ಜ.1ರಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಕ್ಲಾಸ್ ಶುರು,, ವಿದ್ಯಾಗಮವೂ ಪುನರಾರಂಭ
ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 10 ಮತ್ತು 12ನೇ ತರಗತಿಗಳನ್ನು 2021ರ ಜನವರಿ 1ರಿಂದ ಆರಂಭಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಾಲಾರಂಭ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಆರೋಗ್ಯ ಸಚಿವರು ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ರಾಜ್ಯದ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿಯನ್ನು ಪರಿಶೀಲಿಸಿ ಶಾಲಾರಂಭದ ನಿರ್ಧಾರಕ್ಕೆ ಬರಲಾಯಿತು ಎಂದು ಹೇಳಿದ್ದಾರೆ.

ಜ. 1ರಿಂದ 6ರಿಂದ 9ನೇ ತರಗತಿಗಳಿಗೆ ಜನವರಿ 1ರಿಂದ ವಿದ್ಯಾಗಮ ತರಗತಿಗಳೂ ಪುನರಾರಂಭವಾಗಲಿವೆ. ಕೋವಿಡ್-19 ರಾಜ್ಯ ಸಲಹಾ ಸಮಿತಿ ನೀಡಿದ ನಿರ್ದೇಶನಗಳನ್ನು ವಿವರಿಸಿದ ಸುರೇಶ್ ಕುಮಾರ್, 10 ಮತ್ತು 12ನೇ ತರಗತಿಗಳ ಆರಂಭದ ಅನುಭವದ ಆಧಾರದಲ್ಲಿ ಜ. 15ರಿಂದ 11ನೇ ತರಗತಿ ಆರಂಭಿಸಲಾಗುವುದು ಎಂದರು.
ಜನವರಿ 1ರಿಂದಲೇ ವಿದ್ಯಾಗಮ
ಜನವರಿ 1ರಿಂದ 6ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಪುನರಾರಂಭವಾಗಲಿದ್ದು, ಅದರ ಅನುಭವದ ಆಧಾರದಲ್ಲಿ ಜ.14ರಿಂದ 1ರಿಂದ 5ನೇ ತರಗತಿಗಳಿಗೆ ವಿದ್ಯಾಗಮ ವಿಸ್ತರಿಸಲಾಗುತ್ತದೆ. ಪ್ರಮಾಣಿತ ಕಾರ್ಯಾಚರಣೆ ವಿಧಾನ -ಎಸ್ಒಪಿಗಳನ್ನು ಸೂಚಿಸಿದ್ದು, ಅದರ ಆಧಾರದಲ್ಲಿ ವಿವಿಧ ಇಲಾಖೆಗಳ ಸಹಕಾರದಲ್ಲಿ ಶಾಲಾರಂಭಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಿರುತ್ತದೆ. ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಖಾತರಿಪಡಿಸುವ ಮೂಲಸೌಲಭ್ಯಗಳನ್ನು ಮತ್ತು ಇತರೆ ಸೌಲಭ್ಯಗಳ ಗಮನಿಸಿದ ನಂತರವೇ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಕಳೆದ ಗುರುವಾರ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ ರಾಜ್ಯದ ಪ್ರಸ್ತುತ ಕೋವಿಡ್ ಪ್ರಸರಣ, ಕೋವಿಡ್ ಪಾಸಿಟಿವ್ ಪ್ರಕರಣಗಳ ದಾಖಲು, ಮರಣ ಪ್ರಮಾಣ ಸೇರಿದಂತೆ ಕೋವಿಡ್ಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿಯೂ ಚರ್ಚೆ ನಡೆಸಿ ಶಾಲಾರಂಭದ ಸಂಗತಿಯಲ್ಲಿ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ನೀಡಿತ್ತು. ಈ ವರದಿ ಕುರಿತು ಪರಾಮರ್ಶೆ ನಡೆಸಿ ಮುಖ್ಯಮಂತ್ರಿಗಳು ಶಾಲಾರಂಭ ಕುರಿತು ಸಮ್ಮತಿ ನೀಡಿದರು ಎಂದು ಅವರು ತಿಳಿಸಿದರು.
ಶೀತ, ನೆಗಡಿ, ಕೆಮ್ಮು ಇದ್ದರೆ ಬರುವಂತಿಲ್ಲ
ತರಗತಿಗಳಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ಶಾಲೆಗೆ ಬರುವ ಮೊದಲು ತಮ್ಮ ಪೋಷಕರಿಂದ ಅನುಮತಿ ಪತ್ರವನ್ನು ತರುವುದು ಕಡ್ಡಾಯವಾಗಿದೆ. ಆರೋಗ್ಯ ತೊಂದರೆ ಇಲ್ಲವೇ ಶೀತ, ನೆಗಡಿ, ಕೆಮ್ಮು ಹಾಗೆಯೇ ಕೋವಿಡ್ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬರುವಂತಿಲ್ಲ. ಅವರು ಪರೀಕ್ಷೆ ಮಾಡಿಸಿಕೊಂಡು ವೈದ್ಯಕೀಯ ವರದಿಯೊಂದಿಗೆ ಹಾಜರಾಗಬೇಕಿದೆ. ತಮ್ಮ ಮಕ್ಕಳಿಗೆ ರುಚಿ, ವಾಸನೆ ಕೊರತೆ, ಉಸಿರಾಟ ತೊಂದರೆ, ಗಂಟಲು ನೋವು ಸೇರಿದಂತೆ ಮೇಲ್ಕಂಡ ಯಾವುದೇ ಲಕ್ಷಣಗಳಿಲ್ಲ ಎಂದು ಪೋಷಕರು ತಾವು ತಮ್ಮ ಮಕ್ಕಳು ಶಾಲೆಗೆ ಹಾಜರಾಗುವಾಗ ನೀಡುವ ಅನುಮತಿ ಪತ್ರದಲ್ಲಿ ತಿಳಿಸುವುದು ಕಡ್ಡಾಯವಾಗಿದೆ.
ಹಾಸ್ಟೆಲ್ಗಳ ಆರಂಭಕ್ಕೆ ಸಮ್ಮತಿ
ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಶಾಲೆಗೆ ಹಾಜರಾಗುವ ಹಾಸ್ಟೆಲ್ ವಾಸಿ ಮಕ್ಕಳಿಗೆ ಅನುವಾಗುವಂತೆ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲಿವೆ. ವಸತಿ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಸತಿ ಶಾಲೆಗೆ ಹಾಜರಾಗುವ ಮೊದಲು ಕೋವಿಡ್ ಪರೀಕ್ಷೆಗೆ ಒಳಗಾಗಿ ಕೋವಿಡ್ ಮುಕ್ತ ಪ್ರಮಾಣ ಪತ್ರ ತರುವುದು ಕಡ್ಡಾಯವಾಗಿದೆ
ತರಗತಿಗಳಲ್ಲಿ ಶಿಕ್ಷಕರು ಕೋವಿಡ್ ಲಕ್ಷಣಗಳ ಕುರಿತು ವಿದ್ಯಾರ್ಥಿಗಳನ್ನು ಪ್ರತಿದಿನವೂ ಪರೀಕ್ಷೆಗೆ ಒಳಪಡಿಸಬೇಕು. ಕೋವಿಡ್ ಲಕ್ಷಣಗಳು ಕಂಡು ಬಂದರೆ ಅಂತಹ ವಿದ್ಯಾರ್ಥಿಯನ್ನು ಪರೀಕ್ಷೆ ಮತ್ತು ಸಮಾಲೋಚನೆಗೆ ಸಮೀಪದ ಆಸ್ಪತ್ರೆಗೆ ಕಳಿಸಬೇಕು. ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರದ ಬದಲಿಗೆ ಆಹಾರ ಧಾನ್ಯಗಳ ವಿತರಣೆ ಮುಂದುವರೆಸಬೇಕು. ಶಾಲಾ ಪರಿಸರದಲ್ಲಿ ಆಹಾರ ಸೇವನೆಗೆ ಅವಕಾಶವಿರಬಾರದು. ಶಾಲಾರಂಭಕ್ಕೂ ಮುನ್ನ ಡಿಸೆಂಬರ್ ಮಾಸದಲ್ಲಿ ಶಾಲಾಡಳಿತಗಳು/ ಶಾಲಾ ಮೇಲುಸ್ತುವಾರಿ ಸಮಿತಿಗಳು ಪೋಷಕರು, ಮಕ್ಕಳು ಸೇರಿದಂತೆ ಇನ್ನಿತರೆ ಶೈಕ್ಷಣಿಕ ಪಾಲುದಾರರನ್ನು ಸಭೆ ನಡೆಸಿ ಶಾಲೆಗಳ ಪುನರಾರಂಭ ಕುರಿತು ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕೋವಿಡ್ ಲಕ್ಷಣಗಳಿದ್ದರೆ ಪ್ರತ್ಯೇಕ ಕೊಠಡಿ
ಕೋವಿಡ್ ಲಕ್ಷಣಗಳಿದ್ದು, ತುರ್ತು ವೈದ್ಯಕೀಯ ಪರೀಕ್ಷೆ ಅಗತ್ಯವಿರುವ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಗೆ ಮೊದಲ ಪ್ರಾಶಸ್ತ್ಯ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಕೋವಿಡ್ ಲಕ್ಷಣಗಳು ಕಂಡು ಬಂದ ಶಿಕ್ಷಕರು/ ಸಿಬ್ಬಂದಿ/ ಮಕ್ಕಳು ತಕ್ಷಣವೇ ಪ್ರತ್ಯೇಕ ಕೊಠಡಿಗೆ ತೆರಳಿ ಪ್ರತ್ಯೇಕವಾಗಬೇಕು.
ಸಮೀಪದ ಆಸ್ಪತ್ರೆಯಲ್ಲಿ ಪರೀಕ್ಷೆ ಮತ್ತು ಕ್ವಾರಂಟೈನ್ಗೊಳಗಾಗಿ ಚಿಕಿತ್ಸೆ ಪಡೆಯಬೇಕಿದೆ. ಕೋವಿಡ್ ಪಾಸಿಟಿವ್ ಕಂಡು ಬಂದ ಅಭ್ಯರ್ಥಿಗಳಿದ್ದ ಕೊಠಡಿಯನ್ನು ಸ್ಯಾನಿಟೈಸ್ ಮಾಡಿ ಮುಂದಿನ ದಿನ ಬಳಸಬೇಕು. ಸೀಲ್ಡೌನ್ ಮಾಡುವ ಅಗತ್ಯವಿಲ್ಲ ಎಂದು ಸಮಿತಿ ತಿಳಿಸಿದೆ.
2020ರ ಆಗಸ್ಟ್ 11ರಂದು ಸರ್ಕಾರ ಬಿಡುಗಡೆ ಮಾಡಿದ ಪರಿಷ್ಕøತ ಡಿಸ್ಚಾರ್ಜ್ ನೀತಿಯನ್ವಯ ಕೋವಿಡ್ ಪಾಸಿಟಿವ್ ಬಂದವರು ಗೃಹ ಪ್ರತ್ಯೇಕತೆ/ ಗೃಹ ಆರೈಕೆ/ ಕೋವಿಡ್ ಆರೈಕೆ ಕೇಂದ್ರಗಳಲ್ಲಿ 10 ದಿನಗಳ ಆರೈಕೆಗೊಳಗಾಗಿ ಮುಂದಿನ 7 ದಿನಗಳು ಮನೆಯಲ್ಲಿ ಪ್ರತ್ಯೇಕತೆಯಲ್ಲಿರಬೇಕು. ಅವರು ಮತ್ತೊಮ್ಮೆ ಕೋವಿಡ್ ಪರೀಕ್ಷೆಗೊಳಗಾಬೇಕಾದ ಅಗತ್ಯವಿಲ್ಲ. ಈ 17 ದಿನಗಳ ನಂತರ ಮತ್ತೆ ಶಾಲೆಗೆ ಸೇರಲು ಸಮಿತಿ ಸಲಹೆಯಂತೆ ವೈದ್ಯರು ನೀಡುವ ಫಿಟ್ನೆಸ್ ಸರ್ಟಿಫಿಕೆಟ್ ಸಾಕಾಗುತ್ತದೆ ಎಂದು ಅವರು ಹೇಳಿದರು.
ಕೋವಿಡ್-19 ಈಗಲೇ ಮುಗಿಯುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಅಂದ ಹಾಗೆಯೇ ಇದರ ಮಧ್ಯೆಯೇ ಎಲ್ಲ ವಾಣಿಜ್ಯ ಚಟುವಟಿಕೆಗಳು ಮುಂದುವರೆದಿವೆ. ಶಾಲೆಗಳು ಮಾತ್ರವೇ ತೆರೆಯಲಾಗಿಲ್ಲ. ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗದ ಕಾರಣ ಹಲವಾರು ಸಾಮಾಜಿಕ ಸಮಸ್ಯೆಗಳು ಉದ್ಭವವಾಗಿವೆ. ಸಮಾಜದ ಹಲವು ಪ್ರಮುಖರ ಜೊತೆ, ವಿಧಾನಪರಿಷತ್ ಸದಸ್ಯರು, ಎಸ್ಡಿಎಂಸಿಗಳು, ಶಾಲಾ ಸಂಘಟನೆಗಳು ಸೇರಿದಂತೆ ಸಮಾಜದ ವಿವಿಧ ಸ್ತರಗಳ ವ್ಯಕ್ತಿಗಳ/ಸಮುದಾಯಗಳ ಜೊತೆ ಸಮಾಲೋಚನಾ ಸಭೆಗಳನ್ನು ನಡೆಸಿದಾಗ ಮಕ್ಕಳನ್ನು ಯಾವುದಾದರೂ ಮಾದರಿಯಲ್ಲಿ ಕಲಿಕೆಯಲ್ಲಿ ತೊಡಗಿಸಬೇಕೆಂಬ ಒಕ್ಕೊರಲ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದೂ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಆನ್ಲೈನ್ ಶಿಕ್ಷಣ ಮುಂದುವರೆಯಲಿದೆ
ಗ್ರಾಮೀಣ ಭಾಗದ ಅವಕಾಶ ವಂಚಿತ ಮಕ್ಕಳ ಕಲಿಕೆ ನಿರಂತರವಾಗಿರಬೇಕೆಂಬ ಉದ್ದೇಶದಿಂದ ನಾವು ಕಳೆದ ಆಗಸ್ಟ್ 10ರಿಂದ ನಾವು ವಿದ್ಯಾಗಮ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸಿದೆವು. ನಾವು ಕೋವಿಡ್ ನಂತರದ ತುರ್ತು ಸಂದರ್ಭದಲ್ಲಿ ತಜ್ಞ ಸಮಿತಿಯನ್ನು ರಚಿಸಿ ಆನ್ಲೈನ್ ಶಿಕ್ಷಣವನ್ನು ನಿಯಂತ್ರಿಸಲು ರೂಪುರೇಷೆಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿಯೇ ನಮ್ಮ ಗ್ರಾಮೀಣ ಮಕ್ಕಳಿಗೆ ಉಪಯುಕ್ತವಾಗಲೆಂದು ಅವರ ಲಭ್ಯ ಸೌಲಭ್ಯಗಳ ಆಧಾರದಲ್ಲಿ ಕಲಿಕೆ ಮುಂದುವರೆಯಲೆಂದು ನಾವು ವಿದ್ಯಾಗಮವನ್ನು ಪ್ರಾರಂಭಿಸಿದ್ದೆವು.
ಹಲವು ಕಾರಣಗಳಿಗಾಗಿ ಅದು ಸ್ಥಗಿತವಾಗಿತ್ತು. ಇತ್ತೀಚಿಗೆ ರಾಜ್ಯದ ಉಚ್ಚ ನ್ಯಾಯಾಲಯವೂ ಸಹ ವಿದ್ಯಾಗಮವನ್ನು ಪ್ರಾರಂಭಿಸಲು ಹಲವು ಸಲಹೆಗಳೊಂದಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ನಾವು ಮಕ್ಕಳ ಕಲಿಕೆಗೆ ಈ ಕಾರ್ಯಕ್ರಮವನ್ನು ಪುನರಾರಂಭಿಸುತ್ತಿದ್ದೇವೆ. ವಿದ್ಯಾಗಮವನ್ನು ಇದೇ ನಿಯಮಗಳ ಅನುಸಾರವಾಗಿ ಮುಂದುವರೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಆನ್ಲೈನ್ ಕಲಿಕೆ, ಸಂವೇದಾ ಕಾರ್ಯಕ್ರಮ, ಯೂ-ಟ್ಯೂಬ್ ಕಲಿಕೆಗಳೂ ಮುಂದುವರೆಯಲಿದೆ. ಮಕ್ಕಳು ತರಗತಿಗೆ ಹಾಜರಾಗುವುದು ಅವರವರ ವಿವೇಚನೆ ಬಿಟ್ಟಿದೆ. ಅದರಲ್ಲಿ ಕಡ್ಡಾಯವೇನಿಲ್ಲ. ವಿದ್ಯಾರ್ಥಿ ಹಾಗೂ ಪೋಷಕರು ತರಗತಿಗೆ ಹಾಜರಾಗಲು ಸ್ವತಂತ್ರರಾಗಿದ್ದು, ಒಂದು ವೇಳೆ ತರಗತಿಗೆ ಹಾಜರಾಗಲು ಇಷ್ಟಪಡದಿದ್ದಲ್ಲಿ ಪರ್ಯಾಯ ಬೋಧನಾ ಕ್ರಮಗಳನ್ನು ಅವರು ಅನುಸರಣೆ ಮಾಡಲು ಅವಕಾಶವಿದೆ. ಆದರೆ ಪ್ರತಿ ವಿದ್ಯಾರ್ಥಿ ಮುಂದಿನ ತರಗತಿಗೆ ತೇರ್ಗಡೆ ಹೊಂದುವುದಕ್ಕೆ ಅನುಕೂಲವಾಗಲು ಶಾಲೆಗೆ ದಾಖಲಾಗುವುದು ಕಡ್ಡಾಯವಾಗಿದೆ ಎಂದು ಅವರು ವಿವರಿಸಿದರು.
ಪಠ್ಯ ಕ್ರಮ ನಿಗದಿ
10 ಮತ್ತು 12ನೇ ತರಗತಿಗಳಿಗೆ ಮಂಡಳಿಯ ಪರೀಕ್ಷೆಗಳನ್ನು ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಪಿಯು ತರಗತಿಗಳಿಗೆ ಸಂಬಂಧಿಸಿದಂತೆ ಈ ಶೈಕ್ಷಣಿಕ ವರ್ಷದ ಉಳಿಯುವ ಅವಧಿಗೆ ಬೋಧಿಸಬಹುದಾದ ಪಠ್ಯ ವಸ್ತುಗಳನ್ನು ಎನ್ಸಿಇಆರ್ಟಿ ಮಾರ್ಗದರ್ಶಿ ಸೂತ್ರಗಳನ್ವಯ ಈಗಾಗಲೇ ಅಂತಿಮಗೊಳಿಸಲಾಗಿದೆ. ಉಳಿದ ತರಗತಿಗಳ ಪಠ್ಯವಸ್ತುಗಳ ಕುರಿತಂತೆ ಖಚಿತ ನಿರ್ಧಾರವನ್ನು ಸಭೆಯ ಆಧಾರದಲ್ಲಿ ಮುಂದಿನ ವಾರದಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಯಾವುದೇ ತರಗತಿಯ ವಿದ್ಯಾರ್ಥಿಗೆ ಕಲಿಕೆ ಹೊರೆಯಾಗದಂತೆ, ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕಲಿಯುವ ಪರಿಸರವನ್ನು ನಾವು ಸೃಷ್ಟಿಸಿಕೊಡಲಿದ್ದೇವೆ. ಮಕ್ಕಳ ಹಿತದೃಷ್ಟಿಯಿಂದ ಶಾಲಾರಂಭದ ಸಂಗತಿಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ಸಹಕಾರ ನೀಡಲು ಮುಂದಾಗಿವೆ.
ಆರೋಗ್ಯ ಇಲಾಖೆ, ಸಾರಿಗೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಕೈಜೋಡಿಸುತ್ತಿವೆ. ಆಯಾ ಪ್ರದೇಶಗಳ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳು ತರಗತಿ ಕೊಠಡಿಗಳ ಸ್ಯಾನಿಟೈಜೇಶನ್ ಕೈಗೊಳ್ಳಲಿವೆ. ಸ್ಥಳೀಯ ಆರೋಗ್ಯ ಘಟಕಗಳು ಮಕ್ಕಳ ಆರೋಗ್ಯ ಪರೀಕ್ಷೆಗೆ ಸಹಕರಿಸಲಿವೆ ಎಂದು ಸಚಿವ ಸುರೇಶ್ ಕುಮಾರ್ ವಿವರಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








