`ಹಳ್ಳಿ ಹೈದ’ನಿಗೆ ದೊಡ್ಮನೆ ಕಿರೀಟ : 53 ಲಕ್ಷ ರೂ ಬಹುಮಾನ
ಬೆಂಗಳೂರು : ಹಳ್ಳಿ ಹೈದ ಮಂಜು ಪಾವಗಡ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಪಂಚಿಂಗ್ ಡೈಲಾಗ್ ಗಳ ಮೂಲಕ ಮನೆ ಮಂದಿಯನ್ನು ಮತ್ತು ನೋಡುವರನ್ನು ರಂಜಿಸುತ್ತಾ, ಕನ್ನಡಿಗರಿಗೆ ಹತ್ತಿರವಾಗಿದ್ದ ಮಂಜುಗೆ ಬಿಗ್ ಬಾಸ್ ಸೀಸನ್ 8 ರ ಕಿರೀಟ ದೊರಕಿದೆ. ಬಿಸ್ ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ. ಹಣವನ್ನು ನೀಡಲಾಗಿದೆ.
ಜಾಗ ಯಾವುದೇ ಆಗಲಿ, ಎದುರಿಗಿರುವ ವ್ಯಕ್ತಿ ಹೇಗೆ ಇರಲಿ. ಆ ಸಮಯದಲ್ಲೇ ಪಂಚಿಂಗ್ ಡೈಲಾಗ್ ಹೊಡೆದು ನಗಿಸಿ ತಿರುಗೇಟು ನೀಡುವ ಕಲೆಯನ್ನು ಮಂಜು ಮೈಗೂಡಿಸಿಕೊಂಡಿದ್ದರು. ದೊಡ್ಡಮನೆಯಲ್ಲಿ ನಗು ಇದೆ ಎಂದರೆ ಅಲ್ಲಿ ಮಂಜು ಇದ್ದೇ ಇರುತ್ತಾರೆ. ಮಂಜು ಇದ್ದಲ್ಲಿ ನಗುವಿಗೆ, ಮನರಂಜನೆಗೇನು ಕಮ್ಮಿ ಇಲ್ಲ ಎಂಬಂತಾಗಿತ್ತು. ಬಹುಶಃ ಇಂದು ಮಂಜು ವಿನರ್ ಆಗೋಕೆ ಅತಿ ದೊಡ್ಡ ಕಾರಣ ಇದೇ ಎಂದರೇ ತಪ್ಪಾಗಲಾರದು.
ಬಿಗ್ ಬಾಸ್ ಮನೆಯಲ್ಲಿ ಪಕ್ಕಾ ಮೈಂಡ್ ಗೇಮ್ ಆಡುತ್ತಾ, ಗಂಭೀರವಾಗಿ ಇದ್ದ ಸ್ಪರ್ಧಿಗಳ ಮಧ್ಯೆ ಮಂಜು ಸದಾ ಹಾಸ್ಯ ಮಾಡುತ್ತಾ ಮನರಂಜನೆ ನೀಡುತ್ತಿದ್ದರು. ಅಂದಹಾಗೆ ಬಿಗ್ ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿ ದಿವ್ಯಾ ಸುರೇಶ್ ಜೊತೆ ಇದ್ದ ಮಂಜು ತುಸು ಮಂಕಾಗಿದ್ದರು. ಆದರೆ, ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲೇ ಮಂಜು ಅವರು ಎಲ್ಲರ ಜೊತೆ ಬೆರೆಯಲು ಆರಂಭಿಸಿದರು. ಎಲ್ಲ ಕಡೆಗಳಲ್ಲೂ ಸ್ವತಂತ್ರವಾಗಿ ಗುರುತಿಸಿಕೊಂಡರು, ಎಲ್ಲ ಸ್ಪರ್ಧಿಗಳ ಜೊತೆಗೆ ಬೆರೆಯಲು ಪ್ರಾರಂಭಿಸಿದರು. ಆಗ ಮನೆ ಮಂದಿ ಮಂಜುವನ್ನು ಮೆಚ್ಚಿಕೊಳ್ಳಲು ಪ್ರಾರಂಭಿಸಿದರು. ಈ ಹಂತದಲ್ಲಿ ಸಂಬರಗಿ, ಚಕ್ರವರ್ತಿ ವಿರುದ್ಧ ಮಂಜು ಗರಂ ಆದರೂ ಬಳಿಕ ತನ್ನಾಟವನ್ನು ಆಡುತ್ತಾ ಮುಂದೆ ಸಾಗಿ ಇದೀಗ ದೊಡ್ಡಮನೆಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.