ಕಾಲಮಿತಿಯೊಳಗೆ ಮೀನುಗಾರರಿಗೆ 5ಸಾವಿರ ಮನೆ ನಿರ್ಮಾಣ – ಸಿಎಂ ಬೊಮ್ಮಾಯಿ
ಕೇಬಲ್ ನೆಟ್ ಮೂಲಕ ಮೀನುಗಾರಿಕೆ ಮಾಡಲು 3 ಲಕ್ಷ ರೂಪಾಯಿ ಸಹಾಯಧನ ಒದಗಿಸಲಾಗುತ್ತಿದ್ದು, ಇದನ್ನು 1 ಸಾವಿರ ಮೀನುಗಾರರಿಗೆ ನೀಡಲು ಉದ್ದೇಶಿಸಲಾಗಿದೆ. ಇದೇ ರೀತಿ 1 ಸಾವಿರ ಸಂಘಗಳಿಗೆ ಮೀನುಗಾರಿಕೆ ಕೈಗೊಳ್ಳಲು ಅವಕಾಶ ಮಾಡಿಕೊಡಲು ಸೂಕ್ತ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿಗಳು ಕಾಲಮಿತಿಯೊಳಗೆ ಮೀನುಗಾರರಿಗೆ 5 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. 5 ಸಾವಿರದ 600 ಗ್ರಾಮ ಪಂಚಾಯಿತಿಗಳಲ್ಲಿರುವ ಕೆರೆಗಳ ಮೂಲಕ ಮೀನು ಅಭಿವೃದ್ಧಿಗೆ ಅನುದಾನ ಒದಗಿಸಲು ನಿರ್ಧರಿಸಲಾಗಿದೆ. ಮೀನುಗಾರರಿಗೆ ಡೀಸೆಲ್ ಹಾಗೂ ಸೀಮೆಎಣ್ಣೆ ಸಹಾಯಧನವನ್ನು ಸಹ ಹೆಚ್ಚಿಸಲಾಗಿದೆ. ಇವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಹೊಸ ತಳಿಗಳನ್ನು ಒಳನಾಡು ಮೀನುಗಾರಿಕೆಯಲ್ಲಿ ಪ್ರಯೋಗ ಮಾಡಿ, ಯಶಸ್ವಿಯಾಗಬೇಕಿದೆ. ಹೊಸ ತಳಿಗಳನ್ನು ಅನ್ವೇಷಿಸಿದರೆ ದೊಡ್ಡ ಮಾರುಕಟ್ಟೆ ಲಭ್ಯವಾಗಲಿವೆ. ಈ ನಿಟ್ಟಿನಲ್ಲಿ ಹಲವು ಅನ್ವೇಷಣೆಗಳು ನಡೆಯಬೇಕಿದೆ. ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದರು.
Bengaluru: Construction of 5 thousand houses for fishermen within time limit – CM Bommai