ಕೃಪೆ – ಹಿಂದವಿ
ನಮ್ಮ ದೇಶದಲ್ಲಿ ಈ ಪ್ರಗತಿಪರರು, ವಿಚಾರವಾದಿಗಳು ಮತ್ತು ಬುದ್ದಿಜೀವಿಗಳ ಒಂದು ದೊಡ್ಡ ಪರಂಪರೆಯಿದೆ. ಈ ಹಿಂದಿನಿಂದಲೂ ಸಮಾಜ, ವ್ಯವಸ್ಥೆ ಮತ್ತು ಪ್ರಭುತ್ವದ ಎಲ್ಲಾ ಓರೆಕೋರೆಗಳನ್ನು ತಮ್ಮ ಟೀಕೆ ಟಿಪ್ಪಣಿಗಳಿಂದ, ಹರಿತವಾದ ವಿಮರ್ಷೆಯಿಂದ, ಅಣಕು ಬರಹಗಳಿಂದ ಟೀಕಿಸುತ್ತಾ ತಮ್ಮ ವಿಶೇಷ ಸ್ಥಾನವುಳಿಸಿಕೊಂಡು ಬಂದ ವರ್ಗವಿದು. ಕನ್‌ಸ್ಟ್ರಕ್ಟೀವ್ ಆಗಿ, ವಸ್ತುನಿಷ್ಟವಾಗಿ, ಮೌಢ್ಯವಿರೋಧಿಯಾಗಿ ಸೃಜನಶೀಲ ಟೀಕೆಗಳಿಂದಾಗಿ ಈ ವರ್ಗಕ್ಕೆ ಅದರದ್ದೇ ಆದ ಗೌರವ, ಜನಬೆಂಬಲಗಳೂ ಇವೆ. ಆಳುವ ಪಕ್ಷಗಳು, ಪ್ರತಿಪಕ್ಷಗಳು, ಪತ್ರಿಕಾ ಮಾಧ್ಯಮ, ಬರಹಗಾರರ ವಲಯ ಈ ವರ್ಗವನ್ನು ವಿಶೇಷ ಆದ್ಯತೆಯಿಂದ ಗಮನಿಸುತ್ತದೆ. ಹೀಗಾಗಿ ಈ ವರ್ಗಕ್ಕೆ ಒಂದು ದೊಡ್ಡ ಜವಾಬ್ದಾರಿಯಿದೆ.
ಆದರೆ ನಮ್ಮ ರಾಜ್ಯದ ಪ್ರಗತಿಪರ ವಿಚಾರವಾದಿ ಬುದ್ದಿಜೀವಿಗಳಿಗೇನಾಗಿದೆ? ಎಮೋಷನ್ ಕೈಗೆ ಬುದ್ದಿ ಕೊಟ್ಟು ಆಳುವ ದೊರೆಗಳ ಆಟದ ದಾಳವಾಗುತ್ತಿದ್ದಾರೆ ಈ ಪ್ರಗತಿಪರರು. ಮುಂದಿನ ಪರಿಣಾಮ ಏನಾಗುತ್ತದೆ ಎಂದು ಅರ್ಥ ಮಾಡಿಕೊಳ್ಳದೆ ದೂರಗಾಮಿ ಚಿಂತನೆಯಿಲ್ಲದೇ ಒಂದು ಹೇಳಿಕೆಯನ್ನಿಟ್ಟುಕೊಂಡು ಆಂದೋಲನದ ಸ್ವರೂಪ ಕೊಟ್ಟು ಸಾಧಿಸುತ್ತಿರುವುದೇನು. ಖಂಡಿತಾ ಇವರು ರಾಜಕಾರಣದ ಚದುರಂಗದ ಕಾಯಿಗಳಂತೆ ನಡೆಸಲ್ಪಡುತ್ತಿದ್ದಾರೆ ಎನ್ನುವುದು ಅಪ್ಪಟ ಸತ್ಯ. ಸಾಮಾಜಿಕ ಜಾಲತಾಣಗಳಲ್ಲಿ ಇವರು ಸೃಷ್ಟಿಸುತ್ತಿರುವ ಟ್ರೆಂಡ್‌ಗಳು ಯಾವುದೋ ಒಂದು ಮಹತ್ವದ ವಿಚಾರವನ್ನು ಮುಚ್ಚಿ ಹಾಕುತ್ತಿವೆ. ಇವರೇನು ಪ್ರಗತಿಪರರಾ ಅಥವಾ ಆಳುವ ಬಲಪಂಥೀಯ ಸರ್ಕಾರದ ಮೀಡಿಯೇಟರ್‌ಗಳಾ? ಅಸಲಿಗೆ ಇವರು ಕುರಿಗಳಾಗುತ್ತಿರುವುದು ಇವರಿಗೇ ಗೊತ್ತಾಗುತ್ತಿಲ್ಲ.
ಒಂದು ತಾಜಾ ಉದಾಹರಣೆ ತೆಗೆದುಕೊಳ್ಳೋಣ. ದಲಿತರ ಬೀದಿಗೆ ತೆರಳಿದ್ದ ಪೇಜಾವರರು, ದಲಿತರು ಮಾಂಸ ಕೊಟ್ಟರೆ ತೆಗೆದುಕೊಳ್ಳುತ್ತಿದ್ದಾರಾ? ಎಂದು ಹಂಸಲೇಖಾ ಹೇಳಿದ್ದ ಒಂದು ಸಾಲಿನ ಸ್ಟೇಟ್‌ಮೆಂಟ್ ಅನ್ನು ವಿವಾಧವನ್ನಾಗಿಸಬೇಕು ಅನ್ನುವುದು ಪೂರ್ವನಿರ್ಧಾರಿತವಾಗಿತ್ತು. ಅದೊಂದು ತಂತ್ರಗಾರಿಕೆ, ಅಂತಹ ಅಜೆಂಡಾ ರೂಪಿಸುವ ಇಂಟಲೆಕ್ಚುಯಲ್ ಪಡೆ ಬಿಜೆಪಿಯಲ್ಲಿ ದಂಡಿಯಾಗಿದೆ. ಅವರು ಇಂತಹ ಒಂದು ಹೇಳಿಕೆಗಾಗಿ ಇನ್‌ಸ್ಟಂಟ್ ಆಗಿ ಕಾಯುತ್ತಿರುತ್ತಾರೆ. ಹಂಸಲೇಖಾ ಆಡಿದ್ದ ಅದೊಂದು ಮಾತು ಅವರಿಗೆ ರಸಗವಳ ಕೊಟ್ಟಂತಾಯಿತು. ಇನ್‌ಫ್ಯಾಕ್ಟ್ ಅವರು ಅದನ್ನೇ ಕಾಯುತ್ತಿದ್ದರು. ಆ ಜಾಗದಲ್ಲಿ ಬೇರೆ ಯಾರಾದರೂ ಆ ಮಾತನ್ನಾಡಿದ್ದರೂ ಅದನ್ನೊಂದು ವಿವಾದವನ್ನಾಗಿಸಲು ತೀರ್ಮಾನಿಸಲಾಗಿತ್ತು. ಹೀಗೆ ವಿವಾದ ಎಳೆದುಕೊಳ್ಳಲೆಂದೆ ಸುಪಾರಿ ಪಡೆದುಕೊಳ್ಳುವ ಭಗವಾನ್ ತರಹದ ಅವಿವೇಕಿಗಳು ಸಾಕಷ್ಟು ಜನರಿದ್ದಾರೆ. ಇವರೆಲ್ಲರೂ ಪರೋಕ್ಷವಾಗಿ ಬಿಜೆಪಿಗೆ ನೆರವಾಗುವವರು. ಹಾಗಂತ ಆ ಜಾಗದಲ್ಲಿ ಹಂಸಲೇಖಾ ಬಂದಿದ್ದು ಮಾತ್ರ ಅನಿರೀಕ್ಷಿತ ಘಟನೆ. ಹಂಸಲೇಖಾ ಪ್ರಚಾರದ ಭರಾಟೆಯಲ್ಲಿ ಚಪ್ಪಾಳೆ ಬಿದ್ದಷ್ಟು ಖುಷಿಯಾಗಿ ಮಾತಾಡುತ್ತಲೇ ಹೋದರು. ಅದರ ಪರಿಣಾಮ ಏನಾಗುತ್ತದೆ ಅನ್ನುವುದನ್ನು ಯೋಚಿಸದೇ ಮಾತಾಡಿಬಿಟ್ಟರು. ಕಾಯುತ್ತಿದ್ದ ಹದ್ದುಗಳು ಬಂದು ಕುಕ್ಕತೊಡಗಿದವು ಅಷ್ಟೆ.
ಇಲ್ಲೇ ನಮ್ಮ ಪ್ರಗತಿಪರರು ಎಡವಿದ್ದು. ಹಂಸಲೇಖಾರನ್ನು ಮೊದಮೊದಲು ಪೂರ್ತಿಯಾಗಿ ಬೆಂಬಲಿಸಲೂ ಇಲ್ಲ. ಅತ್ತ ವಿವಾದ ತಣ್ಣಗಾಗಲಿ ಎಂದು ಸುಮ್ಮನಾಗಲೂ ಇಲ್ಲ. ಹಂಸಲೇಖಾ ಹೇಳಿಕೆಯಾಗಿ ಎರಡು ದಿನ ಕಳೆಯುತ್ತಿದ್ದ ಹಾಗೆ ಮಾಂಸಾಹಾರ-ಸಸ್ಯಾಹಾರ, ಬಾಡು-ಗಾಡು ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಶುರು ಹಚ್ಚಿಕೊಂಡು ಬಿಟ್ಟರು. ಇಂತದ್ದೊಂದು ಮಾಸ್ಟರ್ ಪ್ಲಾನ್‌ನ ಬ್ಲೂಪ್ರಿಂಟ್ ಹಾಕಿಕೊಂಡವರ ಉದ್ದೇಶ ಅದ್ಭುತವಾಗಿ ಕಾರ್ಯಗತಗೊಂಡಿತು. ಕಾರಣ ಇದೊಂದು ಹಂಸಲೇಖಾ ಹೇಳಿಕೆ ವಿವಾದ ಮತ್ತದರ ನಂತರದ ಪರಿಣಾಮಗಳ ಬಗ್ಗೆ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ತೆಂಕು ಬಡಗು ಯಕ್ಷಗಾನ ಕುಣಿತ ನಡೆಸಿದವು. ಇಡೀ ಸಮಾಜದ ಗಮನ ಡೈವರ್ಟ್ ಆಯಿತು. ಆಗಬೇಕಾದ್ದು ಆಗಲಿಲ್ಲ, ಮುಚ್ಚಿಹಾಕಬೇಕಾಗಿದ್ದು ಮುಚ್ಚಿಹಾಕಲಾಯ್ತು.
ಅಂದಹಾಗೆ ನಮ್ಮಲ್ಲಿ ಸಂವೇದನೆಗಳಿದ್ದಿದ್ದರೆ ಇಷ್ಟು ಅರ್ಥವಾಗಬೇಕಿತ್ತು. ಜಗತ್ತಿನ ಮುಂದೆ ಭಾರತದ ಮಾನ ಬಯಲು ಮಾಡಿದ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿ ದೋಚಿದ್ದೆಷ್ಟು? ಬಿಟ್ ಕಾಯಿನ್ ಹಗರಣದ ಆಳ ಅಗಲವೆಷ್ಟು? ಎಷ್ಟು ಸಾವಿರ ಕೋಟಿಯ ಹಗರಣವಿದು? ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕಿತ್ತಲ್ಲವೇ? ಹಾಗಂತ ನ್ಯಾಯಬದ್ಧ ತನಿಖೆಗೆ ಸರ್ಕಾರವನ್ನು ಒತ್ತಾಯಿಸಬೇಕಿತ್ತಲ್ಲವೇ? ಊಹೂಂ ವಿರೋಧ ಪಕ್ಷವೆಂಬ ಹೊಣೆಗೇಡಿ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡುವ ಕಾಂಗ್ರೆಸ್ ತೆಪ್ಪಗಾಯಿತು. ಸಮಾಜದ ಪ್ರಜ್ಞಾವಂತ ಸೋಶಿಯಲ್ ಮೀಡಿಯಾ ನೆಟ್ಟಿಗರು ಪಿಗ್ಗಿಬಿದ್ದರು. ಬೊಮ್ಮಾಯಿ ಸರ್ಕಾರ ಉರುಳುವುದು ತಪ್ಪಿತು, ಮೋದಿ ಸರ್ಕಾರ ಮುಜುಗರ ತಪ್ಪಿಸಿಕೊಂಡಿತು. ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ೪೦% ಕಮಿಷನ್ ದಂದೆಯ ಕುರಿತು ಪತ್ರ ಬರೆದಿದ್ದರು. ಇದೂ ಕೂಡಾ ಸರ್ಕಾರ ಬೀಳಿಸಬಹುದಾದ ಇಷ್ಯೂ. ಈಗಲೂ ಕಾಂಗ್ರೆಸ್ ಸುಮ್ಮನೆ ಕುಂಯ್ ಕುಂಯ್ ಎಂದು ಸುಮ್ಮನಾಯಿತು. ಸೋಶಿಯಲ್ ಮೀಡಿಯಾದಲ್ಲಿ ಬಾಡೇ ನಮ್ಮ ಗಾಡು ಅಂತ ಪ್ರಗತಿಪರರು, ಚಿಕನ್ನು, ಫಿಶ್, ಫೋರ್ಕು ಫೋಟೋಗಳನ್ನು ಹಾಕಿಕೊಂಡು ಬಾಯಲ್ಲಿ ನೀರು ಸುರಿಸಿಕೊಂಡರು. ೧೫ ಲಂಚಕೋರ ಮಹಾಭ್ರಷ್ಟ ಸರ್ಕಾರಿ ನೌಕರರೆಂಬ ಹೆಗ್ಗಣಗಳ ಮನೆಗಳ ಮೇಲೆ ಎಸಿಬಿ ರೈಡ್ ನಡೆಯಿತು. ಯಾರ ಕೃಪಾಶಿರ್ವಾದದ ಬಲದಲ್ಲಿ ಅವರು ರಾಜಾರೋಷವಾಗಿ ಮೆಂದು ಗಂಟುಮಾಡಿಕೊಂಡರು? ತನಿಖೆಯಾಗಬೇಕಿತ್ತಲ್ಲವೇ? ಯಾವ ಮಿಕದ ಹಿಂದೆ ಯಾರ ಕೈ ಇದೆ? ಯಾರ ತಲೆಯನ್ನು ಯಾವ ಪುಡಾರಿ ಸವರುತ್ತಿದ್ದ? ಈ ಬಗ್ಗೆಯಾದರೂ ಯಾರಾದರೂ ಚಕಾರ ಎತ್ತಿದರಾ? ಮತ್ತದೇ ಹಂಸಲೇಖಾರನ್ನು ಸರಿಗಮಪ ವೇದಿಕೆಯಿಂದ ಜೀ ಹೊರಹಾಕಿದೆ. ಬಾಯ್ಕಾಟ್ ಜೀ ಕನ್ನಡ ಅಂತ ಬೊಬ್ಬೆ ಹೊಡೆಯಲಾಯಿತು.
ಇನ್ನು ಶಾಲೆ ಮಕ್ಕಳಿಗೆ ಮಧ್ಯಾಹ್ನದ ಉಪಹಾರದಲ್ಲಿ ಮೊಟ್ಟೆ ನೀಡುವ ವಿಚಾರ. ನಾನು ಈ ರಾಜ್ಯದ ಮುಖ್ಯಮಂತ್ರಿಯಾದರೆ ಖಂಡಿತಾ ಮಕ್ಕಳಿಗೆ ಮಧ್ಯಾಹ್ನ ಮೊಟ್ಟೆ ಕೊಡ್ತೀನಿ. ತಿನ್ನುವ ಮಕ್ಕಳಿಗೆ ಮೊಟ್ಟೆ; ತಿನ್ನದ ಮಕ್ಕಳಿಗೆ ಹಣ್ಣು. ಆಹಾರದ ಹೇರಿಕೆಯೂ ಆಗಬಾರದು ಆಹಾರದ ತಿರಸ್ಕಾರವೂ ಆಗಬಾರದು. ಬೆಳೆಯುವ ಮಕ್ಕಳಿಗೆ ಸಮೃದ್ಧ ಪೌಷ್ಟಿಕತೆ ಬೇಕು. ಎಷ್ಟೋ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಮಿಡ್ ಡೇ ಮಿಲ್ಸ್ ಕಾರಣಕ್ಕೆ ಶಾಲೆಗೆ ಬರುತ್ತಿರುವ ಮಕ್ಕಳಿದ್ದಾರೆ. ಅವರ ಬದುಕು ಅದೆಷ್ಟು ಕಷ್ಟದಿಂದ ಕೂಡಿದೆ, ಹಸಿವಿನಿಂದ ನರಳುತ್ತಿದೆ ಅರ್ಥ ಮಾಡಿಕೊಳ್ಳಬೇಕು. ಮೊದಲು ಈ ದೇಶದ ಮಕ್ಕಳ ಹಸಿವು ನಿಲ್ಲಬೇಕು. ಅಪೌಷ್ಟಿಕತೆ ದೂರಾಗಬೇಕು. ಶಾಲೆ ಸರ್ವಸಮುದಾಯಗಳ ಆಟದ ಮೈದಾನ. ಕೊನೇ ಪಕ್ಷ ಅಲ್ಲಾದರೂ ಅನಿಷ್ಠ ಜಾತಿ ಪದ್ಧತಿ, ಧರ್ಮಾಂದತೆ, ಸೈದ್ಧಾಂತಿಕ ಭ್ರಮೆ, ಬಿಕನಾಸಿ ಶ್ರೇಷ್ಠತಾ ವ್ಯಸನ ನಿಷೇಧಿಸಲ್ಪಡಬೇಕು. ಮಕ್ಕಳೆಲ್ಲರೂ ಸಮಾನರೇ ಅಲ್ಲಿ ಯಾರೂ ಶ್ರೇಷ್ಠರಲ್ಲ ಯಾರೂ ನಿಕೃಷ್ಟರೂ ಅಲ್ಲ.
ಆದರೆ ಒಂದು ಸೂಕ್ಷ್ಮ ಸಂಗತಿಯನ್ನು ನಾನು ಖಂಡಿತಾ ಪ್ರತಿಪಾದಿಸುತ್ತೇನೆ. ಆ ಮಕ್ಕಳು ಯಾವ ಸಮುದಾಯಕ್ಕೇ ಸೇರಿರಲಿ ಮನೆಯಲ್ಲಿ ಮೊಟ್ಟೆ ತಿನ್ನುವ ಅಭ್ಯಾಸವಿಲ್ಲವೋ ಫೈನ್! ಅವರಿಗೆ ಹಣ್ಣು ಕೊಡೋಣ. ಬಲವಂತವಾಗಿ ತಿನ್ನಿಸಲು ಹೋಗಬೇಕಿಲ್ಲವಲ್ಲ. ಆಹಾರ ಅವರ ಇಚ್ಛೆ. ಮೊಟ್ಟೆ, ಮಾಂಸವೋ ಸಸ್ಯವೋ ಅದು ಅನಗತ್ಯ. ಆದರೆ ಬೆಳೆವ ಮಕ್ಕಳಿಗೆ ಅತ್ಯಗತ್ಯವಾದ ಪ್ರೋಟೀನ್ ಅದರಲ್ಲಿದೆ ಅಷ್ಟೇ ಗಮನಿಸಬೇಕಾದ ವಿಚಾರ. ಇಂತಹ ಕ್ಷುಲ್ಲಕ ಸಂಗತಿಗಳನ್ನು ಹೈಲೈಟ್ ಮಾಡಿಸಿ ಇನ್ನೇನೋ ಮುಚ್ಚಿಹಾಕುವುದು ಒಂದು ವ್ಯವಸ್ಥಿತ ರಾಜಕೀಯ ತಂತ್ರಗಾರಿಕೆ. ಹಂಸಲೇಖಾ, ಮಾಂಸ ಮಡ್ಡಿ, ಬಾಡು ಗಾಡು ಹಾಡು ಎಂದು ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಗಮನ ಡೈವರ್ಟ್ ಮಾಡಿದ್ದು ನಮಗೆ ಗೊತ್ತೇ ಆಗಲಿಲ್ಲ. ಏನಾಯಿತು ಹೇಳಿ? ಎಷ್ಟೆಲ್ಲಾ ಪ್ರಶ್ನೆಗಳನ್ನು ಎತ್ತಬೇಕಿತ್ತು, ಎಲ್ಲವೂ ಮುಚ್ಚಿ ಹೋಯಿತು. ಬಿಟ್ ಕಾಯಿನ್ ಹಗರಣದ ತನಿಖೆ ಗತಿ ಗೋವಿಂದ. ಗುತ್ತಿಗೆದಾರರ ಸಂಘ ನೇರಾ ನೇರ ಮಾಡಿದ್ದ 40% ಕಮಿಷನ್ ಆರೋಪ ಸರ್ಕಾರವನ್ನೇ ಬೀಳಿಸಬಹುದಾದ ಗಂಭೀರ ಸಮಸ್ಯೆ ಆಗಿತ್ತಲ್ಲ, ನೆಗೆದುಬಿದ್ದು ಹೋಯ್ತು. ಎಸಿಬಿ ರೈಡ್ ಮಾಡಿತಲ್ಲ ಆ ಸರ್ಕಾರಿ ಅಧಿಕಾರಿಗಳೆಂಬ 15 ತಿಮಿಂಗಿಲಗಳ ಮನೆಗಳ ಮೇಲೆ. ಅವರ ಹಿಂದೆ ಕೃಪಾಶಿರ್ವಾದವಿದ್ದ ಪುಢಾರಿಗಳಾರು ನಾವು ಕೇಳಲಿಲ್ಲ.
ಅಷ್ಟೇ ಅವರು ಮಂಗನ ಕುಣಿಸಿ ಮಜಾ ನೋಡುತ್ತಾರೆ ನಾವು ಚಪ್ಪಾಳೆ ತಟ್ತೀವಿ ಅಷ್ಟೆ. ಈಗಲಾದರೂ ಎಚ್ಚೆತ್ತುಕೊಳ್ಳಿ. ಸಾಮಾಜಿಕ ಮಾಧ್ಯಮದ ಶಕ್ತಿ ವಿನಾಕಾರಣ ಪೋಲಾಗ್ತಿದೆ. ಅದ್ಯಾವಳೋ ಬಿಟಿವಿಯ ಆಂಕರ್ ಅಪ್ರಬುದ್ಧವಾಗಿ ಮಾತಾಡಿದ್ದನ್ನು ಟ್ರೋಲ್ ಮಾಡಿಕೊಂಡು ಕಾಲಕಳೆಯುವ ನಮಗೆ, ಕಾಶಿ ವಿಶ್ವನಾಥನ ಮಂದಿರದ ಕಾರಿಡಾರ್ ಮೂಲಕ ಪ್ರಧಾನಿ ಮತ್ತೊಮ್ಮೆ ಉತ್ತರಪ್ರದೇಶ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಸ್ಟ್ರಾಟೆಜಿ ರೂಪಿಸಿದ್ದು ಅರ್ಥವೇ ಆಗಲಿಲ್ಲ. ಪ್ರಧಾನಿಗಳ ಕಾಶಿ ಕಾರ್ಯಕ್ರಮವನ್ನು ಬಿಜೆಪಿ ಪಿಆರ್ ಇದೇ ಸೋಶಿಯಲ್ ಮೀಡಿಯಾ ಮುಖಾಂತರ ಅದ್ಭುತವಾಗಿ ಜನರನ್ನು ತಲುಪಿಸಿ, ಮತ್ತೆ ಸ್ಥಾನ ಭದ್ರಪಡಿಸಿಕೊಂಡಿದೆ. ಕಾಂಗ್ರೆಸ್‌ನ ಅವಿವೇಕಿಗಳಿಗೆ ಈ ಯೋಜನೆಗಳು ಅರ್ಥವಾಗಲ್ಲ, ಪ್ರಗತಿಪರ ಬುದ್ದಿ ಜೀವಿಗಳಿಗೆ ಅರ್ಥವಾಗುವುದೇ ಬೇಕಿಲ್ಲ.
ಸಾಮಾಜಿಕ ಮಾಧ್ಯಮವೆಂಬ ಅತ್ಯಂತ ಬಲಿಷ್ಟ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಳ್ಳದೇ, ಬಾಲೀಶವಾಗಿ ವರ್ತಿಸುವ ಪ್ರಗತಿಪರ ಬುದ್ದಿಜೀವಿಗಳನ್ನು ನೋಡಿದರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಏನೇ ಇರಲಿ ಬಿಜೆಪಿ ತನ್ನ ಸುತ್ತಮುತ್ತ ಭಯಂಕರ ತಲೆ ಇರುವ ಜನರನ್ನು ಇಟ್ಟುಕೊಂಡಿದೆ. ಅವರೊಂದು ತರಹ ಸೃಷ್ಟಿಕರ್ತ ಬ್ರಹ್ಮರು. ಯಾವಾಗ ಏನು ಸೃಷ್ಟಿಸಬೇಕು ಅನ್ನುವುದು ಅಲ್ಲಿನ ಪಿಆರ್ ಏಜೆನ್ಸಿಗೆ ಚೆನ್ನಾಗಿ ಗೊತ್ತು. ಮತ್ತೆ ಮತ್ತೆ ಪಿಗ್ಗಿ ಬೀಳುತ್ತಿರುವ ಪ್ರಗತಿಪರರಿಗೆ ಇನ್ನಾದರೂ ಬುದ್ದಿ ಬರಲಿ.
-ವಿಶ್ವಾಸ್ ಭಾರದ್ವಾಜ್ (ವಿಭಾ)