ಮುಂಬೈ: ಇತ್ತೀಚೆಗೆ ಹಿಂದಿ ಸಿನಿಮಾ ನಟರು, ಕಿರುತೆರೆ ನಟರ ಆತ್ಮಹತ್ಯೆ ಸುದ್ದಿಗಳು ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿವೆ.
ಬಿಹಾರ ಮೂಲದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಇದಕ್ಕೆ ಉದಾಹರಣೆ.
ಅವರಂತೆ ಇನ್ನೂ ಅನೇಕ ಕಿರುತೆರೆ ನಟರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ.
ಇದರ ಬೆನ್ನಲ್ಲೇ ಮತ್ತೋರ್ವ ಉದಯೋನ್ಮುಖ ಕಿರುತೆರೆ ನಟ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಿಹಾರ ಮೂಲದ 26 ವರ್ಷದ ಅಕ್ಷತ್ ಉತ್ಕರ್ಷ್ ಅವರು ಮುಂಬೈನ ತಮ್ಮ ಫ್ಲಾಟಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂಬೋಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕೆಲವೇ ಕೆಲವು ಭೋಜ್‌ಪುರಿ ಸಿನಿಮಾಗಳು ಹಾಗೂ ಕೆಲವು ಟಿವಿ ಧಾರಾವಾಹಿಗಳಲ್ಲಿ ಅಕ್ಷತ್ ನಟಿಸಿದ್ದಾರೆ.
ಇನ್ನೂ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಪ್ರಯತ್ನದಲ್ಲಿದ್ದ ಅಕ್ಷತ್ ಅವರಿಗೆ ಸರಿಯಾದ ಅವಕಾಶಗಳು ಲಭ್ಯವಾಗದ ಕಾರಣ ಹತಾಶೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಆದರೆ, ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.








