಪರ ಅತೀವವಾಗಿ ಗೌರವಿಸಿದ್ದರು. ಒಬ್ಬರನ್ನೊಬ್ಬರು  ಮೆಚ್ಚಿಕೊಂಡಿದ್ದರು. ಆದರೆ ಆ ಮೆಚ್ಚುಗೆ, ಇಷ್ಟ, ಅವಲಂಬನೆ ಹಾಗೂ ಗೌರವಕ್ಕೆ ಪ್ರೀತಿ ಅನ್ನುವ ಹೆಸರಿಟ್ಟಿರಲಿಲ್ಲ. ಹೆಸರಿಲ್ಲದ ಒಂದು ಗಟ್ಟಿ ಬಂಧ ಶಾಶ್ವತವಾಗಿ ತಮ್ಮನ್ನಾಳಬೇಕು ಎಂದು ಬಯಸಿದ್ದರು. ಅವನು ಅವಳನ್ನು ಸ್ಪರ್ಷಿಸಿದರೆ ಅದರಲ್ಲಿ ಹೇಳಿಕೊಳ್ಳಲಾಗದ ಅವರ್ಣನೀಯ ಆನಂದ ಮಾತ್ರ ಉಂಟಾಗುತ್ತಿತ್ತೇ ವಿನಃ ವಾಂಛೆಗಳಲ್ಲ. ಹಾಗಂತ ಅವನು ಗೇ ಅಥವಾ ಅವಳು ಲೆಸ್ಬಿಯನ್‌ ಆಗಿರಲಿಲ್ಲ.

ಅವರಿಬ್ಬರ ಲಿಂಗಗಳು ನೇರವಾಗಿತ್ತು. ಮನುಷ್ಯ ಸಹಜ ಕಾಮನೆಗಳು ಇಬ್ಬರಲ್ಲೂ ಇತ್ತು. ಆದರೆ ಅವರಿಬ್ಬರೂ ಬದುಕನ್ನು ವೃತನಿಷ್ಠೆಗೊಳಿಸಿಕೊಂಡಿದ್ದರು. ಅವನು ಅವಳನ್ನು ಮದುವೆಯಾಗಲಿಲ್ಲ, ಅವಳಿಗೆ ಅವನು ಕೇವಲ ಗಂಡನಿಗೆ ಮೀರಿದ ಕಂಪ್ಯಾನಿಯನ್.‌ ಅವರಿಬ್ಬರ ನಡುವಿದ್ದ ಒಡಂಬಡಿಕೆ
ಸ್ಪಷ್ಟವಿತ್ತು ಹೆಂಡತಿ ಅಂತವಾ ಗಂಡ ಎಂದು ನಿರ್ಧರಿಸಿಕೊಂಡು ಬಿಟ್ಟರೆ, ಮಿತಿಗಳಿರುತ್ತವೆ. ಅದೊಂದು ಹುದ್ದೆಯಂತೆ ಇಷ್ಟೇ ಜವಾಬ್ದಾರಿ ಇಂತದ್ದೇ ಹೊಣೆ ಎಂದಾಗುತ್ತದೆ. ಊಹೂಂ ತಮ್ಮಿಬ್ಬರ ನಡುವಿನ ಹೊಣೆಗಾರಿಕೆ ಜವಾಬ್ದಾರಿಗೆ ಅಂಕಿತ ಹಾಕುವುದು ಬೇಡ, ಅದು ಅನಿಯಂತ್ರಿತವಾಗಿರಲಿ, ಅನಿಶ್ಚಿತವಾಗಿರಲಿ, ಅನಂತವಾಗಿರಲಿ.

ಇಷ್ಟು ಓದಿದ ನಂತರ ನಿಮ್ಮ ಅನುಮಾನ ಗೊಂದಲ ಮತ್ತಷ್ಟು ಹೆಚ್ಚಾಗಬಹುದು, ಖಂಡಿತಾ
ಹಾಗಾಲೇಬೇಕು. ಮದುವೆಯಾಗದಿದ್ದರೇ ಬೇಡ. ಇಬ್ಬರೂ ಸರಿಯಿದ್ದಾರೆ ಒಂದೇ ಬೆಡ್‌ ಶೇರ್‌
ಮಾಡುತ್ತಾರೆ ಎಂದರೆ ದೇಹ ಮೂಲಭೂತವಾದ ಅವಶ್ಯಕತೆಯನ್ನು ಬಯಸಲೇಬೇಕು. ಯೆಸ್‌!
ಅಫ್‌ಕೋರ್ಸ್‌ ಅದು ಪ್ರಕೃತಿಯ ನೀತಿ. ಅದಾಗದೇ ಇದ್ದರೆ ಖಂಡಿತಾ ಅವರು ಮನುಷ್ಯರಲ್ಲ.
ಮತ್ತೊಂದು ಸಂಗತಿ ಆ ವೃದ್ಧ ದಂಪತಿಗಳು ಎಷ್ಟೇ ಆದರ್ಶ ಮಣ್ಣು ಮಸಿ ಅಂದರೂ ಒಂದು
ದಿನವಾದರೂ ಇದನ್ನು ಪ್ರಶ್ನಿಸಲೇಬೇಕಲ್ಲವೇ. ಅಥವಾ ಒಂದು ಕನಿಷ್ಠ ಕುತೂಹಲವಾದರೂ
ಇರಲೇಬೇಕಲ್ಲವೇ?

. ಈ ಕಥೆಯನ್ನು ಯಾಕೆ ಹೇಳಿದೆನೆಂದರೇ ಪ್ರೀತಿಯ ಹತ್ತು ಹಲವು ಆಯಾಮಗಳ ಬಗ್ಗೆ ನೀವು ಕೇಳಿರುತ್ತೀರಾ, ಓದಿರುತ್ತೀರಾ ಅಥವಾ ಸ್ವತಃ ಅನುಭವಿಸಿರುತ್ತೀರಾ. ಆದರೆ ಹೀಗೂ ಪ್ರೀತಿಸಬಹುದು ಎನ್ನುವುದನ್ನು ನೀವು ಖಂಡಿತಾ ನಂಬಲಾರಿರಿ, ಆದರೆ ನಂಬಲೇ ಬೇಕು. ಯಾಕಂದ್ರೆ ಪ್ರೀತಿ ಅನ್ನುವುದು ಹಾಗೆಯೇ ಅದರ ಮಿತಿ ಅಮಿತ; ಅದರ ವ್ಯಾಖ್ಯಾನಗಳೂ ಸಹ..

-ವಿ.ಬಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd