ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ (Bihar Assembly Election Result) ಹೊರಬಿದ್ದಿದೆ. ಎನ್‌ಡಿಎಗೆ ಸ್ಪಷ್ಟ ಬಹುಮತ ಬಂದಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಸರ್ವಸನ್ನದ್ದವಾಗಿದೆ. ಆದರೆ, ಸಿಎಂ ಯಾರಾಗುತ್ತಾರೆ ಕಾದುನೋಡಬೇಕು. ಅರೆ.. ಯಾಕೆ ಈ ಪ್ರಶ್ನೆ ಉದ್ಭವಿಸಿತು ಎಂಬುವುದಕ್ಕೆ ಉತ್ತರ ಕೊನೆಯಲ್ಲಿ ನೀಡುವೆ. ಅದಕ್ಕೂ ಮೊದಲು ಈ ವಿಧಾನಸಭಾ ಚುನಾವಣೆ 3-4 ಕಾರಣಕ್ಕೆ ವಿಶೇಷವೆನ್ನಿಸುತ್ತಿದೆ. ಮೊದಲನೇಯದ್ದು “ಸರ್”, ಎರಡನೇಯದ್ದು “ಮಹಿಳಾ ಮತ್ತು ಯುವ ಮತದಾರರು”, ಮೂರನೇಯದ್ದು ಜನ್ ಸುರಾಜ್ ಪಕ್ಷದ ಸ್ಥಾಪಕ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಕೊನೆಯದಾಗಿ “ಬಿಜೆಪಿ 89 ಕ್ಷೇತ್ರಗಳಲ್ಲಿ ವಿಜಯಶಾಲಿ”ಯಾಗಿದ್ದು.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ದಾಖಲೆಯ 202 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಮೂಲಕ ಪ್ರತಿ ಪಕ್ಷಗಳನ್ನು ಕ್ಲೀನ್‌ಸ್ವೀಪ್ ಮಾಡಿದೆ. ಎನ್‌ಡಿಎ ಮಿತ್ರಕೂಟ (ಬಿಜೆಪಿ 89, ಜೆಡಿಯು 85, ಎಲ್‌ಜೆಪಿ (ಆರ್‌ವಿ) 19, ಹೆಚ್‌ಎಎಮ್ (ಎಸ್) 5 ಮತ್ತು ಆರ್‌ಎಲ್‌ಎಮ್ 4) ಸ್ಥಾನಗಳಲ್ಲಿ ಗೆಲುವು ಕಂಡಿದೆ. ಇನ್ನು, ಮಹಾಘಟಬಂದನ್ 35 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಹೀನಾಯ ಸೋಲು ಕಂಡಿದೆ. (ಕಾಂಗ್ರೆಸ್ 6, ಆರ್‌ಜೆಡಿ 25, ಸಿಪಿಐ (ಎಮ್‌ಎಲ್) (ಎಲ್) 2, ಸಿಪಿಐ (ಎಮ್) 1, ಐಐಪಿ 1) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)
ಬಿಹಾರ ವಿಧಾನಸಭೆ ಚುನಾವಣೆ ಆರಂಭಕ್ಕೂ ಮುನ್ನ ಚುನಾವಣಾ ಆಯೋಗ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿತು (SIR). ಆಗ, ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯವರು ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ವೋಟ್ ಚೋರಿ ಆರೋಪಗಳನ್ನು ಮಾಡಿದ್ದರು. ಮತಪಟ್ಟಿ ಪರಿಷ್ಕರಣೆ ಮೂಲಕ 65 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಚುನಾವಣಾ ಆಯೋಗವನ್ನು ಬಳಸಿಕೊಂಡು ಬಿಜೆಪಿ ಈ ರೀತಿ ಮತಗಳವು ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿತ್ತು.
ಅಲ್ಲದೇ, ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಮತಗಳವು ಆರೋಪದ ಮೂಲಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಸೇರಿಕೊಂಡು 16 ದಿನಗಳ ವೋಟ್ ಅಧಿಕಾರ್ ಯಾತ್ರೆ ಕೈಗೊಂಡಿದ್ದರು. ಆದರೆ, ಈ ಯಾತ್ರೆ ಫಲ ಕೊಡಲಿಲ್ಲ ಎನ್ನಬಹುದು. ಮತಪಟ್ಟಿ ಪರಿಷ್ಕರಣೆ ಬಳಿಕ ಈ ಬಾರಿ ಬಿಹಾರದಲ್ಲಿ ದಾಖಲೆಯ ಶೇ 65.40 ರಷ್ಟು ಪ್ರಮಾಣದಲ್ಲಿ ಮತದಾನವಾಗಿದೆ. ಇದು ಐತಿಹಾಸಿಕ ದಾಖಲೆಯಾಗಿದೆ.
ಮಹಿಳಾ ಮತ್ತು ಯುವ ಮತದಾರರು (Women and youth voters )
ಈ ಬಾರಿ ಬಿಹಾರದ ಮಹಿಳಾ ಮತ್ತು ಯುವ ಮತದಾರರು ಎನ್‌ಡಿಎನ ಕೈ ಹಿಡಿದಿದ್ದಾರೆ. ಇದಕ್ಕೆ ಕಾರಣವೂ ಇದೆ. ಮೊದಲನೇಯದಾಗಿ ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನೆಯಡಿ 1.25 ಕೋಟಿ ಮಹಿಳೆಯರಿಗೆ ತಲಾ 10 ಸಾವಿರ ರೂ. ವರ್ಗ ಮಾಡಿದ್ದರು. ಇದು ಮಾತ್ರವಲ್ಲದೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಮದ್ಯದ ಮೇಲೆ ಹೇರಿದ್ದ ನಿರ್ಬಂಧಕ್ಕೆ ಈಗಲೂ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ. ಈ ಕಾರಣಗಳಿಂದ ಮಹಿಳೆಯರು ಎನ್‌ಡಿಎಗೆ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿದೆ. ಬಿಹಾರ ಚುನಾವಣೆ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ 71. 6 ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ. ಇದು ಎನ್‌ಡಿಎಗೆ ವರದಾನವಾಗಿದೆ.
ಮಹಿಳೆಯರ ಜೊತೆಗೆ ಜೆನ್ Z ಕೂಡ ಈ ಬಾರಿ ಎನ್‌ಡಿಎ ಪರ ನಿಂತಿದೆ. ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸೇನೆಯಲ್ಲಿ ಹೆಚ್ಚಾಗಿರುವ ಬಿಹಾರದ ಯೋಧರ ಕೂರಿತು ಗುಣಗಾನ ಮಾಡಿದರು. ಇದು ಯುವಕರ ಮೇಲೆ ಪ್ರಭಾವ ಬೀರಿದೆ. ಅಲ್ಲದೇ, ಚುನಾವಣಾ ಆಯೋಗವು ಜೀವಿಕಾ ದೀದಿಯರನ್ನು ಬಳಸಿಕೊಂಡು ಮಾಡಿದ ಮತದಾನ ಬಗ್ಗೆ ಜಾಗೃತಿ ಫಲ ನೀಡಿದೆ ಎನ್ನಬಹುದು. ಒಟ್ಟಿನಲ್ಲಿ ಈ ಬಾರಿ ಬಿಹಾರದಲ್ಲಿ ಸುಮಾರು 14 ಲಕ್ಷ ಯುವ ಮತದಾರರು ಮೊದಲ ಬಾರಿ ಮತದಾನ ಮಾಡಿದ್ದಾರೆ. ಇದು ಎನ್‌ಡಿಗೆ ಪ್ಲಸ್ ಆಗಿದೆ.
ಜನ್ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor )
ಇದೇ ನರೇಂದ್ರ ಮೋದಿ, ನಿತೀಶ್ ಕುಮಾರ್ ಅಧಿಕಾರದ ಗದ್ದುಗೆ ಏರಿಸುವಲ್ಲಿ ಸಫಲರಾಗಿದ್ದ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್, ಬಿಹಾರದಲ್ಲಿ ಗೆಲುವನ್ನು ಹುಡುಕಿಕೊಳ್ಳಲು ವಿಫಲರಾದರು. ಪ್ರಶಾಂತ್ ಕಿಶೋರ್ 2024ರಲ್ಲಿ ಜನ್ ಸುರಾಜ್ ಪಕ್ಷವನ್ನು ಸ್ಥಾಪಿಸಿ ರಾಜ್ಯವ್ಯಾಪಿ 3000 ಕಿಮೀ ಪಾದಯಾತ್ರೆ ಮಾಡಿ ಪಕ್ಷ ಸಂಘಟನೆ ಯತ್ನ ಮಾಡಿ, 200ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಆದರೆ, ಒಬ್ಬೇ ಒಬ್ಬ ಅಭ್ಯರ್ಥಿ ಕೂಡ ಗೆಲ್ಲಲಿಲ್ಲ.
ಇದನ್ನೂ ಓದಿ: ಬಿಹಾರ ಚುನಾವಣಾ ಫಲಿತಾಂಶ: ಜೆಡಿಎಸ್ -ಬಿಜೆಪಿ ಮೈತ್ರಿ ಮತ್ತಷ್ಟು ಬಲಿಷ್ಠ ಕುಮಾರಣ್ಣ ದಿಲ್ ಖುಷ್
ಬಿಜೆಪಿ 89 ಕ್ಷೇತ್ರಗಳಲ್ಲಿ ವಿಜಯಶಾಲಿ (BJP 89 seats)
2020ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 74 ಕ್ಷೇತ್ರಗಳಲ್ಲಿ ಗೆದ್ದಿತ್ತು. 19. 46 ರಷ್ಟು ಮತ ಪಡೆದುಕೊಂಡಿತ್ತು. ಈ ಬಾರಿ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 89 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. 20. 08 % ಮತಗಳನ್ನು ಪಡೆದುಕೊಂಡಿದೆ. ಇದು ಮಿತ್ರ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಹೌದು, ಮುಂದಿನ ದಿನಗಳಲ್ಲಿ ಜೆಡಿಯು, ಆರ್‌ಜೆಡಿ ಪಕ್ಷಗಳಿಂತಲೂ ಅತ್ಯಂತ ದೊಡ್ಡ ಪರ್ಯಾಯ ಪಕ್ಷವಾಗುವ ಸಂದೇಶ ರವಾನಿಸಿದೆ.
ಯಾರಾಗುತ್ತಾರೆ ಬಿಹಾರ ಸಿಎಂ (Chirag Paswan CM race)
ಈ ಪ್ರಶ್ನೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬಿಜೆಪಿ ಮಹರಾಷ್ಟ್ರ ರೀತಿ ಮಾಡುತ್ತಾ ಕಾದುನೋಡಬೇಕು. ಹೌದು, ಮಹಾರಾಷ್ಟ್ರದಲ್ಲಿ ಚುನಾವಣೆ ಸಂದರ್ಭದಲ್ಲಿ ಏಕನಾಥ್ ಶಿಂದೆ ಅವರೇ ಮುಂದಿನ ಮುಖ್ಯಮಂತ್ರಿ ಅಂತ ಬಿಜೆಪಿ ಪರೋಕ್ಷವಾಗಿ ಹೇಳಿತ್ತು. ಆದರೆ, ಗೆದ್ದ ಮೇಲೆ ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಇದೇ ರೀತಿ ಬಿಹಾರದಲ್ಲೂ ನಡೆಯುತ್ತಾ ಗೊತ್ತಿಲ್ಲ.
ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುಶಾಸನ ಮತ್ತೆ ಬರಲಿದೆ ಎಂದು ಪ್ರಚಾರ ಮಾಡುವ ಮೂಲಕ ಪರೋಕ್ಷವಾಗಿ ಸುಶಾಸನ ಬಾಬು ಎಂದೇ ಖ್ಯಾತರಾಗಿರುವ ನಿತೀಶ್ ಕುಮಾರ್ ಪುನಃ ಸಿಎಂ ಆಗಲಿದ್ದಾರೆ ಎಂಬ ಸಂದೇಶ ನೀಡಿದ್ದರು. ಆದರೆ, ಅತ್ತಸಿಎಂ ಕುರ್ಚಿಗೆ ಏರಲು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಪೈಪೋಟಿಯಲ್ಲಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ಬಿಹಾರ ಚುನಾವಣೆ ಹಲವು ಕಾರಣಗಳಿಂದ ರಾಜಕೀಯ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದಂತು ಸುಳ್ಳಲ್ಲ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








