ನಗು ನಗುತ್ತಾ ಮತ್ತೆ ಹೊಸದಾಗಿ ಜೀವನ ಆರಂಭಿಸಿದ ಚೈತ್ರಾ ಕೊಟ್ಟೂರು..!
ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಮದುವೆ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಮದುವೆಯಾಗಿ ಕೆಲವೇ ಗಂಟೆಯಲ್ಲೇ ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ನಟಿ ಚೈತ್ರಾ ಕೊಟ್ಟೂರು ಇತ್ತೀಚೆಗೆ ಆತ್ಮಹತ್ಯೆಗೂ ಯತ್ನಿಸಿದ್ದರು. ಇಷ್ಟೆಲ್ಲಾ ಹೈಡ್ರಾಮಾಗಳ ನಂತರ ಇದೀಗ ಚೈತ್ರಾ ಮತ್ತೊಮ್ಮೆ ಲೈಮ್ ಲೈಟ್ ಗೆ ಬಂದಿದ್ದಾರೆ.
ಚೈತ್ರಾ ಕೊಟ್ಟೂರು ಇದೀಗ ಫೇಸ್ ಬುಕ್ ನಲ್ಲಿ ಹೊಸ ಪ್ರೊಫೈಲ್ ಫೋಟೋ ಅಪ್ಲೋಡ್ ಮಾಡಿ, ‘ಬದುಕು ಮತ್ತೆ ಕೈಬೀಸಿ ಕರೆದಾಗ, ಎರಡೆರಡು ಸ್ಯಾನಿಟೈಸರ್ ಬಾಟಲಿಗಳನ್ನು ಹೆಚ್ಚಾಗಿ ಇರಿಸಿಕೊಂಡು ಮುಂದೆ ಸಾಗಿ. ದೇಹ ಸೇರಿ ಸಾವಿನ ದವಡೆಗೆ ನೂಕುವ ಕ್ರಿಮಿಯು, ಬದುಕಿನ ಮಹತ್ವವನ್ನೂ ತಿಳಿಸುವಲ್ಲಿ ಯಶಸ್ವಿಯಾಗುತ್ತದೆ. ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಆಭಾರಿ…’ ಎಂದು ಬರೆದುಕೊಂಡಿದ್ದಾರೆ.
ಮಂಡ್ಯದ ನಾಗಾರ್ಜುನ್ ಜೊತೆ ಬೆಂಗಳೂರಿನ ದೇವಸ್ಥಾನದಲ್ಲಿ ತಾಳಿ ಕಟ್ಟಿಸಿಕೊಂಡಿದ್ದ ಚೈತ್ರಾ ವಿರುದ್ಧ ನಾಗಾರ್ಜುನ್ ಕುಟುಂಬದವರು ಬಲವಂತದ ಮದುವೆ ಎಂದು ಆರೋಪ ಮಾಡಿದ್ದರು. ಬಳಿಕ ಇಬ್ಬರು ಕುಟುಂಬದವರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ನಾಗಾರ್ಜುನ್ ಚೈತ್ರಾ ಬಿಟ್ಟು ತನ್ನ ಕುಟುಂಬದ ಜೊತೆ ತೆರಳಿದ್ದರು.
ಇದರಿಂದ ಮನನೊಂದ ಚೈತ್ರಾ ಆತ್ಮಹತ್ಯೆಗೂ ಯತ್ನಿಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಚೈತ್ರಾ ಈಗ ಮತ್ತೆ ಹೊಸ ಹುರುಪಿನೊಂದಿಗೆ ವಾಪಸ್ ಆಗಿದ್ದಾರೆ. ನಗುತ್ತಾ ಸಂತಸದಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಚೈತ್ರಾ ಪೋಸ್ಟ್ ಗೆ ನೆಟ್ಟಿಗರು ಧೈರ್ಯದ ಮಾತುಗಳನ್ನು ಹೇಳುತ್ತಿದ್ದಾರೆ.








