ಪಶ್ಚಿಮಬಂಗಾಳ : ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್ ಭಾರತಕ್ಕೂ ಲಗ್ಗೆ ಇಟ್ಟಿದೆ. ಈಗಾಗಲೇ ದೇಶದ 28 ಮಂದಿಗೆ ಈ ವೈರಸ್ ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಏತನ್ಮಧ್ಯೆ ಪಶ್ಚಿಮಬಂಗಾಳ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಜನರಿಗೆ ಮಾಸ್ಕ್ ಗಳನ್ನು ಹಂಚಿದ್ದಾರೆ. ಆದರೆ, ಈ ಮಾಸ್ಕ್ ಗಳಲ್ಲೂ ಪಕ್ಷದ ಪ್ರಚಾರಕ್ಕೆ ಮುಂದಾಗಿದ್ದಾರೆ. ಜನರಿಗೆ ನೀಡಿರುವ ಮಾಸ್ಕ್ ಗಳಲ್ಲಿ “ಕೊರೊನಾ ವೈರಸ್ ನಿಂದ ಕಾಪಾಡಿ ಮೋದಿ ಜೀ, ಪಶ್ಚಿಮಬಂಗಾಳ ಬಿಜೆಪಿ” ಎಂದು ಬರೆಯಲಾಗಿದೆ. ಜೊತೆಗೆ ಬಿಜೆಪಿ ಚಿಹ್ನೆಯಾದ ಕಮಲ ಚಿತ್ರವನ್ನು ಬಿಡಿಸಲಾಗಿದೆ.
ಇನ್ನು ಮುಂದಿನ ವರ್ಷ ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಕೇಸರಿ ಪಡೆ ಸಕಲ ಸಿದ್ಧತೆಗಳನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ಜನರಿಗೆ ಮೋದಿ ಮತ್ತು ಕಮಲದ ಚಿಹ್ನೆ ಇರುವ ಮಾಸ್ಕ್ ಗಳನ್ನು ನೀಡಿ ಪ್ರಚಾರ ಮಾಡುತ್ತಿದೆ.