ಲೋಕಲ್ ಎಲೆಕ್ಷನ್ : ಸಿಎಂ ತವರಲ್ಲಿ ಬಿಜೆಪಿಗೆ ಭಾರಿ ಮುಖಭಂಗ
ಶಿವಮೊಗ್ಗ : ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತವರು ಜಿಲ್ಲೆಯಲ್ಲಿಯೇ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
ಜಿಲ್ಲೆಯ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸ್ಥಾನಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಎರಡರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದಾರೆ.
ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್ ಗಳಿದ್ದು, 34 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ ಕಾಂಗ್ರೆಸ್ 18, ಜೆಡಿಎಸ್ 11, ಬಿಜೆಪಿ 4 ಹಾಗೂ ಪಕ್ಷೇತರ 1 ಸ್ಥಾನದಲ್ಲಿ ಗೆಲುವು ಕಂಡಿದ್ದಾರೆ.
ಇತ್ತ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿಯೂ ಬಿಜೆಪಿ ಮುಗ್ಗರಿಸಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 15 ಸ್ಥಾನಗಳಿದ್ದು, ಕಾಂಗ್ರೆಸ್ 9 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿ ಕೇವಲ 6 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.










