ಸಿಡಿಎಸ್ ಬಿಪಿನ್ ರಾವತ್ ಕಾಪ್ಟರ್ ಪತನ ಮತ್ತು ದುರಂತ ಅಂತ್ಯ ಹುಟ್ಟುಹಾಕಿದ ಪ್ರಶ್ನೆಗಳು; ಉತ್ತರವೆಲ್ಲಿದೆ?
ಕೃಪೆ ಹಿಂದವಿ ಸ್ವರಾಜ್
“ಇಲ್ಲಿ ಎಲ್ಲವೂ ಕಾಕತಾಳೀಯವಲ್ಲ, ದುರಂತ ದುರದೃಷ್ಟಕರವೂ ಅಲ್ಲ, ಉತ್ತರಿಸಬೇಕಾದವರು ಈ ಪ್ರಶ್ನೆಗಳಿಗೆ ಉತ್ತರಿಸುವುದೂ ಇಲ್ಲ”
-ವಿಪ್ರಭಾ
ವೆಲ್ಲಿಂಗ್ಟನ್ನಲ್ಲಿ ಸೈನಿಕ ಶಾಲೆಯ ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಬಿಪಿನ್ ರಾವತ್ ಪತ್ನಿ ಸಹಿತ ಮತ್ತು ಉಳಿದ ಸಹುದ್ಯೋಗಿಗಳ ಸಹಿತ ಮತ್ತೆ ಬಾರದ ಲೋಕಕ್ಕೆ ಹೋಗಿಬಿಡುತ್ತಾರೆ ಎಂದು ಯಾರಾದರೂ ಊಹಿಸಿದ್ದರೇ? ಅವತ್ತು 11:48ಕ್ಕೆ ಸೂಲೂರು ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದ ಹೆಲಿಕಾಪ್ಟರ್ ವೆಲ್ಲಿಂಗ್ಟನ್ನಲ್ಲಿ 12:15ಕ್ಕೆ ಇಳಿಯಬೇಕಿತ್ತು. ಆದರೆ ಸೂಲೂರ್ ಏರ್ ಬೇಸ್ನಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ 12:08ಕ್ಕೆ ಹೆಲಿಕಾಪ್ಟರ್ನೊಂದಿಗೆ ಸಂಪರ್ಕ ಕಳೆದುಕೊಂಡಿತು. ಸ್ವಲ್ಪ ಸಮಯದ ನಂತರ ಕುನ್ನೂರು ಸಮೀಪದ ಕಾಡಿನಲ್ಲಿ ಕೆಲವು ಸ್ಥಳೀಯರು ಹೆಲಿಕಾಪ್ಟರ್ ಅವಶೇಷಗಳನ್ನು ಕಂಡರು. ಭಾರತದ ಮಿಲಿಟರಿ ಇತಿಹಾಸದಲ್ಲಿಯೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದೇ ಹೋಗಿತ್ತು. ಇಡೀ ದೇಶವನ್ನೇ ಒಮ್ಮೆ ನಡುಗಿಸಿದ ಸೇನಾ ಸಿಬ್ಬಂದಿ ಮುಖ್ಯಸ್ಥ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲೇಖಾ ಮತ್ತು ಇನ್ನುಳಿದ 13 ಮಂದಿಯಿದ್ದ ಹೆಲಿಕಾಪ್ಟರ್ ಪತನ ದುರಂತ ಸಾಕಷ್ಟು ಅನುಮಾನಗಳನ್ನು ಮೂಡಿಸಿ, ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದೇಶದ ಸರ್ವೋಚ್ಛ ಮಿಲಿಟರಿ ಕಮ್ಯಾಂಡರ್ ಹೊತ್ತೊಯ್ಯುವ ಅತ್ಯಾಧುನಿಕ ಸಾಮರ್ಥ್ಯದ ಹೆಲಿಕಾಪ್ಟರ್ ಒಂದು ಕೇವಲ ಅರ್ಧ ಗಂಟೆಗೂ ಕಡಿಮೆ ಅವಧಿಯ ಪ್ರಯಾಣದಲ್ಲಿ ಅಪಘಾತಕ್ಕೆ ಒಳಗಾಗಿದೆ ಅನ್ನುವುದು ಸಾಧಾರಣ ವಿಚಾರವಲ್ಲ. ಮೂರೂ ಮಿಲಿಟರಿ ಪಡೆಗಳ ಮುಖ್ಯಸ್ಥರು ಪ್ರಯಾಣಿಸುವ ಹೆಲಿಕಾಪ್ಟರ್ ಅನ್ನು ಎಲ್ಲಾ ರೀತಿಯಲ್ಲೂ ಭದ್ರತಾ ಪರಿಶೀಲನೆಗಳು ಆಗಿರಲೇಬೇಕು. ಹವಾಮಾನ ಮುನಸೂಚನೆ ನೀಡಿರಬೇಕು. ಎಸ್ಕಾರ್ಟ್ ಹೆಲಿಕಾಪ್ಟರ್ ಇರಬೇಕು. ಹಾಗಿದ್ದರೂ ಈ ಏರ್ ಕ್ರಾಶ್ ಸಂಭವಿಸಿದ್ದೇಕೆ? ಇದರ ಹಿಂದಿರುವ ರಹಸ್ಯವೇನು? ಈ ನಿಟ್ಟಿನಲ್ಲಿ ಚರ್ಚೆ ಶುರುವಾಗಿದ್ದೂ ಸುದೀರ್ಘ ಮತ್ತು ಕೂಲಂಕೂಷ ತನಿಖೆಗೆ ಆಗ್ರಹಿಸಲಾಗುತ್ತಿದೆ.
ಸಾಮಾನ್ಯವಾಗಿ ಹೆಲಿಕಾಪ್ಟರ್ ಅಪಘಾತ ಸಂಭವಿಸಲು ಕೆಲವು ಪ್ರಮುಖ ಕಾರಣಗಳಿರುತ್ತವೆ. ಎಂಜಿನ್ ವೈಫಲ್ಯ ಅಥವಾ ಪೈಲೆಟ್ ವೈಫಲ್ಯ. ಹಕ್ಕಿ ಅಥವಾ ಇನ್ಯಾವುದಾದರೂ ವಸ್ತು ಡಿಕ್ಕಿ ಹೊಡೆದು ದಿಢೀರ್ ಅಪಘಾತ ಸಂಭವಿಸುವುದು. ದಟ್ಟ ಮಂಜು, ವಿಪರೀತ ಗಾಳಿ ಮುಂತಾದ ಹವಾಮಾನ ವೈಪರಿತ್ಯ. ಏನಾದರೂ ಎಂಜಿನ್ ದೋಷ ಅಥವಾ ಇಂದನ ಕೊರತೆ ಮತ್ತಿತರೆ ಕಾರಣಕ್ಕೆ ಕ್ರಾಶ್ ಲ್ಯಾಂಡಿಂಗ್ ಸಮಯದಲ್ಲಿ ಸಮತಟ್ಟಾದ ನೆಲ ಸಿಗದೇ ಮರಕ್ಕೆ ಬಡಿದು ಅಪಘಾತವಾಗುವುದು ಇತ್ಯಾದಿ. ಆದರೆ ಈ ಘಟನೆಯಲ್ಲಿ ಹವಾಮಾನ ವೈಪರಿತ್ಯದ ವಿನಃ ಮತ್ಯಾವುದೂ ಸೂಕ್ತ ಕಾರಣವಾಗಲು ಸಾಧ್ಯವೇ ಇಲ್ಲ. ಯಾಕಂದರೆ ಸರ್ವೋಚ್ಛ ನಾಯಕ ಪ್ರಯಾಣಿಸುವ ಮಿಲಿಟರಿ ಚಾಪರ್ ಚಲಾಯಿಸುತ್ತಿದ್ದವರು ಸುದೀರ್ಘ ಅನುಭವ ಹೊಂದಿದ್ದ ಪೈಲೆಟ್. ಪ್ರಯಾಣಿಸುತ್ತಿದ್ದಿದ್ದು ಅತ್ಯುತ್ತಮ ನಿರ್ವಹಣೆಯ ಸಾಮರ್ಥ್ಯವಿದ್ದ ಅತ್ಯಾಧುನಿಕ ಅತ್ಯಂತ ವಿಶ್ವಾಸಾರ್ಹ ಎಂಐ-17ವಿ5 ಹೆಲಿಕಾಪ್ಟರ್.
ಭಾರತೀಯ ವಾಯುಪಡೆ ಬಳಸುವ ಎಂಐ-17ವಿ5, ಪ್ರಯಾಣಿಕರು, ಸರಕು ಹಾಗೂ ವಸ್ತುಗಳನ್ನು ಸಾಗಿಸಲು ಪೂರಕವಾಗಿರುವಂತೆ ವಿನ್ಯಾಸಗೊಳಿಸಲಾಗಿದ್ದ ಆಧುನಿಕ ಸಾರಿಗೆ ಹೆಲಿಕಾಪ್ಟರ್. ಯಾವುದೇ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಯಲ್ಲೂ, ಹಗಲು-ರಾತ್ರಿ ಹಾಗೂ ಅತ್ಯಂತ ಉಷ್ಣ, ಅತ್ಯಂತ ಶೀತ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯದ್ದು. ಈ ಸೋವಿಯತ್ ರಷ್ಯಾ ಮೇಡ್ ಹೆಲಿಕಾಪ್ಟರ್ ನಿಗದಿತವಲ್ಲದ ಪ್ರದೇಶಗಳಲ್ಲೂ ಲ್ಯಾಂಡಿಂಗ್ ಆಗುವ ಸಾಮರ್ಥ್ಯ ಹೊಂದಿತ್ತು ಹಾಗೂ 1,300 ಕೆಜಿ ತೂಕದ ವಸ್ತುಗಳನ್ನು ಹೊತ್ತು ಸಾಗಿಸಲು ಸಮರ್ಥವಾಗಿತ್ತು. ಗಂಟೆಗೆ 250 ಕಿ.ಮೀ ವೇಗವಾಗಿ ಚಲಿಸುವ, ೬೦೦೦ ಅಡಿ ಎತ್ತರದಲ್ಲಿ ಹಾರಬಲ್ಲ ಇದನ್ನು ವಿವಿಐಪಿಗಳ ಪ್ರಯಾಣಕ್ಕೆ ಯಾವುದೇ ಅನುಮಾನವಿಲ್ಲದೆ ಬಳಸಬಹುದಿತ್ತು. ಇಲ್ಲಿಯವರೆಗೆ ಈ ಹೆಲಿಕಾಪ್ಟರ್ನಿಂದ ಯಾವುದೇ ದೊಡ್ಡ ಅಪಘಾತ ಸಂಭವಿಸಿದ ಉದಾಹರಣೆಗಳಿಲ್ಲ. ಯಾವುದೇ ವಿಮಾನ ಅಥವಾ ಹೆಲಿಕಾಪ್ಟರ್ ಹಾರಾಟಕ್ಕೂ ಮುನ್ನ ಆ ಪ್ರದೇಶದ ಹವಾಮಾನ ಪರಿಸ್ಥಿತಿ ಪರಿಶೀಲಿಸಬೇಕು, ಈಗ ಉಪಗ್ರಹ ಆಧಾರಿತ ವ್ಯವಸ್ಥೆಯಿಂದ ಇದು ಸುಲಭ, ಆದರೂ ರಾವತ್ ತರಹದ ಕಮಾಂಡರ್ ಇನ್ ಚೀಫ್ ತೆರಳಬೇಕಿದ್ದ ಸ್ಥಳದ ಹವಾಮಾನ ಪರಿಶೀಲನೆಯ ವರದಿ ಏನಾಯಿತು ಅನ್ನುವ ಪ್ರಶ್ನೆ ಮುಖ್ಯವಾಗಿ ಕೇಳಿಬರುತ್ತಿದೆ.
ಸೂಲೂರು ವಾಯುನೆಲೆಯ ಹೆಲಿಪ್ಯಾಡ್ನಿಂದ ವೆಲ್ಲಿಂಗ್ಟನ್ಗೆ ತೆರಳುವ ಮಾರ್ಗದಲ್ಲಿ ನಂಜಪ್ಪಚದಿರಂ ಬಳಿಯ ಅರಣ್ಯದಲ್ಲಿ ಹಲಸಿನ ಮರಕ್ಕೆ ಹೆಲಿಕಾಪ್ಟರ್ ಡಿಕ್ಕಿ ಹೊಡೆದಿದೆ, ಕಾರಣ ದಟ್ಟ ಮಂಜಿನಿಂದ ಆವೃತವಾಗಿದ್ದರಿಂದ ಪೈಲೆಟ್ಗೆ ಮುಂದಿನ ದಾರಿ ಕಂಡಿಲ್ಲ ಅನ್ನುವುದು ಸದ್ಯದ ಘಟನಾ ವರದಿ. ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಹೊರಡುವುದಕ್ಕೂ ಮುನ್ನ ಎರಡು ಪುಟ್ಟ ಕಾಪ್ಟರ್ ರವಾನೆಯಾಗಿತ್ತು, ನೀಲಗಿರೀಸ್ನಲ್ಲಿ ಸ್ಥಳ ಪರಿಶೀಲನೆಗೆ ರವಾನಿಸಲಾಗಿತ್ತು ಎಂದ ಸೂಲೂರ್ ವಾಯುನೆಲೆ ಮೂಲಗಳು ಹೇಳುತ್ತವೆ. ಆದರೆ ವೆಲ್ಲಿಂಗ್ಟನ್ಗೆ ಯಾವ ಹೆಲಿಕಾಪ್ಟರ್ ಬಂದಿರಲಿಲ್ಲ ಎಂದ ಮದ್ರಾಸ್ ರೆಜಿಮೆಂಟಲ್ ಕೇಂದ್ರ ಹೇಳಿದೆ. ಪ್ರೋಟೋಕಾಲ್ ಪ್ರಕಾರ ನೀಲಗಿರಿಯ ಹವಾಮಾನ ಪರೀಕ್ಷೆಗಾಗಿ ಐಎಎಫ್ನ ಎರಡು ಹೆಲಿಕಾಪ್ಟರ್ಗಳನ್ನು ಮಾರ್ಗವನ್ನು ಅನ್ವೇಷಿಸಲು ಕಳುಹಿಸಲಾಗಿದೆ ಎಂದು ಸೂಲೂರು ವಾಯುನೆಲೆಯ ಅಧಿಕಾರಿಯೊಬ್ಬರು ತಿಳಿಸಿದ್ದರು, ಹಾಗಿದ್ದರೆ ಆ ಎರಡು ವಿಚಕ್ಷಣ ಹೆಲಿಕಾಪ್ಟರ್ ಎತ್ತ ಹೋದವು? ಹಾಗೊಂದು ವೇಳೆ ಅವು ತೆರಳಿದ್ದೇ ಹೌದಾದರೇ, ಹವಾಮಾನ ವೈಪರಿತ್ಯದ ಕಾರಣ, ರಾವತ್ ಹೆಲಿಕಾಪ್ಟರ್ ಹಾರಟಕ್ಕೆ ಖಂಡಿತಾ ಅವಕಾಶ ಕೊಡಬಾರದಿತ್ತು. ಅಥವಾ ವಿಚಕ್ಷಣ ಹೆಲಿಕಾಪ್ಟರ್ ತೆರಳಲೇ ಇಲ್ಲವೇ? ಎಂಐ -17 ವಿಶ್ವಾಸಾರ್ಹ ಹೆಲಿಕಾಪ್ಟರ್ ಆಗಿರುವುದರಿಂದ, ಸಣ್ಣ ಹೆಲಿಕಾಪ್ಟರ್ಗಳಿಂದ ಪ್ರಾಯೋಗಿಕವಾಗಿ ಯಾವುದೇ ಪ್ರಯೋಗವನ್ನು ನಡೆಸಲಾಗಿಲ್ಲ ಎಂದು ಮದ್ರಾಸ್ ರೆಜಿಮೆಂಟಿನ ಅಧಿಕಾರಿಯೊಬ್ಬರು ಹೇಳಿದ್ದು ವರದಿಯಾಗಿದೆ. ಅದೇ ಸತ್ಯವಾದರೇ ಈ ನಿರ್ಲಕ್ಷ್ಯ ಸೈನ್ಯದ ಭಾಷೆಯಲ್ಲಿ ಖಂಡಿತಾ ಅಕ್ಷಮ್ಯ.
ಈ ಐಎಎಫ್ ಕೇಂದ್ರಗಳ ವಿರೋಧಾಭಾಸದ ಹೇಳಿಕೆಗಳು ಸಹ ಘಟನೆಯ ಕುರಿತು ಸಂಶಯ ಮೂಡಿಸುತ್ತಿವೆ. ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳೂ ಸಹ ಅಪಘಾತವಾದ ರಾವತ್ ಹೆಲಿಕಾಪ್ಟರ್ ಹೊರತು ಪಡಿಸಿ ಬೇರೆಯ ಹೆಲಿಕಾಪ್ಟರ್ ಹೋದದ್ದನ್ನು ಕಂಡಿಲ್ಲ, ಕೇಳಿಲ್ಲ ಎಂದಿದ್ದಾರೆ. ಡಿಸೆಂಬರ್ 8ರ ಮಧ್ಯಾಹ್ನ ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸ್ಥಳ ಆಗ್ನೇಯ ಇಳಿಜಾರಿನಲ್ಲಿ, ನೀಲಗಿರಿ ಪರ್ವತಗಳ ಮೇಲ್ಭಾಗದಿಂದ ಸುಮಾರು 2,630 ಮೀಟರ್ ಎತ್ತರದಲ್ಲಿದೆ. ಆಗ ಟ್ರೋಪೋಸ್ಪಿಯರ್ನಲ್ಲಿ ಲಂಬವಾದ ಗಾಳಿ ಬೀಸುತ್ತಿದೆ ಎಂದು ಹವಾಮಾನ ತಜ್ಞರು ವರದಿ ನೀಡಿದ್ದರು. ಆಗ ಗಾಳಿಯ ವೇಗ, ಗಂಟೆಗೆ 6 ಕಿಮೀ ಮತ್ತು ಗಾಳಿಯ ದಿಕ್ಕು 90 ಡಿಗ್ರಿಯಷ್ಟಿತ್ತು. ಇದು ಖಂಡಿತಾ ಅಪಾಯಕಾರಿ ಸನ್ನಿವೇಶ. ಹೀಗಿದ್ದಾಗಲೂ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಿದ್ದು ಯಾಕೆ ಅನ್ನುವುದೂ ಸಹ ಪ್ರಶ್ನಿಸಲೇಬೇಕಾದ ಸಂಗತಿ. ಕಾಕ್ಪಿಟ್ ಧ್ವನಿ ರೆಕಾರ್ಡರ್ ಮತ್ತು ಫ್ಲೈಟ್ ಡೇಟಾ ರೆಕಾರ್ಡರ್(FDR) ಸಾಧನ ಕಿತ್ತಳೆ ಬಣ್ಣದ ಬ್ಲ್ಯಾಕ್ ಬಾಕ್ಸ್ ಘಟನೆ ನಡೆದ ಸ್ಥಳದಿಂದ ೧ ಕಿಲೋಮೀಟರ್ ದೂರದಲ್ಲಿ ಸಿಕ್ಕಿದ್ದು ಇನ್ನಷ್ಟೆ ಅದರ ವಿವರಗಳು ಪತ್ತೆಯಾಗಬೇಕಿದೆ. ಹಾಗೊಂದು ವೇಳೆ ಪತ್ತೆಯಾದರೂ ಅದರ ಯಾವ ಮಾಹಿತಿಗಳೂ ಹೊರಬೀಳುವುದಿಲ್ಲ. ಮಿಲಿಟರಿ ರಹಸ್ಯ ಕಡತಗಳಲ್ಲಿ ಬಿಪಿನ್ ರಾವತ್ ಸಾವಿನ ಕುರಿತಾದ ಗುಪ್ತ ಸಂಗತಿಗಳು ಬಹಿರಂಗವಾಗದೇ ಉಳಿಯುತ್ತವೆ.
ಹಿರಿಯ ಲೇಖಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಭೀಷ್ಮ ಚೆಲ್ಲಾನಿಯವರ ಒಂದು ಟ್ವೀಟ್ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. 2020ರ ಆರಂಭದಲ್ಲಿ ಘಟಿಸಿದ ವಿಲಕ್ಷಣ ಹೆಲಿಕಾಪ್ಟರ್ ಅಪಘಾತವೊಂದನ್ನು ಚೆಲ್ಲಾನಿ ನೆನಪಿಸಿಕೊಂಡಿದ್ದರು. ತೈವಾನ್ನ ಸೇನಾ ಮುಖ್ಯಸ್ಥ ಜನರಲ್ ಶೆನ್ ಯಿ-ಮಿಂಗ್ ಮತ್ತು ಇಬ್ಬರು ಮೇಜರ್ ಜನರಲ್ಗಳು ಸೇರಿದಂತೆ ಇತರ ಏಳು ಜನರು ಅವತ್ತಿನ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಜನರಲ್ ಶೇನ್ ಯಿ ಮಿಂಗ್ ಚೀನಾ ರಿಪಬ್ಲಿಕ್ ಆರ್ಮಿಗೆ ತಲೆನೋವಾಗಿದ್ದವರು. ಅಂದ ಹಾಗೆ ನಮ್ಮ ಬಿಪಿನ್ ರಾವತ್ ಸಹ ಚೀನಾ ಪಾಲಿನ ದೊಡ್ಡ ತಲೆ ನೋವಾಗಿದ್ದವರೇ. ಈ ಸಿಮಿಲಾರಿಟಿ ಆಧಾರದ ಮೇಲೆಯೇ ಬಿಜೆಪಿಯ ಸುಬ್ರಹ್ಮಣ್ಯ ಸ್ವಾಮಿ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮಿತಿಯ ಮೂಲಕ ಕೂಲಂಕೂಷ ತನಿಖೆಯಾಗಬೇಕು ಎಂದು ಆಗ್ರಹಿಸಿರುವುದು. ಅತ್ತ ಶಿವಸೇನೆಯ ಸಂಜಯ್ ರಾವತ್ ಕೂಡಾ ರಾವತ್ ಸಾವಿನ ಘಟನೆಯ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ದೇಶದಲ್ಲಿ ವಿಮಾನ ಅಪಘಾತ ಮತ್ತು ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಅಂತ್ಯ ಕಂಡ ಅತ್ಯಂತ ಹೈಪ್ರೊಫೈಲ್ ಕೇಸ್ಗಳು ಯಾವುವೂ ಇಲ್ಲಿಯವರೆಗೆ ತಾರ್ಕಿಕ ಅಂತ್ಯ ಕಂಡಿಲ್ಲ. ಆ ಎಲ್ಲಾ ಡೆತ್ ಮಿಸ್ಟರಿಗಳೂ ರಹಸ್ಯ ಕಡತಗಳಲ್ಲಿ ಬಂಧಿಯಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಥೈವಾನ್ ಥೈಪೆಯಲ್ಲಿ ೧೯೪೫ರಲ್ಲಿ ಮರಣ ಹೊಂದಿದರು ಎನ್ನಲಾದ ನಮ್ಮ ಹೆಮ್ಮೆಯ ಸೇನಾನಿ ಆಜಾದ್ ಹಿಂದ್ ಫೌಜಿನ ನೇತಾಜಿ ಸುಭಾಷ್ ಚಂದ್ ಬೋಸ್ ಸಾವಿನೊಂದಿಗೆ ಇದು ಶುರುವಾಯಿತು. ಮೇ 30, 1973ರಲ್ಲಿ ಇಂದಿರಾಗಾಂಧಿ ಸರ್ಕಾರದಲ್ಲಿ ಉಕ್ಕಿನ ಸಚಿವರಾಗಿದ್ದ ಮೋಹನ್ ಕುಮಾರಮಂಗಲಂ, ತಮ್ಮ 56 ನೇ ವಯಸ್ಸಿನಲ್ಲಿ ನವದೆಹಲಿಯಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಜೂನ್ 23, 1980ರಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಿರಿಯ ಪುತ್ರ ಸಂಜಯ್ ಗಾಂಧಿ ದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೂಡಲೇ ಗ್ಲೈಡರ್ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು. ಜುಲೈ 9, 1994ರಲ್ಲಿ ರಾಜ್ಯ ಸರ್ಕಾರದ ವಿಮಾನವೊಂದು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಹಿಮಾಚಲ ಪ್ರದೇಶದ ಪರ್ವತಗಳಲ್ಲಿ ಪತನಗೊಂಡಾಗ ಅಂದಿನ ಪಂಜಾಬ್ ಗವರ್ನರ್ ಸುರೇಂದ್ರ ನಾಥ್ ಮತ್ತು ಅವರ ಕುಟುಂಬದ ಒಂಬತ್ತು ಮಂದಿ ಸೇರಿದಂತೆ 12 ಮಂದಿ ಸಾವನ್ನಪ್ಪಿದರು. ಮೇ 2001ರಲ್ಲಿ ಅರುಣಾಚಲ ಪ್ರದೇಶದ ಶಿಕ್ಷಣ ಸಚಿವರಾಗಿದ್ದ ಡೇರಾ ನಟುಂಗ್ ಮತ್ತು ಇತರ ಐವರು ಪವನ್ ಹನ್ಸ್ ಹೆಲಿಕಾಪ್ಟರ್ ತವಾಂಗ್ ಬಳಿ ಕಳಪೆ ಗೋಚರತೆಯಿಂದಾಗಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು.
ಸೆಪ್ಟೆಂಬರ್ 30, 2001ರಂದು ಮಧ್ಯಪ್ರದೇಶದ ರಾಜವಂಶಸ್ಥ ಮತ್ತು ಮಾಜಿ ಕಾಂಗ್ರೆಸ್ ಕ್ಯಾಬಿನೆಟ್ ಸಚಿವ ಮಾಧವರಾವ್ ಸಿಂಧಿಯಾ, ಕಾಂಗ್ರೆಸ್ ರ್ಯಾಲಿಯನ್ನು ಉದ್ದೇಶಿಸಿ ಉತ್ತರ ಪ್ರದೇಶದ ಕಾನ್ಪುರಕ್ಕೆ ಪ್ರಯಾಣಿಸುತ್ತಿದ್ದಾಗ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಮಾರ್ಚ್ 3, 2002ರಂದು ಅವತ್ತಿನ ಲೋಕಸಭೆ ಸ್ಪೀಕರ್ ಮತ್ತು ತೆಲುಗು ದೇಶಂ ನಾಯಕ ಜಿಎಂಸಿ ಬಾಲಯೋಗಿ ಆಂಧ್ರಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು. ಸೆಪ್ಟೆಂಬರ್ 2004ರಲ್ಲಿ ಮೇಘಾಲಯದ ಸಮುದಾಯ ಅಭಿವೃದ್ಧಿ ಸಚಿವರಾಗಿದ್ದ ಸಿ ಸಂಗ್ಮಾ, ಮೂವರು ಶಾಸಕರು ಮತ್ತು ಆರು ಮಂದಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದರು. ಮಾರ್ಚ್ 31, 2005ರಲ್ಲಿ ಖ್ಯಾತ ಕೈಗಾರಿಕೋದ್ಯಮಿ ಹರಿಯಾಣದ ಸಚಿವರಾದ ಒಪಿ ಜಿಂದಾಲ್ ಮತ್ತು ಸುರೇಂದ್ರ ಸಿಂಗ್ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಉತ್ತರ ಪ್ರದೇಶದ ಸಹರಾನ್ಪುರದ ಬಳಿ ಪತನಗೊಂಡಾಗ ಮರಣ ಹೊಂದಿದರು. ಸೆಪ್ಟೆಂಬರ್ 3, 2009ರಂದು ಆಂಧ್ರಪ್ರದೇಶದ ಪ್ರಸಿದ್ಧ ಮುಖ್ಯಮಂತ್ರಿಯಾಗಿದ್ದ ವೈಎಸ್ ರಾಜಶೇಖರ ರೆಡ್ಡಿ ಚಿತ್ತೂರು ಜಿಲ್ಲೆಯ ಗ್ರಾಮವೊಂದಕ್ಕೆ ತೆರಳುತ್ತಿದ್ದ ವೇಳೆ ಬೆಲ್ 430 ಹೆಲಿಕಾಪ್ಟರ್ ದಟ್ಟ ಅರಣ್ಯದಲ್ಲಿ ಪತನಗೊಂಡು ನಿಧನರಾದರು. ಏಪ್ರಿಲ್ 30, 201೧ರಲ್ಲಿ ಆಗಿನ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಮತ್ತು ಇತರ ನಾಲ್ವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ತವಾಂಗ್ನಿಂದ ಇಟಾನಗರಕ್ಕೆ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ಮೇ 9, 2012ರಂದು ಜಾರ್ಖಂಡ್ನ ಆಗಿನ ಮುಖ್ಯಮಂತ್ರಿ ಅರ್ಜುನ್ ಮುಂಡಾ, ಅವರ ಪತ್ನಿ ಮತ್ತು ಇತರ ಮೂವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ರಂಶಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಕ್ರ್ಯಾಶ್-ಲ್ಯಾಂಡ್ ಆಗಿ ಎಲ್ಲರಿಗೂ ಗಾಯಗಳಾಗಿತ್ತು. ಮುಂಡಾ ಅವರ ಕೈ ಮುರಿದು, ಅವರ ಕಾಲಿಗೆ ಗಾಯಗಳಾಗಿತ್ತು. ಜುಲೈ 2014ರಲ್ಲಿ ಬರೇಲಿಯಿಂದ ಅಲಹಾಬಾದ್ಗೆ ತೆರಳುತ್ತಿದ್ದ ಎಎಲ್ಎಚ್ ಧ್ರುವ್ ಹೆಲಿಕಾಪ್ಟರ್ ಉತ್ತರ ಪ್ರದೇಶದ ಸೀತಾಪುರದಲ್ಲಿ ಪತನಗೊಂಡು, ಇಬ್ಬರು ಅಧಿಕಾರಿಗಳು ಸೇರಿದಂತೆ ಏಳು ಮಂದಿ ಐಎಎಫ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 2014ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಸೇನಾ ವಾಯುಯಾನ ಘಟಕಕ್ಕೆ ಸೇರಿದ ಚೀತಾ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಮೂವರು ಅಧಿಕಾರಿಗಳು ಸಾವನ್ನಪ್ಪಿದ್ದರು. ಮೇ 21, 2021ರಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಅಭಿನವ್ ಚೌಧರಿ, ಪಂಜಾಬ್ನ ಮೋಗಾ ಜಿಲ್ಲೆಯ ಲಾಂಗಿಯಾನಾ ಗ್ರಾಮದಲ್ಲಿ ತಮ್ಮ ಮಿಗ್ -21 ಫೈಟರ್ ಜೆಟ್ ತೆರೆದ ಮೈದಾನದಲ್ಲಿ ಪತನಗೊಂಡ ನಂತರ ಸಾವನ್ನಪ್ಪಿದರು.
ಏಪ್ರಿಲ್ 3, 2018ರಂದು ಭಾರತೀಯ ವಾಯುಪಡೆಯ Mi-17 V5 ಹೆಲಿಕಾಪ್ಟರ್ ರಾಜ್ಯ ಸರ್ಕಾರದ ಕಾರ್ಯಾಚರಣೆಯಲ್ಲಿ ಹಾರುತ್ತಿರುವಾಗ ಕೇದಾರನಾಥ ಬಳಿ ಪತನಗೊಂಡಿತ್ತು. ಹೆಲಿಪ್ಯಾಡ್ ಬಳಿ ಇಳಿಯುವ ವೇಳೆ ಅವಘಡ ಸಂಭವಿಸಿ, ವಿಮಾನದಲ್ಲಿದ್ದ ಎಲ್ಲಾ ನಾಲ್ವರು ವಿಮಾನ ಸಿಬ್ಬಂದಿ ಮತ್ತು ಇಬ್ಬರು ಗ್ರೌಂಡ್ ಸಿಬ್ಬಂದಿ ಪುಣ್ಯವಶಾತ್ ಬದುಕುಳಿದಿದ್ದರು. ಫೆಬ್ರವರಿ 27, 2019ರಂದು ಶ್ರೀನಗರದಿಂದ ದಿನನಿತ್ಯದ ಕಾರ್ಯಾಚರಣೆಗಾಗಿ ಹೊರಟಿದ್ದ ಭಾರತೀಯ ವಾಯುಪಡೆಯ Mi-17 V5 ಹೆಲಿಕಾಪ್ಟರ್ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಬಳಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಆರು ಗಾಳಿಗೂ ಮಾರಣಾಂತಿಕ ಗಾಯಗಳಾಗಿದ್ದವು. ಇವುಗಳ ಸಾಲಿಗೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಮತ್ತು ಉಳಿದ ವೀರ ಯೋಧರ ಸಾವುಗಳೂ ಸೇರಲ್ಪಟ್ಟಿದ್ದು ನಿಜಕ್ಕೂ ದುರಂತವೇ ಸರಿ.
ಡಿಸೆಂಬರ್ ಮತ್ತು ಬಿಪಿನ್ ರಾವತ್:
ಪದಾತಿದಳದ ಹನ್ನೊಂದನೇ ಗೂರ್ಖಾ ರೈಫಲ್ಸ್ನ ಐದನೇ ಬೆಟಾಲಿಯನ್ಗೆ ನಿಯೋಜಿಸಲ್ಪಟ್ಟಿದ್ದು 16 ಡಿಸೆಂಬರ್ 1978ರಂದು. ಜನರಲ್ ಬಿಪಿನ್ ರಾವತ್ ರನ್ನು ಭಾರತದ ಮೊದಲ ರಕ್ಷಣಾ ಸಿಬ್ಬಂದಿಯಾಗಿ ನೇಮಿಸಲಾಗಿದ್ದು 31 ಡಿಸೆಂಬರ್ 2019ರಂದು. ಅವರು 31 ಡಿಸೆಂಬರ್ 2016ರಿಂದ 31 ಡಿಸೆಂಬರ್ 2019 ರವರೆಗೆ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದರು. ರಾವತ್ ದುರಂತ ಅಂತ್ಯ ಕಂಡಿದ್ದು ೮ ಡಿಸೆಂಬರ್.
ದೇಶದ ದೊಡ್ಡ ಶತ್ರು ಪಾಕ್ ಅಲ್ಲ. ಪಾಕ್ ಅನ್ನು ಹಿಡಿತದಲ್ಲಿ ಇಟ್ಟುಕೊಂಡು ಕಳ್ಳಾಟವಾಡುತ್ತಿರುವ ಚೀನಾ ಅಂತ ದೊಡ್ಡದಾದ ಧ್ವನಿಯಲ್ಲಿ ಹಾಗೂ ನೇರವಾಗಿ ಹೇಳಿದ್ದು ಸಿಡಿಎಸ್ ಬಿಪಿನ್ ರಾವತ್. ಬಹುಶ ಜಾರ್ಜ್ ಫರ್ನಾಂಡೀಸ್ ಬಿಟ್ಟರೆ ಚೀನಾಗೆ ನೇರ ಎಚ್ಚರಿಕೆ ಕೊಟ್ಟ ಎರಡನೇ ವ್ಯಕ್ತಿಯಾಗಿದ್ದರೆ ಅದು ದೇಶದ ಮೊದಲ ಸಿಡಿಎಸ್ ರಾವತ್. ಭವಿಷ್ಯದಲ್ಲಿ ದೇಶ ದ್ವಿರಂಗ ಸಮರ ಎದುರಿಸಬೇಕಾಗುತ್ತದೆ ಎಂಬುವುದನ್ನು ಮೊದಲೆ ಊಹಿಸಿದ್ದ ರಾವತ್ ಸೇನೆ ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ದೇಶದ ಭದ್ರತೆ ಬಗ್ಗೆ ಅಪಾರ ಕಾಳಜಿ, ದೂರದೃಷ್ಟಿ ಹೊಂದಿದ್ದ ಬಿಪಿನ್ ಶೌರ್ಯ, ಸಾಹಸಕ್ಕೂ ಹೆಸರುವಾಸಿಯಾದವರು. ಖಡಕ್ ಕ್ರಮ ತೆಗೆದುಕೊಳ್ಳುವುದರಲ್ಲಿ ಯಾವಾಗಲೂ ರಾವತ್ ಮುಂದೆ ಇದ್ದರಿಂದ ಚೀನಾದ ಪಿಎಲ್ಎ ಗಾಲ್ವಾನ್ ಕಣಿವೆಯಲ್ಲಿ ಬಾಲ ಮುದುರಿಕೊಂಡು ಬಿದ್ದಿತ್ತು. ಅದರಲ್ಲೂ, ಎತ್ತರದ ಪ್ರದೇಶದಲ್ಲಿ ರಣತಂತ್ರ ರೂಪಿಸುವುದರಲ್ಲಿ ರಾವತ್ ಅವರದು ಎತ್ತಿದ ಕೈ. ಹೀಗಾಗಿ, ಲಡಾಕ್ ಭಾಗದಲ್ಲಿ ಚೀನಾವನ್ನು ಕಟ್ಟಿ ಹಾಕಲು ಸಾಧ್ಯವಾಗಿತ್ತು. ಚೀನಾಗೆ ರಾವತ್ ಎಂದರೆ ಅವ್ಯಕ್ತ ಭಯ ಕಾಡ್ತಿತ್ತು. ರಾವತ್ ಹೆಸರು ಕೇಳಿದರೇ ಸಾಕು ಪಾಕ್ ಕನಸಲ್ಲೂ ಬೆಚ್ಚಿ ಬೀಳ್ತಿತ್ತು. ಸರ್ಜಿಕಲ್ ಸ್ಟ್ರೈಕ್ ಎಂಬ ಗುಮ್ಮ ಎಂದೂ ಮರೆಯಲು ಸಾಧ್ಯವೇ. ಇಂತಹ ಒಂದೇ ಒಂದು ಕಾರ್ಯಾಚರಣೆ ನಂತರ ಬಾಲ ಮುದುರಿಕೊಂಡಿದೆ ಪಾಕ್. ಮಾತೆತ್ತಿದರೆ ಅಣುಬಾಂಬ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ ಪಾಕ್ ನಾಯಕರಿಗೆ, ಭಾರತದ ಸೇನೆ ತನ್ನ ಗಡಿಯೊಳಗೆ ನುಗ್ಗಿ ಹೊಡೆದು ಬಂದಾಗಲೇ ಗೊತ್ತಾಗಿದ್ದು, ಭಾರತೀಯ ಸೇನೆ ಅಂದ್ರೆ ಸುಮ್ನ ಅಲ್ಲ ಅಂತ. ಆ ಬಳಿಕ ಅದು ಅಣುಬಾಂಬ್ ಹಾಕುವ ಮಾತು ಆಡುವುದನ್ನೆ ಮರೆತು ಬಿಟ್ಟಿದೆ. ಪಾಕ್ ಜಂಘಾಬಲ ಉಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್ ಸೂತ್ರದಾರಿ ಬಿಪಿನ್ ರಾವತ್. 40 ವರ್ಷಕ್ಕೂ ಹೆಚ್ಚು ತಮ್ಮ ಸೇವಾವಧಿಯಲ್ಲಿ ಸಾಹಸ ತೋರಿದ್ದೆ ಹೆಚ್ಚು. ಕಾಶ್ಮೀರದಲ್ಲಿನ ಪುಂಡ ಉಗ್ರರನ್ನು ರಣಚಂಡಿಗೆ ಏರಿಸಿದ್ದು, ಮಯನ್ಮಾರದಲ್ಲಿ ಅಡಗಿದ್ದ ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸಿ ಬಾರದ ಲೋಕಕ್ಕೆ ಕಳುಹಿಸಿದ್ದನ್ನು ಭಾರತೀಯರು ಇನ್ನು ಮರೆತಿಲ್ಲ. ಭಾರತದ ಸೇನೆ ಪಾಕ್, ಮಯನ್ಮಾರ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಎಡೆಮುರಿ ಕಟ್ಟಿದ್ದರ ಹಿಂದೆ ರಾವತ್ ಬ್ಲ್ಯೂ ಪ್ರಿಂಟ್ ಇತ್ತು. ರಾವತ್ ಮಹಾನ್ ಸೇನಾನಿ. ಅವರಿಗಿದ್ದ ದೂರದೃಷ್ಟಿಯ ಕಾರ್ಯಾಚರಣೆಯಿಂದ ಇಂದು ಪಾಕ್, ಚೀನಾ ಬಾಲ ಮುದುರಿಕೊಂಡು ಕುಳಿತಿವೆ. ಇಂತಹ ಒಬ್ಬ ಮಹಾನ್ ಸೇನಾನಿ ಹೆಲಿಕಾಪ್ಟರ್ ಪತನದಲ್ಲಿ ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ. ನೀವೊಬ್ಬ ಭಾರತಾಂಬೆಯ ಹೆಮ್ಮೆಯ ಪುತ್ರ. ಭಾರತರತ್ನ, ನಿಮ್ಮ ಶೌರ್ಯ ಸಾಧನೆಯನ್ನು ಶತಕೋಟಿ ಭಾರತೀಯರು ಎಂದೂ ಮರೆಯಲು ಸಾಧ್ಯವಿಲ್ಲ. ಹೋಗಿ ಬನ್ನಿ ಸರ್..
-ಶರಣು ಮುಷ್ಟೂರು, ಪತ್ರಕರ್ತ, ರಾಯಚೂರು
ನಲವತ್ತು ವರ್ಷ ಸೇವೆ ಮತ್ತು ಎದೆಯ ಮೇಲಿನ ಪದಕಗಳೇ ಹೇಳುತ್ತಿತ್ತು ಅವರು ಭಾರತೀಯ ಸೈನ್ಯದ ರಣಧೀರ:
ವಿಶಿಷ್ಟ ಸೇವಾ ಪದಕ
ಅತಿ ವಿಶಿಷ್ಟ ಸೇವಾ ಪದಕ
ಪರಮ ವಿಶಿಷ್ಟ ಸೇವಾ ಪದಕ
ಯುದ್ಧ ಸೇವಾ ಪದಕ
ಉತ್ತಮ ಯುದ್ಧ ಸೇವಾ ಪದಕ
ಸೇನಾ ಪದಕ
ಮಿಲಿಟರಿ ಮೀಡಿಯಾ ಸ್ಟ್ರಾಟೆಜಿಕ್ ಸ್ಟಡೀಸ್ ವಿಷಯದ ಸಂಶೋಧನೆಗೆ ಡಾಕ್ಟರೇಟ್
ನೇಪಾಳ ಸೈನ್ಯದ “ಗೌರವ ಜನರಲ್” ಹುದ್ದೆ.
ಅವರ ಹೆಸರು ಬಿಪಿನ್ ರಾವತ್:
ಮಣಿಪುರದ ಚಾಂದೇಲ್ ಪ್ರದೇಶದಲ್ಲಿ ಸಾಗುತ್ತಿದ್ದ ಭಾರತೀಯ ಸೈನ್ಯದ ತುಕಡಿಯ ಮೇಲೆ, ಮಯನ್ಮಾರನ್ನು ಬೇಸ್ ಕ್ಯಾಂಪ್ ಮಾಡಿಕೊಂಡು ಮಣಿಪುರ ನಾಗಾಲ್ಯಾಂಡುಗಳಲ್ಲಿ ಆತಂಕ ಸೃಷ್ಟಿಸುತ್ತಿದ್ದ UNLFW (united liberation front of western South east Asia) ಉಗ್ರ ಸಂಘಟನೆಯ ಆತಂಕವಾದಿಗಳು ಮಾಡಿದ್ದ ಗುಂಡಿನ ದಾಳಿಯಲ್ಲಿ ಹದಿನೆಂಟು ಸೈನಿಕರು ಹುತಾತ್ಮರಾದರೆ ಹದಿನೈದಕ್ಕೂ ಹೆಚ್ಚು ಸೈನಿಕರು ತೀವ್ರತರವಾದ ಗಾಯಗೊಂಡಿದ್ದರು. ನಿಜಕ್ಕೂ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು ಅಂದು. ಯಾಕೆಂದರೆ, 1999ರ ಕಾರ್ಗಿಲ್ ಯುದ್ಧದ ನಂತರದಲ್ಲಿ ಭಾರತೀಯ ಸೈನಿಕರ ಮೇಲಾದ ಅತೀದೊಡ್ಡ ದಾಳಿಯಾಗಿತ್ತು ಇದು. ಹೀಗೊಂದು ಸಂದಿಗ್ಧ ಸ್ಥಿತಿಯಲ್ಲಿದ್ದಾಗ ರೂಪುಗೊಂಡಿದ್ದೇ. “ಆಪರೇಶನ್ ಹಾಟ್ ಪರ್ಸ್ಯೂಟ್”.
ಅವತ್ತು 7th ಜೂನ್ 2015. ಘಟನೆಯಾಗಿ ಮೂರು ದಿನವಾಗಿತ್ತು. ಪ್ರಧಾನಮಂತ್ರಿ ಏನೂ ಆಗಿಯೇ ಇಲ್ಲವೆಂಬಂತೆ ಬಾಂಗ್ಲಾದೇಶದ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ, ಭಾರತೀಯ ಸೈನ್ಯವೂ ಫುಲ್ ಸೈಲೆಂಟಾಗಿದೆ. ಇವ್ರ್ ಕೈಲಿ ಏನೂ ಆಗಲ್ಲ, ನಾವು ಗೆದ್ದಿದ್ದೇವೆ ಎಂಬ ಖುಷಿಯಲ್ಲಿ ಮಯನ್ಮಾರಿನೊಳಗಿನ ಕ್ಯಾಂಪುಗಳಲ್ಲಿ ಟೆರರಿಸ್ಟುಗಳು ಮೈ ಚಾಚಿ ಮಲಗಿದ್ರೆ, ಅತ್ತ ಪ್ರಧಾನಿಯ ಆದೇಶದ ಮೇರೆಗೆ, ಸೈಲೆಂಟಾಗಿ ಸುಳಿವೇ ಸುಗದಂತೆ ಟೆರರಿಸ್ಟ್ ಕ್ಯಾಂಪುಗಳ ಅಷ್ಟೂ ಮಾಹಿತಿ ಸಂಗ್ರಹಿಸಿಕೊಂಡು ರಹಸ್ಯ ಕಾರ್ಯಾಚರಣೆಯೊಂದರ ಅನುಷ್ಠಾನಕ್ಕೆ ಸಿದ್ಧರಾಗಿ ಹೆಲಿಕ್ಯಾಪ್ಟರಲ್ಲಿ ಬಾರ್ಡರ್ರಿನ ಬಳಿ ಬಂದಿಳಿದ ಮಹಾಯೋಧರ ತಂಡವೊಂದು ನಿಧಾನಕ್ಕೆ ಮಯನ್ಮಾರಿನ ಗಡಿಯೊಳಗೆ ನುಸುಳಿ ಉಗ್ರರ ಕ್ಯಾಂಪುಗಳತ್ತ ಹೆಜ್ಜೆ ಹಾಕುತ್ತಿತ್ತು.
ಪ್ಯಾರಾಚೂಟ್ ರೆಜಿಮೆಂಟಿನ 21ನೇ ಬೆಟಾಲಿಯನ್ನಿಗೆ ಸೇರಿದ ಸ್ಪೆಷಲ್ ಫೋರ್ಸ್ ತರಬೇತಿಯ ಕುಲುಮೆಯೊಳಗೆ ಬೆಂದು ಎರಕ ಹೊಯ್ದಂತಿದ್ದ 72 ಸೈನಿಕರ ರಣಭೀಕರ ತಂಡವದು. ಬೇಸ್ ಕ್ಯಾಂಪಿನಿಂದ ಹೊರಟು ಮಾರ್ಗಮಧ್ಯ ಎರಡು ತಂಡಗಳಾಗಿ ವಿಭಜನೆಯಾಗಿ ಒಂದು ಟೀಮ್ ಮಣಿಪುರದ ಗಡಿಯಿಂದ ಒಳಹೊಕ್ಕರೆ ಮತ್ತೊಂದು ತಂಡ ನಾಗಾಲ್ಯಾಂಡ್ ಗಡಿಯಿಂದ ಒಳಹೊಕ್ಕು, ಬರೋಬ್ಬರಿ ಐವತ್ತು ಕಿಲೋಮೀಟರುಗಳಷ್ಟು ದೂರ ನಡೆದೇ ಸಾಗಿ ಉಗ್ರರ ಕ್ಯಾಂಪುಗಳನ್ನು ತಲುಪಿದವರೇ ಏಕಕಾಲಕ್ಕೆ ಜೂನ್ ತಿಂಗಳಲ್ಲೇ ದೀಪಾವಳಿಯ ಧೂಮ್ ಧಮಾಕಾ ಶುರು ಹಚ್ಚಿಕೊಂಡು ಬಿಟ್ಟಿದ್ದರು.
ಕೇವಲ ನಲವತ್ತು ನಿಮಿಷ…ಅಷ್ಟೇ ನೂರಕ್ಕೂ ಹೆಚ್ಚು ಉಗ್ರರನ್ನು ಹೊಸಕಿ ಹಾಕಿ, ಕ್ಯಾಂಪುಗಳನ್ನು ಸಂಪೂರ್ಣ ಧ್ವಂಸ ಮಾಡಿ, ತಂಡದ ಒಬ್ಬೇ ಒಬ್ಬರಿಗೂ ಒಂದೇ ಒಂಚೂರೂ ಗಾಯಗಳಾಗದಂತೆ ಮರಳಿ ಭಾರತವನ್ನು ತಲುಪಿದ್ದರು ಆ 72 ಜನ ಪ್ರಳಯ ರುದ್ರನ ಅನುಯಾಯಿಗಳು. ಹೊರ ಜಗತ್ತಿಗೆ ಭಾರತೀಯ ಸೈನ್ಯದಿಂದ ಇಂತಹದ್ದೊಂದು ಘಟನೆಯಾಗಿದೆ ಅನ್ನೋದು ಗೊತ್ತಾಗಿದ್ದೇ, ಜೂನ್ ಒಂಬತ್ತರಂದು ಮೀಡಿಯಾಗಳ ಮುಂದೆ ಭಾರತ ಸರ್ಕಾರ ಬಹಿರಂಗ ಗೊಳಿಸಿದಾಗ ಅಂದ್ರೆ ಜಸ್ಟ್ ಇಮ್ಯಾಜಿನ್, ಅದೆಷ್ಟು ಗೌಪ್ಯವಾಗಿ ಸದ್ದೇ ಆಗದಂತೆ ಇಂತಹದ್ದೊಂದು ಕಾರ್ಯಾಚರಣೆಯನ್ನು ಮುಗಿಸಲಾಗಿತ್ತು ಅನ್ನೋದನ್ನು.
ಇಂತಹದ್ದೊಂದು ಅದ್ಭುತ ರಹಸ್ಯ ಕಾರ್ಯಾಚರಣೆಯ ಹಿಂದೆ ಇದ್ದಂತಹ ಮಾಸ್ಟರ್ ಮೈಂಡ್. ಆಗಿನ ಲೆಫ್ಟಿನಂಟ್ ಜನರಲ್ ಹಾಗೂ ನಂತರದಲ್ಲಿ ದೇಶದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿದ್ದ, ಇವತ್ತು ಮೃತರಾದ ದೇಶದ ಹೆಮ್ಮೆಯ ಸುಪುತ್ರ ಜನರಲ್ ಬಿಪಿನ್ ರಾವತ್.
-ಸುಧೀರ್ ಸಾಗರ್
ಸಿಡಿಎಸ್ ರಾವತ್ರನ್ನು ಯಾಕೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಗೊತ್ತಾ?
-ತಂದೆಯಂತೆ, ತಾತನಂತೆ ಸೇನೆಗೆ ಸೇವೆ ಸಲ್ಲಿಸಿದ ರಾವತ್ರದ್ದು 40 ವರ್ಷ ದೇಶಕ್ಕಾಗಿ ದುಡಿದ ಸಾರ್ಥಕತೆ:
-ಬಿಪಿನ್ ರಾವತ್ ಹುಟ್ಟಿದ್ದು ಉತ್ತರಾ ಖಂಡದ ಪೌರಿಯಲ್ಲಿ, 1958ರ ಮಾರ್ಚ್ 16ರಂದು ಹಿಂದೂ ಗಡ್ವಾಲಿ ರಜಪೂತ ಕುಟುಂಬದಲ್ಲಿ.
-ಡೆಹ್ರಾಡೂನ್ ಕೇಂಬ್ರಿಯನ್ ಹಾಲ್ ಸ್ಕೂಲ್ ಮತ್ತು ಶಿಮ್ಲಾದ ಎಡ್ವರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ರಾವತ್.
-ಖಡಕ್ ವಾಸ್ಲಾದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಡೆಹ್ರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿ ಸೇರಿ ರಕ್ಷಣಾ ಕ್ಷೇತ್ರದ ತರಬೇತಿ ಪಡೆದಿದ್ದರು.
-ವೆಲ್ಲಿಂಗ್ಟನ್ನಲ್ಲಿ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜ್ನಲ್ಲಿ ಪದವಿ ಪಡೆದು, ಅಮೆರಿಕದ ಆರ್ಮಿ ಕಮಾಂಡ್ ಆ್ಯಂಡ್ ಜನರಲ್ ಸ್ಟಾಫ್ ಕಾಲೇಜಿನಲ್ಲಿ ಅತ್ಯುನ್ನತ ಕಮಾಂಡ್ ಕೋರ್ಸ್ ಪೂರೈಸಿದ್ದರು.
-ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ರಕ್ಷಣೆ, ಕಂಪ್ಯೂಟರ್ ಮತ್ತು ಮ್ಯಾನೇಜ್ಮೆಂಟ್ ವಿಷಯದಲ್ಲಿ ಎಂ.ಫಿಲ್ ಪದವಿ ಪಡೆದಿದ್ದರು.
-ಭಾರತೀಯ ಸೇನೆಯಲ್ಲಿ ಸುದೀರ್ಘ 4 ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಬಿಪಿನ್ ರಾವತ್ ತಮ್ಮ 20ನೇ ವಯಸ್ಸಿನಲ್ಲಿಯೇ ಸೇನೆ ಸೇರಿದ್ದರು.
-1978ರ ಡಿಸೆಂಬರ್ 16ರಂದು 11 ಗೋರ್ಖಾ ರಿಫೈಲ್ಸ್ ಮೂಲಕ ಸೇನೆಗೆ ಸೇರ್ಪಡೆಯಾದರು. ವಿಶೇಷ ಎಂದರೆ ತಂದೆ ಲಕ್ಷ್ಮಣ್ ರಾವತ್ ಅವರು ಸೇನೆಗೆ ಸೇರ್ಪಡೆಯಾಗಿದ್ದ ಬೆಟಾಲಿಯನ್ನಿಂದಲೇ ಸೇನೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.
-ರಾವತ್ ಅವರಿಗೆ ಸಿಯಾಚಿನ್ನಂಥ ಅತಿ ಎತ್ತರದ ಪ್ರತಿಕೂಲ ಹವಾಮಾನದ ಭೂ ಪ್ರದೇಶದಲ್ಲಿ ದೇಶವನ್ನು ರಕ್ಷಣೆ ಮಾಡಲು ಕೆಚ್ಚೆದೆಯಿಂದ ಸೇವೆ ಮಾಡಿದ ಅನುಭವವಿತ್ತು.
-ರಾವತ್ ಸತತ 10 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ವಿರೋಧಿ ಕಾರಾರಯಚರಣೆಯಲ್ಲಿ ಭಾಗಿಯಾಗಿದ್ದರು. ಮೇಜರ್ ಆಗಿ ಉರಿ, ಜಮ್ಮು-ಕಾಶ್ಮೀರದಲ್ಲಿ ಸೇನೆ ಮುನ್ನಡೆಸಿದ್ದರು. -ಕರ್ನಲ್ ಆಗಿ ಗೋರ್ಖಾ ರೈಫಲ್ಸ್ನ 5ನೇ ಬೆಟಾಲಿಯನ್ನಲ್ಲಿ ಸೇನೆಗೆ ಕಮಾಂಡ್ ನೀಡಿದ್ದರು. ನಂತರ ಬ್ರಿಗೇಡಿಯರ್ ಸ್ಥಾನಕ್ಕೆ ಬಡ್ತಿ ಪಡೆದು ಸೊಪೋರ್ನ ರಾಷ್ಟ್ರೀಯ ರೈಫಲ್ಸ್ನ 5 ಸೆಕ್ಟರ್ಗಳನ್ನು ಮುನ್ನಡೆಸಿದ್ದರು. -ಮೇಜರ್ ಜನರಲ್ ಆಗಿ, ನಂತರ ಲೆಫ್ಟಿನೆಂಟ್ ಜನರಲ್, ಜನರಲ್ ಸ್ಟಾಫ್ ಆಫೀಸರ್ ಗ್ರೇಡ್-2, ಲಾಜಿಸ್ಟಿಕ್ ಸ್ಟಾಫ್ ಆಫೀಸರ್, ಕರ್ನಲ್, ಮಿಲಿಟರಿ ಕಾರ್ಯದರ್ಶಿ ಮತ್ತು ಉಪ ಮಿಲಿಟರಿ ಕಾರ್ಯದರ್ಶಿ, ಜೂನಿಯರ್ ಕಮಾಂಡ್ ವಿಂಗ್ನಲ್ಲಿ ಹಿರಿಯ ಸಲಹೆಗಾರರಾಗಿ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಆರ್ಮಿ ಸ್ಟಾಫ್ ಉಪಾಧ್ಯಕ್ಷ ಸೇರಿದಂತೆ ಸೇನೆಯಲ್ಲಿ ವಿವಿಧ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದರು.
-ಭೂಸೇನೆಯ 27ನೇ ಮುಖ್ಯಸ್ಥ; ಬಿಪಿನ್ ರಾವತ್ ಅವರನ್ನು ಡಿ.17ರ 2016ರಲ್ಲಿ ಭಾರತ ಸರ್ಕಾರ ಭೂ ಸೇನೆಯ 27ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ಈ ಮೂಲಕ ಗೋರ್ಖಾ ಬ್ರಿಗೇಡ್ನಿಂದ ಅತ್ಯುನ್ನತ ಸ್ಥಾನಕ್ಕೇರಿದ ಮೂರನೇ ವ್ಯಕ್ತಿ ಎನಿಸಿಕೊಂಡಿದ್ದರು. ಅದಕ್ಕೂ ಮೊದಲು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಮತ್ತು ಜ ದಲ್ಬೀರ್ ಸಿಂಗ್ ಅದೇ ಬಟಾಲಿಯನ್ನಿಂದ ಭೂ ಸೇನೆಯ ಮುಖ್ಯಸ್ಥರಾಗಿದ್ದರು.
-ಡಿಸೆಂಬರ್ 31ರ 2019ರಂದು ಭೂ, ವಾಯು ಮತ್ತು ನೌಕಾ ಈ ಮೂರೂ ಪಡೆಗಳ ಮುಖ್ಯಸ್ಥರಾಗಿ ನೇಮಕವಾದರು. ಹಾಲಿ ಸೇನಾಪಡೆಯ ಮುಖ್ಯಸ್ಥರೊಬ್ಬರು ಸೇನಾಪಡೆಗಳ ಜಂಟಿ ಮುಖ್ಯಸ್ಥರಾಗಿ ನೇಮಕವಾಗಿದ್ದು ಇದೇ ಮೊದಲು. ಸಿಡಿಎಸ್ ಆಗಿ ನೇಮಕವಾದ ಬಳಿಕ ರಕ್ಷಣೆ ಮತ್ತು ಅದರ ಕಾರಾರಯಚರಣೆಗಳ ಕುರಿತಾಗಿ ಸರ್ಕಾರಕ್ಕೆ ಸಲಹೆ ಮತ್ತು ವಿವರಣೆ ನೀಡುತ್ತಿದ್ದರು. ಅಲ್ಲದೆ ಸಿಬ್ಬಂದಿ ಸಮಿತಿಯ ಶಾಶ್ವತ ಮುಖ್ಯಸ್ಥ (ಸಿಒಎಸ್ಸಿ)ರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
-ಅಮೆರಿಕ, ನೇಪಾಳ ಸೇನೆಯಿಂದ ಗೌರವ; 2019ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜ.ರಾವತ್ ಅವರನ್ನು ಅಮೆರಿಕದ ಆರ್ಮಿ ಕಮಾಂಡ್ ಮತ್ತು ಜನರಲ್ ಸ್ಟಾಫ್ ಕಾಲೇಜ್ ಇಂಟರ್ನ್ಯಾಷನಲ್ ಹಾಲ್ ಆಫ್ ಫೇಮ್ಗೆ ಸೇರಿಸಲಾಯಿತು. ಅವರು ನೇಪಾಳ ಸೇನೆಯ ಗೌರವ ಜನರಲ್ ಕೂಡ ಆಗಿದ್ದರು. ಭಾರತೀಯ ಮತ್ತು ನೇಪಾಳಿ ಸೇನೆಗಳ ನಡುವೆ ತಮ್ಮ ನಿಕಟ ಮತ್ತು ವಿಶೇಷ ಮಿಲಿಟರಿ ಸಂಬಂಧವನ್ನು ಸೂಚಿಸಲು ಪರಸ್ಪರರ ಮುಖ್ಯಸ್ಥರಿಗೆ ಗೌರವಾನ್ವಿತ ಶ್ರೇಣಿಯನ್ನು ನೀಡುವ ಸಂಪ್ರದಾಯ ಚಾಲ್ತಿಯಲ್ಲಿದೆ.
-ಜನರಲ್ ಬಿಪಿನ್ ರಾವತ್ ಜತೆ ಅವರ ಪತ್ನಿ ಮಧುಲಿಕಾ ರಾವತ್ ಮಧ್ಯಪ್ರದೇಶದ ರಾಜಕಾರಣಿ ದಿವಂಗತ ಮೃಗೇಂದ್ರ ಸಿಂಗ್ ಅವರ ಪುತ್ರಿ. ದೇಶದ ಅತಿದೊಡ್ಡ ಸರ್ಕಾರೇತರ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಸೇನಾಧಿಕಾರಿಗಳ ಮಡದಿಯರ ಕಲ್ಯಾಣ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೇನಾ ಸಿಬ್ಬಂದಿಯ ಪತ್ನಿ, ಮಕ್ಕಳು, ಅವಲಂಬಿತರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದರು. ಯೋಧರ ವಿಧವಾ ಪತ್ನಿಯರು ಹಾಗೂ ಅಂಗವಿಕಲರ ಅಭ್ಯುದಯಕ್ಕೆ ಹಲವು ಕಲ್ಯಾಣ ಕಾರ್ಯಕ್ರಮ ರೂಪಿಸಿದ್ದರು. ದೆಹಲಿಯಲ್ಲಿ ವ್ಯಾಸಂಗ ಮಾಡಿದ್ದ ಅವರು ಕ್ಯಾನ್ಸರ್ ರೋಗಿಗಳು ಸೇರಿದಂತೆ ಇತರರ ಪರ ಸಮಾಜ ಸೇವಾ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಯೋಧರ ಪತ್ನಿಯರು ಟೈಲರಿಂಗ್, ನೇಯ್ಕೆ, ಬ್ಯಾಗ್ ತಯಾರಿ, ಬ್ಯೂಟಿಷಿಯನ್ ಕೋರ್ಸ್, ಕೇಕ್ ಮತ್ತು ಚಾಕೋಲೆಟ್ ತಯಾರಿಯಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದ್ದರು.
ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ರಾವತ್ ಜೊತೆ ಪ್ರಾಣಾರ್ಪಣೆ ಮಾಡಿದ ಇತರರು ಎಂದರೆ ರಾವತ್ ಅವರ ಪತ್ನಿ ಮಧುಲಿಕಾ, ರಾವತ್ ಬ್ರಿಗೇಡಿಯರ್ ಎಲ್.ಎಸ್. ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ನಾಯಕ್ ವಿವೇಕ್ ಕುಮಾರ್, ನಾಯಕ್ ಬಿ. ಸಾಯಿ ತೇಜಾ, ಹವಾಲ್ದಾರ್ ಸತ್ಪಾಲ್ ಮತ್ತು ಪೈಲಟ್ಗಳು.