ಕೊರೊನಾ ವೈರಸ್ ಕಾರಣಕ್ಕಾಗಿ ದೇಶ ಲಾಕ್ ಡೌನ್ ಆಗಿದೆ. ಹಾಗಾಗಿ ಬಿಜೆಪಿ ಪಕ್ಷಕ್ಕೆ ತನ್ನ ಸಂಸ್ಥಾಪನಾ ದಿನವನ್ನು ನೇರವಾಗಿ ಆಚರಿಸಲು ಆಗುತ್ತಿಲ್ಲ. ಅದಕ್ಕಾಗಿ ಇಡಿ ದೇಶದ ಜನರ ಕೈಯಲ್ಲಿ ದೀಪ ಬೆಳಗಿಸಿ ತನ್ನ ಭಂಡತನ ಮರೆಯುತ್ತಿದೆಯೇ ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಿ.ಎಂ ನರೇಂದ್ರ ಮೋದಿ ಕರೆ ನೀಡಿದ ದೀಪ ಬೆಳಗಿಸುವ ಕಾರ್ಯಕ್ಕೆ ವ್ಯಂಗ್ಯ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶ ಸಂಕಷ್ಟದಲ್ಲಿದೆ. ಅದರಿಂದ ಹೊರ ಬರುವುದು ಹೇಗೆ ಎಂದು ಹೇಳುವ ಬದಲು, ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ತೋರಿಕೆಯ ಸಂಭ್ರಮ ಬೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಎಪ್ರಿಲ್ 5 ನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದು ? ಅದರ ಬಗ್ಗೆ ವೈಜ್ಞಾನಿಕ ಮತ್ತು ವೈಚಾರಿಕ ಕಾರಣಗಳನ್ನು ಸ್ಪಷ್ಟಪಡಿಸಿ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಕೊರೊನಾ ವಿರುದ್ದ ಇಡಿ ವಿಶ್ವವೇ ಹೋರಾಟ ನಡೆಸುತ್ತಿದೆ. ದೇಶ ತತ್ತರಿಸಿದ ಸಂದರ್ಭದಲ್ಲಿ ಪರದೆ ಹಿಂದಿನ ಸತ್ಯ ಮರೆಮಾಚಿ, ಅಕಾಲಿಕ ದೀಪಾವಳಿ ಮಾಡಬೇಕೆ ಎಂದು ಎಚ್ಡಿಕೆ ಟ್ವಿಟರ್ ಸಮರ ಸಾರಿದ್ದಾರೆ.











