ಬೆಳಗಾವಿ ಲೋಕ ಸಮರ | ಪ್ರಮೋದ್ ಮುತಾಲಿಕ್ ಗೆ `ಬಿಜೆಪಿ ಟಿಕೆಟ್’..?
ಬಾಗಲಕೋಟೆ : ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್, ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಎರಡೂ ಪಕ್ಷಗಳು ಈ ಚುನಾವಣೆಯನ್ನ ಗಂಭೀರವಾಗಿ ತೆಗೆದುಕೊಂಡಿದೆ.
ಈ ಮಧ್ಯೆ ಬಿಜೆಪಿ ಟಿಕೆಟ್ ಗಾಗಿ ಪಕ್ಷದಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಮೂಲಗಳ ಪ್ರಕಾರ ಸುರೇಶ್ ಅಂಗಡಿ ಕುಟುಂಬಕ್ಕೋ ಅಥವಾ ಜಗದೀಶ್ ಶೆಟ್ಟರ್ ಕುಟುಂಬಕ್ಕೋ ಟಿಕೆಟ್ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಬಿಜೆಪಿ ಟಿಕೆಟ್ ರೇಸ್ ನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾಣಿಸಿಕೊಂಡಿದ್ದಾರೆ. ಈ ಕುರಿತು ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ.
ಟಿಕೆಟ್ ಗಾಗಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಟಿಕೆಟ್ ಸಿಗುವ ಭರವಸೆ ಇದೆ ಎಂದು ಹೇಳಿದ್ದಾರೆ.
ಅಲ್ಲದೆ ನನಗೆ ಈಗಾಗಲೇ 66 ವರ್ಷ ವಯಸ್ಸಾಗಿದೆ. ಇದು ನನ್ನ ಕೊನೆಯ ಚುನವಣೆ, ಹೀಗಾಗಿ ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ. ಬಿಜೆಪಿ ವರಿಷ್ಠರಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಅಭಿವೃದ್ಧಿ,ಹಿಂದುತ್ವದ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.