ಭೂಮಿ ಪೂಜೆ ನೇರ ಪ್ರಸಾರ ಆಕ್ಷೇಪಿಸಿದವರಿಗೆ ಇಂದಿರಾ ಗಾಂಧಿ ಭಾಷಣದ ವಿಡಿಯೋ ಮೂಲಕ ಬಿಜೆಪಿ ತಿರುಗೇಟು
ಅಯೋಧ್ಯೆ, ಅಗಸ್ಟ್ 3: 1980 ರಲ್ಲಿ ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾದ ಇಂದಿರಾಗಾಂಧಿ ಅವರ ಭಾಷಣದ ವಿಡಿಯೋವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಸರ್ಕಾರಿ ಸ್ವಾಮ್ಯದ ಚಾನೆಲ್‌ನಲ್ಲಿ ರಾಮ್ ಮಂದಿರ ‘ಭೂಮಿ ಪೂಜ’ ನೇರ ಪ್ರಸಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವರಿಗೆ ತಿರುಗೇಟು ನೀಡಿದೆ.
ಭಾರತ ಮತ್ತು ಜಗತ್ತಿಗೆ ದಾರುಲ್ ಉಲೂಮ್ ನಿಜವಾದ ಇಸ್ಲಾಮಿಕ್ ಸಂಪ್ರದಾಯದ ಸೇವೆ ಸಲ್ಲಿಸುತ್ತಲೇ ಇರುತ್ತದೆ ಎಂದು 1980ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹೇಳಿರುವ ಈ ಅಪರೂಪದ ವಿಡಿಯೋವನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಡಿಡಿ ಯಲ್ಲಿ ರಾಮ ಮಂದಿರ ಭೂಮಿ ಪೂಜ ಪ್ರಸಾರವನ್ನು ವಿರೋಧಿಸುವ ಜನರು ಡಿಡಿಯಲ್ಲಿ ಪ್ರಸಾರವಾದ ಇಂದಿರಾ ಅವರ ದಿಯೋಬಂದ್ ಭೇಟಿಯ ಬಗ್ಗೆ ಏನು ಹೇಳುತ್ತಾರೆ? ಎಂದು ಬಿಜೆಪಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಸರ್ಕಾರದ ವಾಹಿನಿಯಾಗಿರುವ ಡಿಡಿಯಲ್ಲಿ ಅಯೋಧ್ಯೆಯ ರಾಮಮಂದಿರದ ಭೂಮಿಪೂಜೆಯ ನೇರಪ್ರಸಾರಕ್ಕೆ ವಿರೋಧ ಪಕ್ಷಗಳಿಂದ ಭಾರಿ ಟೀಕೆಗಳು ವ್ಯಕ್ತವಾಗಿವೆ. ಇಂಥ ಕಾರ್ಯಕ್ರಮವನ್ನು ನೇರಪ್ರಸಾರ ಮಾಡುವ ಮೂಲಕ ಸರ್ಕಾರ ಸಂಪನ್ಮೂಲಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಇದರ ನೇರಪ್ರಸಾರದ ಅವಶ್ಯಕತೆ ಏನಿದೆ ಎಂದು ಬಿಜೆಪಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ.
https://twitter.com/BJP4India/status/1289838589346369537
ಜಾತ್ಯತೀತತೆ ಮತ್ತು ಧಾರ್ಮಿಕ ಸಾಮರಸ್ಯದ ತತ್ವಗಳ ಮೇಲೆ ನಿಂತಿರುವ ದೇಶದ ರಾಷ್ಟ್ರೀಯ ವಾಹಿನಿ ದೂರದರ್ಶನದಲ್ಲಿ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಪ್ರಸಾರ ಮಾಡುವುದು ರಾಷ್ಟ್ರೀಯ ಸಮಗ್ರತೆಯ ಅಂಗೀಕೃತ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಸಿಪಿಐ ಸಂಸದ ಬಿನೊಯ್ ವಿಶ್ವಂ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದಾರೆ.
ಹಿಂದೆಂದೂ ಇಂಥಹ ಯಾವುದೇ ಕಾರ್ಯಕ್ರಮವನ್ನು ಡಿಡಿ ನೇರ ಪ್ರಸಾರ ಮಾಡಿಲ್ಲ. ಹಾಗಿರುವಾಗ ಈಗ್ಯಾಕೆ ಈ ಕಾರ್ಯಕ್ರಮ ಪ್ರಸಾರ ಮಾಡಬೇಕು ಎಂದವರಿಗೆ ಬಿಜೆಪಿ ತಿರುಗೇಟು ನೀಡಿದೆ.