ಲಂಡನ್ ನಲ್ಲಿ ಕಳುವಾಗಿದ್ದ ಐಷಾರಾಮಿ ಕಾರು ಪಾಕಿಸ್ತಾನದಲ್ಲಿ ಪತ್ತೆ..
ಯುನೈಟೆಡ್ ಕಿಂಗ್‌ಡಮ್ ನ ಲಂಡನ್ ನಿಂದ ಕಳವು ಮಾಡಲಾಗಿದ್ದ ಸುಮಾರು 2.39 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬೆಂಟ್ಲಿ ಮುಲ್ಸಾನ್ನೆ ಸೆಡಾನ್ ಕಾರು ಪಾಕಿಸ್ತಾನದಲ್ಲಿ ಪತ್ತೆಯಾಗಿದೆ. ಕರಾಚಿಯ ಐಷಾರಾಮಿ ಬಂಗಲೆಯಿಂದ ಪಾಕಿಸ್ತಾನದ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳು ಕರಾಚಿಯ ಬಂಗಲೆ ಮೇಲೆ ದಾಳಿ ನಡೆಸಿ ಐಷಾರಾಮಿ ಬೆಂಟ್ಲಿ ಕಾರನ್ನ ವಶಪಡಿಸಿಕೊಂಡಿದ್ದಾರೆ. ಕದ್ದ ಕಾರಿನ ಬಗ್ಗೆ ಯುಕೆ ರಾಷ್ಟ್ರೀಯ ಅಪರಾಧ ಏಜೆನ್ಸಿ ಅವರಿಗೆ ಮಾಹಿತಿ ನೀಡಿದೆ.
ಕೆಲವು ವಾರಗಳ ಹಿಂದೆ ಲಂಡನ್‌ನಲ್ಲಿ ಬೆಂಟ್ಲಿ ಐಷಾರಾಮಿ ಕಾರನ್ನ ಕಳವು ಮಾಡಲಾಗಿತ್ತು. ಇದೇ ದಂಧೆಯಲ್ಲಿ ಪಳಗಿರುವ ಕಳ್ಳರು ಪೂರ್ವ ಯುರೋಪಿಯನ್ ದೇಶದ ಉನ್ನತ ರಾಜತಾಂತ್ರಿಕರ ದಾಖಲೆಗಳನ್ನು ಬಳಸಿಕೊಂಡು ಕಾರನ್ನು ಪಾಕಿಸ್ತಾನಕ್ಕೆ ಯಶಸ್ವಿಯಾಗಿ ರಫ್ತು ಮಾಡಿದ್ದಾರೆ.
ಈ ವಾಹನದ ಬೆಲೆ USD 300,000 (ಅಂದಾಜು Rs 2.39 ಕೋಟಿ) ಮತ್ತು ಇದು ಬ್ರೆಂಟ್ಲಿ ಬ್ರ್ಯಾಂಡ್‌ನ ಅತ್ಯಂತ ದುಬಾರಿ ಕಾರು ಎನ್ನಲಾಗಿದೆ.
ಕಾರು ಕಳ್ಳತನದಲ್ಲಿ ಭಾಗಿಯಾಗಿದ್ದವರು ಅತ್ಯಾಧುನಿಕ ಕಾರಿನಲ್ಲಿದ್ದ ಟ್ರೇಸಿಂಗ್ ಟ್ರ‍್ಯಾಕರ್ ಅನ್ನು ತೆಗೆದುಹಾಕಲು ವಿಫಲರಾಗಿದ್ದಾರೆ. ಇದರ ಸುಧಾರಿತ ಟ್ರ‍್ಯಾಕಿಂಗ್ ಸಿಸ್ಟಮ್ ಮೂಲಕ ವಾಹನದ ನಿಖರವಾದ ಸ್ಥಳವನ್ನು ಪತ್ತೆ ಹಚ್ಚಲು ಬ್ರಿಟನ್ ಅಧಿಕಾರಿಗಳಿಗೆ ಅನುಕೂಲವಾಗಿದೆ. ಅಲ್ಲಿಂದ ಅಧಿಕಾರಿಗಳು ಪಾಕ್ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.
ಕರಾಚಿಯ ಬಂಗಲೆಯಲ್ಲಿ ಕಾರನ್ನ ಪತ್ತೆ ಹಚ್ಚಿದ ಅಧಿಕಾರಿಗಳು ಸೂಕ್ತ ದಾಖಲೆಗಳನ್ನ ಕೇಳಿದ್ದಾರೆ. ಮನೆ ಮಾಲೀಕರು ಸೂಕ್ತ ದಾಖಲೆಗಳನ್ನು ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿವಾಸದ ಮಾಲೀಕರು ಮತ್ತು ಅವರಿಗೆ ವಾಹನವನ್ನು ಮಾರಾಟ ಮಾಡಿದ ದಲ್ಲಾಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.