ಕೋಲಾರ: ಮದುವೆಯಾದ ಕೆಲವೇ ಗಂಟೆಗಳಲ್ಲಿ ವರ ಹಾಗೂ ವಧು ಮಚ್ಚಿನಿಂದ ಹೊಡೆದಾಡಿಕೊಂಡು ಸಾವನ್ನಪ್ಪಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವರನೇ ಪತ್ನಿಯ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮದುವೆ ಸಂಭ್ರಮದ ದಿನವೇ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಜಿಲ್ಲೆಯ ಕೆಜಿಎಫ್ ತಾಲ್ಲೂಕು ಚಂಬಾರಸನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ಈ ನಿಗೂಢ ಸಾವಿನ ತನಿಖೆ ನಡೆಸುತ್ತಿದ್ದಾರೆ. ನವೀನ್ ಹಾಗೂ ಲಿಖಿತಾಶ್ರೀ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಮದುವೆಯಾದ ಕೆಲವೇ ಗಂಟೆಗಳಲ್ಲಿ ಈ ದುರಂತ ನಡೆದಿದೆ.
ನವೀನ್ ಕುಮಾರ್, ರಾಜ್ಪೇಟ್ ರಸ್ತೆಯಲ್ಲಿ ರೆಡಿಮೇಡ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ಆತ ತನ್ನ ಅಕ್ಕ ಪವಿತ್ರಾ ಮನೆ ಚಂಬಾರಸನಹಳ್ಳಿಯಲ್ಲಿ ಕೆಲವು ತಿಂಗಳುಗಳಿಂದ ನೆಲೆಸಿದ್ದ. ಆರು ತಿಂಗಳ ಹಿಂದೆ ನವೀನ್ ತಾಯಿ ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೆ ನವೀನ್ಗೂ ಬೈನೇಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರ ಪುತ್ರಿ ಲಿಖಿತಾಶ್ರೀ ಮಧ್ಯೆ ಮದುವೆ ಮಾತುಕತೆ ನಡೆಸಲಾಗಿತ್ತು.
ಆಷಾಢ ಬಂದ ಹಿನ್ನೆಲೆಯಲ್ಲಿ ಮದುವೆ ಮಾತು ನಿಂತಿತ್ತು. ಆದರೆ, ನವೀನ್ ಆ.6 ರಂದು ಏಕಾಏಕಿ ಲಿಖಿತಾಶ್ರೀ ಜೊತೆಗೆ ನಾಳೆಯೇ ನನ್ನ ಮದುವೆ ಮಾಡಿಸಿ. ಇಲ್ಲವಾದರೆ ನಾನು ಸತ್ತು ಹೋಗುತ್ತೇನೆ ಎಂದು ಕುಟುಂಬಸ್ಥರಿಗೆ ಹೆದರಿಸಿದ್ದ. ಈ ವೇಳೆ ಹುಡುಗಿಯ ಒಪ್ಪಿಗೆಯೂ ಇದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸರಳವಾಗಿ ಮದುವೆ ಮಾಡಿಸಿದ್ದರು.
ಆದರೆ, ಘಟನೆಯ ನಂತರ ಆತನ ತಂದೆ ಪ್ರತಿಕ್ರಿಯೆ ನೀಡಿದ್ದು, ನವೀನ್ ಮಾನಸಿಕ ಸ್ಥಿತಿ ಸರಿ ಇರಲಿಲ್ಲ. ಅವನಿಗೆ ತಿಂದ ಊಟ ವಾಂತಿಯಾಗುತ್ತಿತ್ತು. ಕೆಲವೊಮ್ಮೆ ಹೇಳದೆ ಕೇಳದೆ ಎಲ್ಲೆಂದರಲ್ಲಿ ಹೋಗುತ್ತಿದ್ದ. ನಾವು ವಾತಾವರಣ ಬದಲಾಗಲಿ ಎಂದು ಚಂಬಾರಸನಹಳ್ಳಿಗೆ ಕಳಿಸಿದ್ದೆವು. ಮದುವೆ ಮಾಡಿದರೆ ಸರಿ ಹೋಗುತ್ತಾನೆಂದು ತಿಳಿದು ಮದುವೆ ಮಾಡಿದ್ದೆವು ಎಂದು ಹೇಳಿದ್ದಾರೆ.
ಆದರೆ, ಮದುವೆ ದಿನ ಚೆನ್ನಾಗಿಯೇ ಇದ್ದ ಆತ ಪತ್ನಿ ಲಿಖಿತಾಶ್ರೀಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಘಟನೆ ಸಂಬಂಧ ಕೆಜಿಎಫ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯಲ್ಲಿ ನವೀನ್ ಮೇಲೆ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ಘಟನೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.