ಇಂದಿನಿಂದ ಬುಕ್ ಮಾಡೋ ಮದ್ವೆಗಳಿಗೆ ಪಾಸ್ ಕಡ್ಡಾಯ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಬುಕ್ ಮಾಡುವ ಮದುವೆಗಳಿಗೆ ಪಾಸ್ ಕಡ್ಡಾಯ ಹಾಗು ಕಲ್ಯಾಣ ಮಂಟಪದಲ್ಲಿ 100 ಮಂದಿಗಷ್ಟೆ ಅವಕಾಶ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತೀವ್ರಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆ ಸರ್ಕಾರ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದ್ದು, ಮದುವೆಗೆ ಕೆಲ ಷರತ್ತುಗಳನ್ನ ಹಾಕಿದೆ. ಇಂದಿನಿಂದ ಬುಕ್ ಮಾಡುವ ಮದುವೆಗಳಿಗೆ ಪಾಸ್ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಈಗಾಗಲೇ ಮದುವೆಗಳು ಬುಕ್ ಆಗಿದ್ದರೇ ಅವುಗಳಿಗೆ ಪಾಸ್ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಇದಲ್ಲದೆ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡಿಕೊಂಡರೇ 100 ಮಂದಿಗಷ್ಟೇ ಅವಕಾಶ ನೀಡಲಾಗುತ್ತದೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಸೇರಿದರೆ ಎಫ್ಐಆರ್ ದಾಖಲಿಸಲಾಗುತ್ತದೆ. ಮದುವೆ ಪಾಸ್ ಗಳನ್ನು ಮದುವೆ ಆಯೋಜಕರೇ ವಿತರಣೆ ಮಾಡಬೇಕು. ಹೆಚ್ಚಿನ ಪಾಸ್ ಕೊಟ್ಟಿದ್ದರೆ ಕಲ್ಯಾಣ ಮಂಟಪ ಮಾಲೀಕರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.








