ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಜ್ಯೋತಿರ್ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಅವರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಹಿಂದೂ ಸಮಾಜದ ಪ್ರಬಲ ನಾಯಕರ ನಡುವಿನ ಈ ಜಟಾಪಟಿ ಈಗ ಸವಾಲು ಮತ್ತು ಗಡುವುಗಳ ಹಂತ ತಲುಪಿದ್ದು, ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಮೀಜಿ ಕಠಿಣ ಪರೀಕ್ಷೆ ನೀಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಿಂದೂತ್ವದ ಬದ್ಧತೆಯನ್ನು ಪ್ರಶ್ನಿಸಿರುವ ಶಂಕರಾಚಾರ್ಯರು, ತಮ್ಮ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕೇವಲ 40 ದಿನಗಳ ಕಾಲಾವಕಾಶ ನೀಡಿದ್ದಾರೆ. ಈ ಅವಧಿಯಲ್ಲಿ ಬೇಡಿಕೆ ಈಡೇರದಿದ್ದರೆ ಯೋಗಿಯವರನ್ನು ನಕಲಿ ಹಿಂದೂ ಎಂದು ಘೋಷಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಅವರು ಮುಖ್ಯಮಂತ್ರಿಗಳ ಮುಂದೆ ಇಟ್ಟಿರುವ ಬೇಡಿಕೆಗಳು ಸ್ಪಷ್ಟ ಮತ್ತು ನೇರವಾಗಿವೆ:
1. ಗೋವನ್ನು ರಾಜ್ಯ ಮಾತೆ ಎಂದು ಘೋಷಿಸಬೇಕು: ಮಹಾರಾಷ್ಟ್ರ ಸರ್ಕಾರ ಹಸುವನ್ನು ರಾಜ್ಯ ಮಾತೆ ಎಂದು ಘೋಷಿಸಿದ ಮಾದರಿಯಲ್ಲಿ ಮತ್ತು ನೇಪಾಳ ದೇಶ ಹಸುವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಿದಂತೆ, ಉತ್ತರ ಪ್ರದೇಶದಲ್ಲೂ ಗೋವಿಗೆ ಅತ್ಯುನ್ನತ ಗೌರವ ಸಿಗಬೇಕು.
2. ಗೋಮಾಂಸ ರಫ್ತು ಸಂಪೂರ್ಣ ನಿಷೇಧ: ಮುಂದಿನ 40 ದಿನಗಳ ಒಳಗಾಗಿ ಉತ್ತರ ಪ್ರದೇಶದಿಂದ ನಡೆಯುತ್ತಿರುವ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಮಾರ್ಚ್ 11ರಂದು ಲಕ್ನೋದಲ್ಲಿ ಮಹಾ ಪಂಚಾಯತ್!
ತಮ್ಮ ಬೇಡಿಕೆಗಳನ್ನು ಈಡೇರಿಸಲು ವಿಫಲವಾದರೆ ಆಗುವ ಪರಿಣಾಮಗಳ ಬಗ್ಗೆಯೂ ಸ್ವಾಮೀಜಿ ಎಚ್ಚರಿಸಿದ್ದಾರೆ. ಹಿಂದೂ ಧರ್ಮದ ಕುರಿತು ನಿಮ್ಮ ಬದ್ಧತೆಯನ್ನು ಸಾಬೀತು ಮಾಡಿ, 40 ದಿನಗಳ ಒಳಗಾಗಿ ಗೋ ಹತ್ಯೆಯನ್ನು ನಿಲ್ಲಿಸಿ. ಆಗ ಮಾತ್ರ ನೀವೊಬ್ಬ ಹಿಂದೂ ಅನುಯಾಯಿ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ಈ ಸವಾಲನ್ನು ಸ್ವೀಕರಿಸಿ ಕಾರ್ಯರೂಪಕ್ಕೆ ತರಲು ವಿಫಲವಾದರೆ, ಮಾರ್ಚ್ 11ರಂದು ಲಕ್ನೋದ ವಿಧಾನ ಸಭೆಯ ಎದುರು ಸಾವಿರಾರು ಸಂತರನ್ನು ಒಗ್ಗೂಡಿಸಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಕಲಿ ಹಿಂದೂ ಎಂದು ಅಧಿಕೃತವಾಗಿ ಘೋಷಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಗೋವಿನ ಹೆಸರಿನಲ್ಲಿ ಎಮ್ಮೆ ಮಾಂಸ ರಫ್ತು ಆರೋಪ
ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಶಂಕರಾಚಾರ್ಯರು, ಉತ್ತರ ಪ್ರದೇಶ ರಾಜ್ಯವು ದೇಶದಲ್ಲಿಯೇ ಅತಿ ಹೆಚ್ಚು ಅಂದರೆ ಶೇ.40ರಷ್ಟು ಗೋಮಾಂಸವನ್ನು ರಫ್ತು ಮಾಡುತ್ತಿದೆ. ಕಡತಗಳಲ್ಲಿ ಎಮ್ಮೆಗಳ ಮಾಂಸ ಎಂದು ತೋರಿಸಿ ಗೋ ಮಾಂಸವನ್ನು ವಿದೇಶಗಳಿಗೆ ಕಳಿಸಲಾಗುತ್ತಿದೆ. ರಾಜ್ಯದಲ್ಲಿರುವ ಎಮ್ಮೆಗಳ ಸಂಖ್ಯೆಗೂ ಮತ್ತು ಅಲ್ಲಿಂದ ರಫ್ತಾಗುತ್ತಿರುವ ಮಾಂಸದ ಅಂಕಿ ಸಂಖ್ಯೆಗಳಿಗೂ ಯಾವುದೇ ತಾಳೆಯಾಗುತ್ತಿಲ್ಲ. ಹಸುವನ್ನು ಕೊಂದು ಗೋಮಾಂಸ ರಫ್ತು ಮಾಡಲಾಗುತ್ತಿದೆ ಎಂಬುದು ಸತ್ಯ ಎಂದು ಅಂಕಿಅಂಶಗಳ ಸಮೇತ ಆರೋಪಿಸಿದ್ದಾರೆ.
ಪ್ರಯಾಗ್ ರಾಜ್ ಘಟನೆಯೇ ಸಂಘರ್ಷಕ್ಕೆ ಮೂಲ?
ಈ ಇಬ್ಬರು ಪ್ರಮುಖರ ನಡುವಿನ ಶೀತಲ ಸಮರಕ್ಕೆ ಪ್ರಯಾಗ್ ರಾಜ್ ನಲ್ಲಿ ನಡೆದ ಮಾಘ ಮೇಳದ ಘಟನೆ ಕಾರಣ ಎನ್ನಲಾಗಿದೆ. ಮಾಘ ಮೇಳದಲ್ಲಿ ಪವಿತ್ರ ಸ್ನಾನ ಮಾಡಲು ತಮಗೆ ವಾಹನ ಸೌಕರ್ಯ ನೀಡದೆ ಕಾಲ್ನಡಿಗೆಯಲ್ಲಿ ತೆರಳುವಂತೆ ಮಾಡಲಾಯಿತು ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಖಂಡಿಸಿ ಶಂಕರಾಚಾರ್ಯ ಕ್ಯಾಂಪ್ ನಲ್ಲಿ ಜನವರಿ 18ರಿಂದ ಸತ್ಯಾಗ್ರಹ ಕೈಗೊಂಡಿದ್ದರೂ, ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.
11 ದಿನಗಳ ಕಾಲ ಕಠಿಣ ಉಪವಾಸ ಮಾಡಿದರೂ ಯಾವ ಅಧಿಕಾರಿಯೂ ಪುಣ್ಯ ಸ್ನಾನ ಮಾಡುವಂತೆ ಬಂದು ಆಹ್ವಾನ ನೀಡಲಿಲ್ಲ. ಆಡಳಿತ ವ್ಯವಸ್ಥೆಯ ಈ ಧೋರಣೆಯಿಂದ ಬೇಸತ್ತು ಪ್ರತಿಭಟನೆ ಅಂತ್ಯಗೊಳಿಸಿ ಅವರು ಅಲ್ಲಿಂದ ನಿರ್ಗಮಿಸಿದ್ದರು. ಮುಂದಿನ ವರ್ಷ ಗೌರವಯುತವಾಗಿ ಆಹ್ವಾನಿಸಿದರೆ ಮಾತ್ರ ಮಾಘ ಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.
ನೀವೀಗ ಸಂತರಲ್ಲ, ಕೇವಲ ರಾಜಕಾರಣಿ!
ಈಗಾಗಲೇ ಯೋಗಿ ಆದಿತ್ಯನಾಥ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಶಂಕರಾಚಾರ್ಯರು, ಯೋಗಿ ಆದಿತ್ಯನಾಥ್ ಈಗ ಸಂತರಲ್ಲ, ಅವರು ಕೇವಲ ಮುಖ್ಯಮಂತ್ರಿಗಳು. ಅವರು ರಾಜ್ಯದ ಶಿಕ್ಷಣ, ರಸ್ತೆ, ಮೂಲ ಸೌಕರ್ಯ ಅಭಿವೃದ್ಧಿ ಕುರಿತು ಆಲೋಚಿಸಲಿ. ಧರ್ಮದ ವಿಚಾರವನ್ನು ಸಾಧುಗಳಿಗೆ ಬಿಡಬೇಕು ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದರು.
ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಧರ್ಮ ಮತ್ತು ರಾಜಕಾರಣದ ನಡುವಿನ ಈ ಸಂಘರ್ಷ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮಾರ್ಚ್ 11ರ ಒಳಗೆ ಯೋಗಿ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.








