ಬಿಜೆಪಿಯವರು “ಪವರ್ ಬೆಗ್ಗರ್ಸ್” : ಡಿ.ಕೆ.ಶಿವಕುಮಾರ್ DK Shivakumar
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಾಟ ಮುಂದುವರೆದಿದೆ. ಈ ಮಧ್ಯೆ ಸಿಎಂ ಬದಲಾವಣೆ ಮತ್ತು ಬಿಜೆಪಿ ನಾಯಕರು ದೆಹಲಿಗೆ ಭೇಟಿ ನೀಡುತ್ತಲೇ ಇದ್ದಾರೆ.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅವರೆಲ್ಲರೂ ಪವರ್ ಬೆಗ್ಗರ್ಸ್ ಎಂದು ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸಂಕಷ್ಟದಿಂದ ಜನರು ಪರದಾಡುತ್ತಿದ್ದರೆ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ವರಿಷ್ಠರ ಭೇಟಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಅವರೆಲ್ಲರೂ ಪವರ್ ಬೆಗ್ಗರ್ಸ್. ಸಿಎಂ ಯಡಿಯೂರಪ್ಪನವರು ಯಾರ್ಯಾರನ್ನೋ ಎಲ್ಲೆಲ್ಲಿಂದಲೊ ಕರೆತಂದರು. ಈಗ ಅವರೇ ಎಲ್ಲವನ್ನು ಅನುಭವಿಸುತ್ತಿದ್ದಾರೆ. ಅವರು ಮಾಡಿದ್ದನ್ನು ಅವರು ಅನುಭವಿಸುತ್ತಿದ್ದಾರೆ ಎಂದು ವ್ಯಂಗವಾಡಿದರು.
ಇದೇ ವೇಳೆ ಪ್ಯಾಕೇಜ್ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಅಸಂಘಿತ ಕಾರ್ಮಿಕರು ಸಾಕಷ್ಟು ಜನರಿದ್ದಾರೆ. ಅವರೆಲ್ಲರೂ ಪರಿಹಾರಕ್ಕೆ ಅರ್ಜಿ ಹಾಕಲು ಆಗುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ಸರ್ಕಾರದ ಆರ್ಥಿಕ ಪ್ಯಾಕೇಜ್ ಸಮರ್ಪಕವಾಗಿಲ್ಲ ಎಂದರು.