ಇಡೀ ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ : ಡಾ.ಕೆ.ಸುಧಾಕರ್

1 min read
Dr Sudhakar

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟಿಸಿ : ಡಾ.ಕೆ.ಸುಧಾಕರ್ ಕರೆ

ಚಿಕ್ಕಬಳ್ಳಾಪುರ : ಭಾರತೀಯ ಜನತಾ ಪಕ್ಷ ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷ. ಆದರೆ ಹಳೆ ಮೈಸೂರು ಭಾಗದಲ್ಲಿ ಇನ್ನೂ ಹೆಚ್ಚು ಸಂಘಟನೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಚಿಕ್ಕಬಳ್ಳಾಪುರದಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದು, ಒಂದು ಸ್ಥಾನ ಲಭ್ಯವಿದೆ. ಪಕ್ಕದ ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಒಬ್ಬರೂ ಶಾಸಕರಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದ್ದು, ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ನಿರ್ಣಯ ಕೈಗೊಳ್ಳಬೇಕಿದೆ. ಇದಕ್ಕಾಗಿ ಯಾವ ಮುಖಂಡರನ್ನು ಕರೆಸಿಕೊಳ್ಳಬೇಕು, ಯಾವ ರೀತಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಬೇಕೆಂದು ಆಲೋಚಿಸಬೇಕು ಎಂದರು.

ಕೇಂದ್ರ ಸಂಪುಟ ವಿಸ್ತರಣೆಯಲ್ಲಿ 27 ಮಂದಿ ಒಬಿಸಿ, 20 ಎಸ್‍ಸಿ, ಎಸ್‍ಟಿ ವರ್ಗದವರಿಗೆ ಅವಕಾಶ ನೀಡಲಾಗಿದೆ. ಅಲ್ಪಸಂಖ್ಯಾತರಿಗೆ ಅವಕಾಶ ಕೊಡಲಾಗಿದೆ. ಇದೇ ನಿಜವಾದ ಸಾಮಾಜಿಕ ನ್ಯಾಯ. ಬಿಜೆಪಿಯನ್ನು ಟೀಕಿಸುವವರು ಇದನ್ನು ಕಣ್ಣು ಬಿಟ್ಟು ನೋಡಬೇಕು. ಸಂಪುಟದಲ್ಲಿ 11 ಮಹಿಳೆಯರೂ ಇದ್ದಾರೆ. ಕಾಂಗ್ರೆಸ್ ಈ ರೀತಿ ಇರಲಿಲ್ಲ. ಬಿಜೆಪಿ ಯಾಕೆ ಬೇಕು ಎಂಬುದನ್ನು ಜನರಿಗೆ ಈ ಮೂಲಕ ಹೇಳಬೇಕು ಎಂದರು.

Dr Sudhakar

ಬಿಜೆಪಿ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಇದಕ್ಕಿಂತ ದೊಡ್ಡ ಸಂಖ್ಯೆಯ ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷ ಜಗತ್ತಿನಲ್ಲೇ ಬೇರೆ ಕಡೆ ಇಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಯಿಂದ ಜನಸಂಘ, ನಂತರ ಅದು ರಾಜಕೀಯ ರೂಪ ಪಡೆದ ಪಕ್ಷವಿದು. 18 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದ್ದು, ಹಂತಹಂತವಾಗಿ ಶಕ್ತಿ ಹೆಚ್ಚಿದೆ. ಇದಕ್ಕೆ ಸಾಮಾನ್ಯ ಕಾರ್ಯಕರ್ತರು ಕಾರಣರಾಗಿದ್ದು, ಎಲ್ಲರ ನಿಸ್ವಾರ್ಥ ಸೇವೆ, ಹೋರಾಟದಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ನೇತೃತ್ವದ ಆಡಳಿತ ನಡೆಯುತ್ತಿದೆ ಎಂದರು.

ಹೆಪಟೈಟಿಸ್-ಬಿ ಲಸಿಕೆ ಆವಿಷ್ಕಾರವಾದ ಬಳಿಕ ಭಾರತಕ್ಕೆ ಬರಲು 20 ವರ್ಷ ಬೇಕಾಯಿತು. ಕೋವಿಡ್ ಲಸಿಕೆ ದೇಶದಲ್ಲೇ ತಯಾರಾಗಿ ಬೇಗ ಲಭ್ಯವಾಯಿತು. ಪ್ರಧಾನಿ ನರೇಂದ್ರ ಮೋದಿಯವರಿಗೆ ಇಚ್ಛಾಶಕ್ತಿ ಇದ್ದಿದ್ದರಿಂದಲೇ ಲಸಿಕೆ ಬೇಗ ದೊರೆತಿದೆ. ಬೇರೆ ದೇಶಗಳಿಗಿಂತ ಹೆಚ್ಚು ಲಸಿಕೆಯನ್ನು ವೇಗವಾಗಿ ನೀಡಲಾಗಿದೆ. ರಾಜ್ಯದಲ್ಲಿ 2.50 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತಿದೆ ಎಂದರು.

ಲಸಿಕೆ ಬಗ್ಗೆ ವಿರೋಧ ಪಕ್ಷಗಳು ಅಪಹಾಸ್ಯ ಮಾಡಿದ್ದವು. ಇದು ಬಿಜೆಪಿ, ಮೋದಿ ಲಸಿಕೆಯಾಗಿದ್ದು, ಇದನ್ನು ಪಡೆದರೆ ಶಕ್ತಿ, ಹೃದಯ ಸಮಸ್ಯೆ ಬರುತ್ತದೆ ಎಂಬ ತಪ್ಪು ಗ್ರಹಿಕೆ ಮೂಡಿಸಲು ಯತ್ನಿಸಿ ಅಪಪ್ರಚಾರ ಮಾಡಿದರು. ಹೆಚ್ಚಿನವರು ಪಡೆಯದಿದ್ದರಿಂದ ಲಸಿಕೆ ತಯಾರಿಕಾ ಪ್ರಕ್ರಿಯೆಯನ್ನು ಕಂಪನಿಗಳು ನಿಧಾನ ಮಾಡಿದವು. ಈಗ ವಿಳಂಬವಾಗಿರುವುದಕ್ಕೆ ವಿರೋಧ ಪಕ್ಷಗಳೇ ನೇರ ಹೊಣೆಯಾಗಿವೆ. ಕಾಂಗ್ರೆಸ್ ನವರು ಶಾಸಕರ ಅನುದಾನ ಬಳಸಿ ಲಸಿಕೆ ಕೊಡಲು ಮುಂದಾಗುವ ಮೂಲಕ ಕೇವಲ ಪ್ರಚಾರದ ಗಿಮಿಕ್ ಮಾಡಿದರು, ಎಂದರು.

ರಾಜ್ಯ ಸರ್ಕಾರ ನೇಕಾರರಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ, ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿದೆ. ಇಂತಹ ಸಂದಿಗ್ಧದಲ್ಲಿ ಕಾಂಗ್ರೆಸ್ ರಚನಾತ್ಮಕವಾಗಿ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ. ಆದರೆ ಮಾತಿನಲ್ಲಿ ಮಾತ್ರ ಸಹಕಾರ ಎನ್ನುತ್ತಾರೆ ಎಂದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd