Bidar: ಅಂತರರಾಜ್ಯ ಕಳ್ಳನ ಬಂಧನ : 10 ಲಕ್ಷ ಮೌಲ್ಯದ ಆಭರಣ ಜಪ್ತಿ
ಬೀದರ್ : ನಗರದ ಆದರ್ಶ ಹಾಗೂ ಜ್ಯೋತಿ ಕಾಲೊನಿಯಲ್ಲಿ ಸರಣಿ ಮನೆಗಳ್ಳತನ ಮಾಡಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 10 ಲಕ್ಷ ಮೌಲ್ಯದ 200 ಗ್ರಾಮ್ ಬಂಗಾರದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.
ನಗರದಲ್ಲಿ ಒಟ್ಟು ಏಳು ಮನೆಗಳ ಬೀಗ ಒಡೆದಿದ್ದ. ನಾಲ್ಕು ಮನೆಗಳಲ್ಲಿ ಕಳ್ಳರಿಗೆ ಏನೂ ದೊರಕಿರಲಿಲ್ಲ. ರೈಲು ಹಳಿಯ ಪಕ್ಕದಲ್ಲಿರುವ ಆದರ್ಶ, ಜ್ಯೋತಿ ಕಾಲೊನಿಯಲ್ಲಿ ಇರುವ ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದ. ರೈಲು ಹೋಗುವಾಗ ಹಾಗೂ ಬರುವಾಗ ಆಗುತ್ತಿದ್ದ ಸಪ್ಪಳದ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಬೀಗ ಪಡೆಯುತ್ತಿದ್ದರು. ಚಿಲಕಗಳಿಗೆ ಕೆಮಿಕಲ್ ಸ್ಪ್ರೆ ಮಾಡಿ ಶಬ್ದ ಬರದಂತೆ ಎಚ್ಚರ ವಹಿಸುತ್ತಿದ್ದ. ಕೆಲವು ಮನೆಗಳಲ್ಲಿ ಮನೆಯ ಮಾಲೀಕರು ಮನೆಯೊಳಗೆ ಮಲಗಿದ್ದಾಗಲೇ ಕಳ್ಳತನ ಮಾಡಿ ತನ್ನ ಕೈ ಚಳಕ ತೋರಿಸಿದ್ದ.
ರಾಯಚೂರು, ಗದಗ, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಬಾದಾಮಿ ಹಾಗೂ ಸೊಲ್ಲಾಪುರದಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲಿ ಪ್ರಕರಣಗಳು ದಾಖಲಾಗಿವೆ.ಗಾಂಧಿ ಗಂಜನ ಪೊಲೀಸ ಇನ್‌ಸ್ಪೆಕ್ಟರ್ ಜಿ.ಎಸ್.ಬಿರಾದಾರ, ಬೀದರ್ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ, ಪಿಎಸ್‌ಐ ಸಯ್ಯದ್ ಪಟೇಲ್, ದಯಾನಂದ ಮಡಿವಾಳ, ಸಿಬ್ಬಂದಿ ಆರೀಫ್ ನವಿನ್, ಅನಿಲ, ಇರ್ಫಾನ್ ಗಂಗಾಧರ, ಪ್ರವೀಣ ಹಾಗೂ ಶ್ರೀನಿವಾಸ ಅವರ ತಂಡ ಆರೋಪಿಯನ್ನು ಬಂಧಿಸಿದೆ. ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಡಿ.ಕಿಶೋರ ಬಾಬು ಬಹುಮಾನ ವಿತರಿಸಿದರು.