ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಪ್ರಯತ್ನಗಳ ಮಧ್ಯೆ, ‘ಬೇಗೂರು ಕಾಲೋನಿ’ ಎಂಬ ಹೊಸ ಚಿತ್ರ ಗಮನ ಸೆಳೆಯುತ್ತಿದೆ. ಪೋಸ್ಟರ್ ಮೂಲಕವೇ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಈಗ ಟೀಸರ್ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.
ಟೀಸರ್ ಬಿಡುಗಡೆ ಸಮಾರಂಭ:
ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಇತ್ತೀಚೆಗಷ್ಟೇ ನಿರ್ದೇಶಕ ತರುಣ್ ಸುಧೀರ್ ಹಾಗೂ ಶಾಸಕ ಸತೀಶ್ ರೆಡ್ಡಿ ಟೀಸರ್ ರಿವೀಲ್ ಮಾಡಿ ತಂಡಕ್ಕೆ ಶುಭ ಕೋರಿದ್ದರು. ಈ ಸಂದರ್ಭದಲ್ಲಿ ತರುಣ್ ಸುಧೀರ್, ಒಂದು ಸಿನಿಮಾಗೆ ಟೀಸರ್ ಇನ್ವಿಟೇಷನ್ ತರ. ಆ ಸಿನಿಮಾದಲ್ಲಿ ಏನಿದೆ ಅನ್ನೋದನ್ನು ಜನರಿಗೆ ತಲುಪಿಸುವುದು ಟೀಸರ್. ಟೀಸರ್ ಹಾಗೂ ಟ್ರೇಲರ್ ಸಿನಿಮಾಗೆ ಅಷ್ಟು ಮುಖ್ಯ. ನಮ್ಮ ಇಡೀ ಶ್ರಮ, ಕಷ್ಟಪಟ್ಟಿರುವುದು, ಶೂಟಿಂಗ್ ಇರಬಹುದು. ಇಡೀ ಎಫರ್ಟ್ ಗಿಂತ ಜಾಸ್ತಿ ಟೆನ್ಷನ್ ಆಗುವುದು ಟೀಸರ್ ಹಾಗೂ ಟ್ರೇಲರ್ ಕಟ್ ಮಾಡುವಾಗ. ಅದೇ ಜನರನ್ನು ಥಿಯೇಟರ್ ಒಳಗೆ ಕರೆದುಕೊಂಡು ಬರುವುದು. ಆ ನಿಟ್ಟಿನಲ್ಲಿ ನೋಡುವುದಾದರೆ ಕಾಲೋನಿ ಟೀಸರ್ ಚೆನ್ನಾಗಿ ಕಟ್ ಮಾಡಲಾಗಿದೆ. ನನ್ನ ಆತ್ಮೀಯ ಗೆಳೆಯ. ಐದೈದು ವರ್ಷಗಳ ಜರ್ನಿ. ಕ್ರಿಕೆಟ್ ಟೂರ್ನಮೆಂಟ್ ಟೈಮ್ ನಲ್ಲಿ ಅವರನ್ನು ನೋಡಿದ್ದು. ಈ ರೀತಿ ಕ್ರಿಕೆಟ್ ಆಡ್ತಾನೆ ಅಂತಾ ಖುಷಿ ಆಯ್ತು. ಆ ಬಳಿಕ ಅವನ ಸಿನಿಮಾ ಪ್ರೀತಿ ಗೊತ್ತಾಯ್ತು. ಅವನಲ್ಲಿರುವ ಕ್ರಿಕೆಟರ್ ಹಾಗೂ ಕಲಾವಿದರನ್ನು ಗುರುತಿಸಿದ್ದು ಸುದೀಪ್ ಸರ್. ಅವನ ಜರ್ನಿ ನೋಡಿಕೊಂಡು ಬಂದಿದ್ದೇವೆ. ನಮ್ಮ ಮಣ್ಣಿನ ಕಥೆಗಳು ಅಂತೀವಲ್ಲ. ಆ ತರ ಫೇಸ್ ಇರುವ ಹುಡ್ಗ ಅವನು. ಅದ್ಭುತ ನಟ. ಅವನಿಗೆ ಬೇಕಿರುವು ಬ್ರೇಕ್ ಬೇಗೂರು ಕಾಲೋನಿ ಮೂಲಕ ಸಿಗಲಿದೆ ಎಂಬ ನಂಬಿಕೆ ಇದೆ ಎಂದರು.
ಶಾಸಕ ಸತೀಶ್ ಶೆಡ್ಡಿ ಮಾತನಾಡಿ, ಮಂಜು ನಿರ್ದೇಶನದಲ್ಲಿ ಅದ್ಭುತ ಸಿನಿಮಾ ಮೂಡಿಬಂದಿದೆ. ಅನೇಕ ಸಿನಿಮಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಆದರೆ ಈ ಚಿತ್ರ ನೋಡಿದಾಗ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ಟೀಸರ್ ಅದ್ಭುತವಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ನಟ ರಾಜೀವ್ ಮಾತನಾಡಿ, ಸರಳತೆ ಅಂದರೆ ಏನೂ ಅನ್ನೋದನ್ನು ತರುಣ್ ಅಣ್ಣ ತೋರಿಸಿದ್ದಾರೆ. ನಮ್ಮ ಸಿನಿಮಾಗೆ ಯಾವುದೇ ಪೂಜೆ ಮಾಡಿಲ್ಲ. ಟೀಸರ್ ತುಂಬಾ ಚೆನ್ನಾಗಿ ಬಂದಿದೆ. ಈ ರೀತಿ ಸಿನಿಮಾ ಮಾಡಿದ ಬಾಬಾಣ್ಣ ಅವರಿಗೆ ಧನ್ಯವಾದ. ನಿರ್ಮಾಪಕರಿಗೆ ಒಳ್ಳೆದು ಆಗಬೇಕು. ಈ ಚಿತ್ರದಲ್ಲಿ ಹೊಸಬರು ನಟಿಸಿದ್ದಾರೆ. ಆದರೆ ಸಿನಿಮಾ ನೋಡಿ ಹೊರಬಂದರೆ ಹೊಸಬರು ಅನಿಸುವುದಿಲ್ಲ. ಎಲ್ಲರೂ ಅದ್ಭುತ ಪಾತ್ರ ಮಾಡಿದ್ದಾರೆ. ಕಾಲೋನಿಯಲ್ಲಿ ಬೆಳೆಯುವ ಮಕ್ಕಳು ಅಲ್ಲೇ ಬೆಳೆಯುತ್ತಾರೆ. ಅಲ್ಲೇ ಸಾಯುತ್ತಾರೆ. ಆದರೆ ಅದರ ಎದುರು ಇರುವ ದೊಡ್ಡ ಜಾಗ ಕಮ್ಮಿಯಾಗುತ್ತಾ ಬರುತ್ತದೆ. ಎಲ್ಲಾ ಬೆಳೆಯುತ್ತಿದ್ದಾರೆ. ಆದರೆ ಕಾಲೋನಿ ಹಾಗೆಯೇ ಇರುತ್ತದೆ. ಅಲ್ಲಿ ಬೆಳೆಯುವ ಕಾಲೋನಿ ಹುಡ್ಗನಿಗೆ ಆಡಲು ಜಾಗ ಇರುವುದಿಲ್ಲ. ಇರುವ ಜಾಗವನ್ನು ಉಳಿಸಿಕೊಳ್ಳಲು ಹೋರಾಡುವ ಕಥೆಯೇ ಬೇಗೂರು ಕಾಲೋನಿ ಎಂದರು.
ಕಾಲೋನಿಯ ಕಥೆಯ ವಿಶೇಷತೆ:
ಚಿತ್ರದಲ್ಲಿ ಕಾಲೋನಿಯಲ್ಲೇ ಬೆಳೆದು, ಆ ಸ್ಥಳಕ್ಕಾಗಿ ಹೋರಾಡುವ ಯುವಕನ ಕಥೆ ಅಡಗಿದೆ. ಬೇಗೂರು ಕಾಲೋನಿಯ ಕಥೆ ಸಾಮಾನ್ಯ ಜನರ ಜೀವನದ ನಂಟು ಮತ್ತು ಆತ್ಮೀಯತೆಯ ಒಂದು ಪ್ರಯತ್ನ. ಇದು ಆಕ್ಷನ್, ಎಮೋಷನ್, ಪ್ರೀತಿ, ನೋವುಗಳ ಸಮ್ಮಿಶ್ರಣವಾಗಿದೆ.
ತಾರಾಗಣ ಮತ್ತು ತಾಂತ್ರಿಕ ತಂಡ:
ಬಿಗ್ಬಾಸ್ ಖ್ಯಾತಿಯ ರಾಜೀವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಮತ್ತು ತೆಲುಗಿನ ಪೊಸಾನಿ ಕೃಷ್ಣ ಮುರಳಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದ ಕಥೆ, ಚಿತ್ರಕಥೆ, ಮತ್ತು ನಿರ್ದೇಶನವನ್ನು ಫ್ಲೈಯಿಂಗ್ ಕಿಂಗ್ ಮಂಜು ನಿರ್ವಹಿಸಿದ್ದಾರೆ. ಶ್ರಿಮಾ ಸಿನಿಮಾಸ್ ಬ್ಯಾನರ್ನಡಿ ಎಂ. ಶ್ರೀನಿವಾಸ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸಂಗೀತ, ಛಾಯಾಗ್ರಹಣ, ಮತ್ತು ಸಂಕಲನ:
ಅಭಿನಂದನ್ ಕಶ್ಯಪ್ ಅವರ ಸಂಗೀತ ಮತ್ತು ಕಾರ್ತಿಕ್ ಅವರ ಛಾಯಾಗ್ರಹಣ, ಪ್ರಮೋದ್ ತಲ್ವಾರ್ ಸಂಕಲನ ಚಿತ್ರಕ್ಕಿದೆ. ಭರ್ಜರಿ ಮೇಕಿಂಗ್ ಹಾಗೂ ಆಕ್ಷನ್ ಸನ್ನಿವೇಶ ‘ಬೇಗೂರು ಕಾಲೋನಿ’ ಚಿತ್ರದಲ್ಲಿದೆ. ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸಿನಿಮಾ ಇದಾಗಿದೆ.
ಸಾಮಾಜಿಕ ಮತ್ತು ಭಾವನಾತ್ಮಕ ವಿಷಯಗಳನ್ನು ಒಳಗೊಂಡಿರುವ ಈ ಸಿನಿಮಾ ಜನವರಿ ತಿಂಗಳಲ್ಲಿ ತೆರೆಗೆ ಬರಲಿದೆ. “ಬೇಗೂರು ಕಾಲೋನಿ” ತನ್ನ ಭಿನ್ನತೆಯ ಕಥಾಹಂದರದಿಂದ ಕರ್ನಾಟಕದ ಪ್ರೇಕ್ಷಕರಿಗೆ ನೂತನ ಅನುಭವ ನೀಡುವ ವಿಶ್ವಾಸ ಮೂಡಿಸಿದೆ.