ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾರನ್ನು ಗೃಹ ಸಚಿವರನ್ನಾಗಿ ಅಥವಾ ಹಣಕಾಸು ಸಚಿವರನ್ನಾಗಿ ಮಾಡಲಿ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಸಂದರ್ಶನವೊಂದರಲ್ಲಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾಗೆ ಡಿಸಿಎಂ ಹುದ್ದೆಯ ಅಫರ್ ನೀಡಲಾಗಿತ್ತು, ಆದರೆ ಅವರು ಆ ಹುದ್ದೆಗೆ ತಮ್ಮ ಚೇಲಾರೊಬ್ಬರ ಹೆಸರು ಸೂಚಿಸಿದ ಕಾರಣ ಸಿಎಂ ಕಮಲ್ ನಾಥ್ ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿದ್ದಾರೆ.
‘ಪಿಟಿಇ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾದ ಪಕ್ಷದ ಒಳ ವಿಚಾರಗಳನ್ನು ಹಂಚಿಕೊಂಡ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ 2018ರ ಚುನಾವಣೆಯ ಗೆಲುವಿನ ನಂತರ ಮುಖ್ಯಮಂತ್ರಿ ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಉಪಮುಖ್ಯಮಂತ್ರಿ ಹುದ್ದೆಯ ಆಫರ್ ನೀಡಿತ್ತು. ಆದರೆ ಸಿಂಧಿಯಾ ತಾನು
ಸೂಚಿಸುವ ವ್ಯಕ್ತಿಯನ್ನು ಡಿಸಿಎಂ ಮಾಡಲು ಬೇಡಿಕೆ ಇಟ್ಟರು. ಇದಕ್ಕೆ ಸಿಎಂ ಕಮಲ್ ನಾಥ್ ಆಕ್ಷೇಪ ವ್ಯಕ್ತಪಡಿಸಿದರು. ನಾಯಕರೊಬ್ಬರ ‘ಚೇಲಾ’ ಆಗಿರುವ ವ್ಯಕ್ತಿ ಆ ಸ್ಥಾನದಲ್ಲಿ ಕುಳಿತುಕೊಳ್ಳುವುದು ಕಮಲ್ ನಾಥ್ ಗೆ ಇಷ್ಟವಿರಲಿಲ್ಲ. ಇದರಿಂದ ಕುಪಿತಗೊಂಡು ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ ಎಂದು ಆರೋಪಿಸಿದ ದಿಗ್ವಿಜಯ್ ಸಿಂಗ್ ಸಿಂಧಿಯಾ ಪ್ರಸಂಗವೆಲ್ಲವೂ ಮೊದಲೇ ರೂಪಿಸಿದ ಯೋಜನೆಯಂತೆ ನಡೆದಿದೆ ಎಂದು ಸಿಂಧಿಯಾ ಮೇಲೆ ಕಿಡಿಕಾರಿದರು.

ಬಿಜೆಪಿ, ಜ್ಯೋತಿರಾದಿತ್ಯ ಸಿಂಧಿಯಾ ಸಮರ್ಥ ನಾಯಕನೆಂದು ಪಕ್ಷಕ್ಕೆ ಸೇರಿಸಿಕೊಂಡಿದೆ. ಹಾಗಾಗಿ ಸಿಂಧಿಯಾರನ್ನು ಗೃಹ ಸಚಿವರನ್ನಾಗಿ ಅಥವಾ ಹಣಕಾಸು ಸಚಿವರನ್ನಾಗಿ ಮಾಡಲಿ ಎಂದು ವ್ಯಂಗ್ಯವಾಡಿದರು.
ಸಿಂಧಿಯಾ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕತ್ವಕ್ಕೆ ರಾಜೀನಾಮೆ ನೀಡಿರುವ 22 ಮಂದಿ ಶಾಸಕರ ಪೈಕಿ 13 ಶಾಸಕರು ಕಾಂಗ್ರೆಸ್ ಪಕ್ಷ ಬಿಡಲು ತಯಾರಿಲ್ಲ. ಸಿಂಧಿಯಾ ಅವರಿಗೆ ರಾಜ್ಯ ಸಭಾ ಟಿಕೆಟ್ ಕೊಡುವ ಉದ್ದೇಶದಿಂದ ಪಕ್ಷದ ಮೇಲೆ ಒತ್ತಡ ಹೇರಲು ಅವರು ರಾಜೀನಾಮೆ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ದ್ರೋಹ ಬಗೆಯುವುದಿಲ್ಲ ಎಂದಿದ್ದಾರೆ ಎಂದ ದಿಗ್ವಿಜಯ್ ಸಿಂಗ್ ವಿಶ್ವಾಸಮತ ಯಾಚನೆಯಲ್ಲಿ ಕಮಲ್ನಾಥ್ ಸರ್ಕಾರ ಬಹುಮತ ಸಾಬೀತು ಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಧ್ಯಪ್ರದೇಶದಲ್ಲಿ ಮಾಜಿ ಕಾಂಗ್ರೆಸ್ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು 22 ಶಾಸಕರು ರಾಜೀನಾಮೆ ನೀಡಿದ ಕಾರಣ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಯಾವಾಗ ಬೇಕಾದರೂ ಸರ್ಕಾರ ಬೀಳುವ ಸಾಧ್ಯತೆ ಇದೆ.
ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ. ಇದರೊಂದಿಗೆ ಕಾಂಗ್ರೆಸ್ನೊಂದಿಗೆ ಎರಡು ದಶಕಗಳ ನಂಟನ್ನು ಸಿಂಧಿಯಾ ಕಡಿದುಕೊಂಡಿದ್ದಾರೆ.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸ್ವಕ್ಷೇತ್ರ ಗ್ವಾಲಿಯರ್ ನ ಜನತೆಯಲ್ಲಿ ಕೆಲವರು, ಕಾಂಗ್ರೆಸ್ ಪಕ್ಷದ ನಿರ್ಲಕ್ಷತೆಯಿಂದ ಬೇಸತ್ತು ಸಿಂಧಿಯಾ ಸೇರಿದ್ದಾರೆ, ಅದು ಸರಿಯಾದ ನಿರ್ಧಾರ ಎಂದು ಹೇಳಿದ್ದರೆ, ಇನ್ನೂ ಕೆಲವರು ಕಾಂಗ್ರೆಸ್ ನಲ್ಲೇ ನೆಲೆ ಕಾಣಲು ಸಾಧ್ಯವಾಗದವರು ಬಿಜೆಪಿಯಲ್ಲಿ ನೆಲೆ ಕಾಣುವರೇ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.








