ಬೆಂಗಳೂರು: ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಪತ್ನಿ ಭವಾನಿ ಅವರ ಮಧ್ಯಂತರ ಜಾಮೀನು ಅವಧಿಯನ್ನು ಹೈಕೋರ್ಟ್ ವಿಸ್ತರಿಸಿ ಆದೇಶ ಹೊರಡಿಸಿದೆ.
ಮುಂದಿನ ಆದೇಶದವರೆಗೆ ಜಾಮೀನು ವಿಸ್ತರಣೆಗೊಂಡಿದೆ. ಈ ಮೂಲಕ ಭವಾನಿ ರೇವಣ್ಣ ಅವರ ಮಧ್ಯಂತರ ಜಾಮೀನು ರದ್ದು ಕೋರಿ ಎಸ್ಐಟಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿಯನ್ನು ನ್ಯಾ. ಕೃಷ್ಣದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಭವಾನಿ ರೇವಣ್ಣ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನು ಅವಧಿಯನ್ನು ವಜಾಗೊಳಿಸುವಂತೆ ಎಸ್ಐಟಿ ಪರ ವಕೀಲರು ರದ್ದು ಮಾಡುವಂತೆ ಮನವಿ ಮಾಡಿದರು.
ಭವಾನಿ ಅವರು ಸರಿಯಾಗಿ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ, ಸುಳ್ಳು ಮಾಹಿತಿ ನೀಡುತ್ತಾ ಇದ್ದಾರೆ. ರಿಲೀಫ್ ಸಿಕ್ಕಿದ್ದನ್ನ ದುರುಪಯೋಗ ಮಾಡಿಕೊಳ್ತಾ ಇದ್ದಾರೆ ಎಂದು ಎಸ್ಐಟಿ ಪರ ವಕೀಲರಾದ ಜಗದೀಶ್ ವಾದಿಸಿದರು. ಎಸ್ಐಟಿ ಪರ ರವಿಕುಮಾರ್ ವರ್ಮ ವಾದ ಮಂಡಿಸಿದರು. ಭವಾನಿ ವಿಚಾರಣೆಗೆ ಸಹಕರಿಸುತ್ತಿಲ್ಲ, ಭವಾನಿ ಅವರ ಮಗನ ವಿರುದ್ಧ ಅತ್ಯಾಚಾರ ಪ್ರಕರಣ ಇದೆ. ಗಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಇದೆ. ಇಬ್ಬರೂ ಮೊಬೈಲ್ ನೀಡುತ್ತಿಲ್ಲ. ತನಿಖೆಗೆ ಸಹಕಾರಿಸುತ್ತಿಲ್ಲ ಎಂದು ವಾದಿಸಿದರು. ಅಲ್ಲದೇ, ಭವಾನಿ ಅವರ ಬಂಧನ ಅನಿವಾರ್ಯತೆ ಇದೆ. ಅವರಿಂದ ಮೊಬೈಲ್, ಸಿಮ್ ಕಾರ್ಡ್ ವಶಕ್ಕೆ ಪಡೆಯಬೇಕಿದೆ. ಅವರು ಸಾಕಷ್ಟು ಸಿಮ್ ಕಾರ್ಡ್ ಗಳನ್ನು ಬದಲಿಸಿದ್ದಾರೆ. ಭವಾನಿಗೆ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ ಎಂದರು.
ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಎಸ್ ಐಟಿ ಅರ್ಜಿಯನ್ನು ವಜಾಗೊಳಿಸಿ, ಮುಂದಿನ ಆದೇಶದ ವರೆಗೆ ಮಧ್ಯಂತರ ಜಾಮೀನು ಅವಧಿ ವಿಸ್ತರಿಸಿತು.