ಸತೀಶ್ ಜಾರಕಿಹೊಳಿ ಹಸಿರು ಶಾಲು ಹೊದ್ದು ನಾಮಪತ್ರ ಸಲ್ಲಿಸಿದ್ಯಾಕೆ ಗೊತ್ತಾ..?
ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಇಂದು ನಾಮಪತ್ರ ಸಲ್ಲಿದ್ದಾರೆ.
ಉಮೇದುವಾರಿಕೆ ಸಲ್ಲಿಸುವ ವೇಳೆ ಸತೀಶ್ ಜಾರಕಿಹೊಳಿ, ಮೊದಲ ಬಾರಿಗೆ ಹಸಿರು ಶಾಲು ಹಾಕಿಕೊಂಡಿದ್ದರು. ಇದು ಎಲ್ಲರ ಗಮನ ಸೆಳೆದಿದ್ದು, ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕೃಷಿ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿದ್ದಾರೆಂದು ಹಸಿರು ಶಾಲು ಹಾಕಿಲ್ಲ.
ಕಿಸಾನ್ ಘಟಕ ಸಂಘಟನೆಯವರು ನಮ್ಮೊಂದಿಗೆ ಇದ್ದಾರೆ. ಅವರೇ ಶಾಲು ಹಾಕಿ ನಾಮಪತ್ರ ಸಲ್ಲಿಸುವಂತೆ ತಿಳಿಸಿದರು. ಹೀಗಾಗಿ, ಶಾಲು ಹೊದ್ದು ನಾಮಪತ್ರ ಸಲ್ಲಿಸಿದ್ದೇನೆ ಎಂದರು.
ಮುಂದುವರಿದು, ಸಂಸದರು ಕೇವಲ ದೆಹಲಿಯಲ್ಲಿ ಇರುವುದಲ್ಲ. ಹಳ್ಳಿಗಳಲ್ಲೂ ಇರಬೇಕು. ಬೆಳಗಾವಿ ಲೋಕಸಭಾ ಕ್ಷೇತ್ರದ ಜನರು ಒಂದು ಅವಕಾಶ ಕೊಟ್ಟರೆ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ದಿ ಕೆಲಸ ಮಾಡಲಿದ್ದೇವೆ.
ಈಗಾಗಲೇ ಇಪ್ಪತ್ತು ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯ, ಶಾಸಕನಾಗಿ, ಮಂತ್ರಿಯಾಗಿ ಹಲವಾರು ಕೆಲಸಗಳನ್ನು ಮಾಡಿದ್ದೇನೆ.
ಜನ ಬೆಂಬಲ ಕೊಡುತ್ತಾರೆ. ಕೆಲಸ ಮಾಡಲು ಮತ್ತೆ ಆಶೀರ್ವಾದ ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
