ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಅವರು, ಬೇಸಿಗೆ ಕಾಲದ ಪ್ರವಾಸಗಳಲ್ಲಿ ವಿಹಾರಕ್ಕಾಗಿ ಲಿಕ್ವಿಡ್ ಹೈಡ್ರೋಜನ್ ಬಳಸಿ ಸಾಗುವ ಸೂಪರ್ಯಾಚ್ (ಐಷಾರಾಮಿ ವಿಹಾರ ನೌಕೆ) ಖರೀದಿಸಿದ್ದಾರೆ. ಈ ಮೊದಲು ಐಷಾರಾಮಿ ಬೃಹತ್ ದೋಣಿಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ಬಿಲ್ ಗೇಟ್ಸ್, ಇದೀಗ ಸ್ವಂತ ವಿಹಾರ ನೌಕೆಯನ್ನು ಖರೀದಿಸಿದ್ದಾರೆ. ಲಿಕ್ವಿಡ್ ಹೈಡ್ರೋಜನ್ ಬಳಸಿ ಸಾಗುವ ಈ ನೌಕೆಯು ನೀರನ್ನು ಹೊರಬಿಡುತ್ತದೆ. ಇದನ್ನು 4,6೦೦ ಕೋಟಿ ನೀಡಿ ಬಿಲ್ ಗೇಟ್ಸ್ ಅವರು ಖರೀದಿಸಿದ್ದಾರೆ.ಲಿಕ್ವಿಡ್ ಹೈಡ್ರೋಜನ್ ಇಂಧನವಾಗಿ ಬಳಸಿರುವ ಮೊದಲ ಐಷಾರಾಮಿ ನೌಕೆ ಇದಾಗಿದೆ.
ನೌಕೆ ಹೇಗಿದೆ ?
370 ಅಡಿ ಉದ್ದದ ಐಷಾರಾಮಿ ನೌಕೆಯು ಐದು ಅಂತಸ್ತು ಹೊಂದಿದ್ದು, 14 ಅತಿಥಿಗಳಿಗೆ ವ್ಯವಸ್ಥೆಯಿದೆ. ಜಿಮ್, ಯೋಗ ಸ್ಟುಡಿಯೊ, ಬ್ಯೂಟಿ ರೂಂ, ಮಸಾಜ್ ಪಾರ್ಲರ್ ಹಾಗೂ ನೌಕೆಯ ಹಿಂಬದಿಯ ಡಕ್ಕೆಯಲ್ಲಿ ಕೊಳ ಹಾಗೂ 31 ಮಂದಿ ಸಿಬ್ಬಂದಿಯನ್ನು ಸೂಪರ್ಯಾಚ್ ಒಳಗೊಂಡಿರುವುದಾಗಿದೆ.
ವಿಶೇಷ ವ್ಯವಸ್ಥೆಯಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ ಬೆರೆಸುವಿಕೆಯಿಂದ ಶಕ್ತಿ ಉತ್ಪಾದನೆಯಾಗುತ್ತದೆ. ಇಂಧನ ಟ್ಯಾಂಕ್ ಅಥವಾ ಬ್ಯಾಟರಿಯೊಳಗೆ ಪ್ರಕ್ರಿಯೆಯಲ್ಲಿ ನೀರು ಮತ್ತು ಶಾಖ ಬಿಡುಗಡೆಯಾಗುತ್ತದೆ.