Ben Stokes | ಏಕಾಏಕಿ ವಿದಾಯಕ್ಕೆ ಸ್ಟೋಕ್ಸ್ ಕೊಟ್ಟ ಕಾರಣವೇನು ಗೊತ್ತಾ..?
ಇಂಗ್ಲೆಂಡ್ ತಂಡಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಹೀರೋ, ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಈ ವಿಚಾರವನ್ನ ಬೆನ್ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜುಲೈ 19 ರಿಂದ ಇಂಗ್ಲೆಂಡ್ ತಂಡ, ದಕ್ಷಿಣಾಫ್ರಿಕಾ ವಿರುದ್ಧ ಏಕದಿನ ಸರಣಿಯಾಡಲಿದೆ. ಈ ಸರಣಿ ಮೊದಲ ಪಂದ್ಯ ಬೆನ್ ಗೆ ಕೊನೆಯ ಏಕದಿನ ಪಂದ್ಯವಾಗಲಿದೆ.
ಬೆನ್ ಇತ್ತೀಚೆಗಷ್ಟೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿದ್ದು, ಇದೀಗ ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಬಗ್ಗೆ ಒಂದು ಪತ್ರ ಬರೆದುಕೊಂಡಿದ್ದಾರೆ.
ಅದರಲ್ಲಿ ನಾನು ಮಂಗಳವಾರ ಡರ್ಹಾಮ್ ನಲ್ಲಿ ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್ ನಲ್ಲಿ ಕೊನೆಯ ಪಂದ್ಯವನ್ನಾಡಲಿದ್ದೇನೆ. ನಾನು ಏಕದಿನ ಮಾದರಿ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಈ ನಿರ್ಧಾರವನ್ನು ತೆಗೆದುಕೊಳ್ಳಲು ತುಂಬಾ ಕಷ್ಟಕರವಾಗಿತ್ತು.ನಾನು ಇಂಗ್ಲೆಂಡ್ ತಂಡಕ್ಖಾಗಿ ಆಡಿದ ಪ್ರತಿ ನಿಮಿಷವನ್ನೂ ಆನಂದಿಸಿದ್ದೇನೆ. ನನ್ನ ಪ್ರಯಾಣ ಸ್ಮರಣೀಯವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಮೂರು ಮಾದರಿಗಳಲ್ಲಿ ಆಡುವುದು ತುಂಬಾ ತ್ರಾಸದಾಯಕ. ವೇಳಾಪಟ್ಟಿ ಮತ್ತು ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳಿಗೆ ತಕ್ಕಂತೆ ನನ್ನ ದೇಹವು ನನಗೆ ಬೆಂಬಲ ನೀಡುತ್ತಿಲ್ಲ. ಹೀಗಾಗಿ ನನ್ನ ನಿವೃತ್ತಿಯಿಂದ ಇತರ ಆಟಗಾರನಿಗೆ ಆಡುವ ಅವಕಾಶ ಸಿಗಲಿದೆ ಎಂದು ನಾನು ಭಾವಿಸುತ್ತೇನೆ. ಈ ನಿರ್ಧಾರದ ನಂತರ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ತನ್ನ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಎಂದು ಅನುಭವಿ ಆಲ್‌ರೌಂಡರ್ ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಬೆನ್ ಸ್ಟೋಕ್ಸ್ 2019ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ಪರ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಲಾರ್ಡ್ಸ್ ಅಂಗಳದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸ್ಟೋಕ್ಸ್ 84 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಆದ್ರೆ ಪಂದ್ಯ ಸೂಪರ್ ಓವರ್ ಗೆ ಹೋಗಿತ್ತು. ಸೂಪರ್ ಓವರ್ ಕೂಡ ಟೈ ಆಯ್ತು. ನಂತರ ಹೆಚ್ಚಿನ ಬೌಂಡರಿಗಳಿಸಿದ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯ್ತು. ಈ ಪಂದ್ಯದಲ್ಲಿ ಬೆನ್ 84 ರನ್ ಗಳಿಸಿದ್ದರು. ಹೀಗಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.
ಇನ್ನು ಇಂಗ್ಲೆಂಡ್ ಪರ 104 ಏಕದಿನ ಪಂದ್ಯಗಳನ್ನಾಡಿರುವ ಬೆನ್ ಸ್ಟೋಕ್ಸ್ 39.45 ರ ಸರಾಸರಿಯಲ್ಲಿ 2919 ರನ್ ಗಳಿಸಿದ್ದಾರೆ. 102 ಅವರ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಏಕದಿನ ಕ್ರಿಕೆಟ್ ನಲ್ಲಿ ಅವರು 21 ಅರ್ಧಶತಕ, ಮೂರು ಶತಕಗಳನ್ನು ಸಿಡಿಸಿದ್ದಾರೆ.
ಬೌಲಿಂಗ್ ನಲ್ಲಿ 74 ವಿಕೆಟ್ ಪಡೆದುಕೊಂಡಿದ್ದಾರೆ. 61 ರನ್ ನೀಡಿ ಐದು ವಿಕೆಟ್ ಪಡೆದಿರೋದು ಅವರ ಉತ್ತಮ ಪ್ರದರ್ಶನವಾಗಿದೆ.