ಬೆಂಗಳೂರು: ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಕುರಿತು ಅಪಹಾಸ್ಯ ಮಾಡುವುದು ಹಾಗೂ ಬಸ್ ನಲ್ಲಿ ಅವರೊಂದಿಗೆ ಅಗೌರವದಿಂದ ನಡೆದುಕೊಂಡ ಕುರಿತು ದೂರುಗಳು ಬಂದರೆ, ಅಂತಹ ಬಸ್ ನಿರ್ವಾಹಕ ಅಥವಾ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ (Karnataka Transport Dept) ಸುತ್ತೋಲೆ ಹೊರಡಿಸಿದೆ.
ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವಾದ ಶಕ್ತಿ ಯೋಜನೆಯು ಜೂನ್ 11 ರಿಂದ ಜಾರಿಗೆ ಬಂದಿದೆ. ಆದರೆ, ಕೆಲವೊಂದು ಅಹಿತಕರ ಘಟನೆಗಳು ಈ ಮಹತ್ವದ ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡುತ್ತಿದೆ ಎಂದು ಇಲಾಖೆಯು ಅಸಮಾಧಾನ ವ್ಯಕ್ತಪಡಿಸಿದೆ.
ಚಾಲನಾ ಸಿಬ್ಬಂದಿಗಳು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವ ಮಹಿಳಾ ಪುಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದು ಹಾಗೂ ಈ ಕುರಿತು ಮಹಿಳಾ ಪ್ರಯಾಣಿಕರಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಗಂಭೀರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮಹಿಳೆಯರು ಇರುವ ಬಸ್ ನಿಲ್ದಾಣ ಅಥವಾ ಬಸ್ ನಿಲುಗಡೆ ಸ್ಥಳಗಳಲ್ಲಿ ಬಸ್ ನಿಲ್ಲಿಸದೇ ಇರುವುದು ಅಥವಾ ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸುವ ಕುರಿತು ಅಪಹಾಸ್ಯ ಮಾಡುವುದು, ಇನ್ನಿತರೆ ರೀತಿಯಲ್ಲಿ ಮಹಿಳೆಯರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿರುವ ಪ್ರಕರಣಗಳ ಘಟನೆಗಳು ಬೆಳಕಿಗೆ ಬಂದಿದ್ದು, ಒಂದು ವೇಳೆ ಈ ರೀತಿ ಘಟನೆಗಳು ಬೆಳಕಿಗೆ ಬಂದರೆ, ಅಂತಹ ವ್ಯಕ್ತಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.








