ಬಿಜೆಪಿ ಜನಸ್ಪಂದನ ಸಮಾವೇಶಕ್ಕೆ ಕ್ಷಣಗಣನೆ – ದೊಡ್ಡಬಳ್ಳಾಪುರದಿಂದ ರಣಕಹಳೆ
ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರಕ್ಕೆ 1 ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ದೊಡ್ಡಬಳ್ಳಾಪುರದಲ್ಲಿ ಭರ್ಜರಿ ಸಮಾವೇಶವನ್ನ ಆಯೋಜಿಸಲಾಗಿದೆ. ಅಲ್ಲದೆ ಮುಂದಿನ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತಯಾರಿ ಮಾಡಿಕೊಳ್ಳುತ್ತಿದೆ. ಹಾಗಾಗಿ ಇಂದು ಬೃಹತ್ ಜನಸ್ಪಂದನ ಸಮಾವೇಶ ಆಯೋಜಿಸಲಾಗಿದೆ.
2023ರ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ದೊಡ್ಡಬಳ್ಳಾಪುರದಿಂದ ಕಹಳೆ ಮೊಳಗಿಸುತ್ತಿದೆ. 40 ಎಕರೆ ಮೈದಾನದಲ್ಲಿ ಜನಸ್ಪಂದನ ಕಾರ್ಯಕ್ರಮ ಬೃಹತ್ ವೇದಿಕೆ ಸಿದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಸಿಎಂ ಬೊಮ್ಮಾಯಿ ಜನರ ಮುಂದಿಡಲಿದ್ದಾರೆ.
ಈ ಹಿಂದೆ ಎರಡು ಭಾರಿ ಜನಸ್ಪಂದನ ಕಾರ್ಯಕ್ರಮವನ್ನ ಅನಿವಾರ್ಯ ಕಾರಣಗಳಿಗೆ ಮುಂದೂಡಲಾಗಿತ್ತು. ಈ ಭಾರಿ ನಿಗದಿಯಂತೆ ಆರೋಗ್ಯ ಸಚಿವ ಕೆ ಸುಧಾಕರ್ ನೇತೃತ್ವದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಸಚಿವರು, ಶಾಸಕರು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದ್ದು, 3 ಲಕ್ಷ ಜನರಿಗೆ ಊಟದ ವ್ಯವಸ್ಥೆ, ಸುಮಾರು 200 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ 5 ಸಾವಿರ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಬರುವವರಿಗೆ ಬೆಳಗ್ಗೆಯಿಂದಲೇ ತಿಂಡಿ ವ್ಯವಸ್ಥೆ ಮಾಡಿದ್ದು. ತಿಂಡಿಗೆ ರೈಸ್ಬಾತ್, ಮೊಸರನ್ನ ಹಾಗೂ ಬಾದುಷಾ ತಯಾರಿಸಲಾಗಿದೆ. 900 ಬಾಣಸಿಗರು ಹಾಗೂ ಭಟ್ಟರಿಂದ ಅಡುಗೆ ತಯಾರಿ ಮಾಡಲಾಗುತ್ತಿದೆ.








