ಕಟೀಲ್ ವಿರುದ್ಧ ನಡಿತಿದ್ಯಾ ಒಳಸಂಚು : ರಾಜಕೀಯ ಮಹಾಭಾರತದಲ್ಲಿ ಆಧುನಿಕ ಕೃಷ್ಣಾರ್ಜುನರು
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದೆ ನಳೀನ್ ಕುಮಾರ್ ಕಟೀಲ್ ಡಮ್ಮಿ ಆದ್ರಾ..? ರಾಜಕೀಯ ಮಹಾಭಾರತದಲ್ಲಿ ನಳೀನ್ ಕುಮಾರ ಕಟೀಲ್ ಉತ್ತರ ಕುಮಾರಂತಾದರಾ..? ಕನಕಪುರ ಬಂಡೆಯ ಸಂಘಟನಾ ಸಾಮಥ್ರ್ಯಕ್ಕೆ ತಕ್ಕಂತೆ ನಳಿನ್ ಕುಮಾರ್ ಕಟೀಲ್, ತಮ್ಮ ಚಾತುರ್ಯ ಪ್ರದರ್ಶಿಸಿ, ಸಂಘಟನೆಗೆ ಬಲ ನೀಡುವಲ್ಲಿ ವಿಫಲರಾಗಿದ್ದಾರಾ..? ಅನ್ನೋ ಪ್ರಶ್ನೆಗಳು ಇದೀಗ ರಾಜಕೀಯದ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಇದಲ್ಲದೆ ನಳಿನ್ ಕುಮಾರ್ ಕಟೀಲ್ ಅವರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಚರ್ಚೆಗಳು ಕೂಡ ಬಿಜೆಪಿ ಬಿಗ್ ಬಾಸ್ ಗಳ ಮಟ್ಟದಲ್ಲಿ ನಡೆಯುತ್ತಿದೆಯಂತೆ..
ರಾಜ್ಯ ಬಿಜೆಪಿಯ ಸಾರಥಿಯಾಗಿ ದಕ್ಷಿಣ ಕನ್ನಡ ಮೂಲದ ನಳಿನ್ ಕುಮಾರ್ ಕಟೀಲ್ ಅವ್ರನ್ನ ಆಯ್ಕೆ ಮಾಡಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು.. ಎಷ್ಟೋ ಬಿಜೆಪಿ ಕಾರ್ಯಕರ್ತರಿಗೆ ಕಟೀಲ್ ಯಾರು ಅಂತ ಗೊತ್ತೇ ಇರಲಿಲ್ಲ.. ಕೇವಲ ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಕಟೀಲ್, ರಾಜ್ಯ ಬಿಜೆಪಿಯ ಸಾರಥ್ಯವನ್ನು ವಹಿಸುತ್ತಾರೆ ಅಂತ ಯಾರೂ ಊಹೆ ಮಾಡಿರಲಿಲ್ಲ. ಆದ್ರೆ ಬಿಜೆಪಿ ಬಿಗ್ ಬಾಸ್ ಗಳು ಸಂಘಪರಿವಾರದ ಹಿನ್ನೆಲೆ ಮತ್ತು ಸಂಘದಲ್ಲಿನ ಕಟೀಲ್ ಅವ್ರ ಪರಿಶ್ರಮ, ಸಂಘಟನೆಯ ಸಾಮಥ್ರ್ಯವನ್ನು ಗುರುತಿಸಿ ಅವರನ್ನು ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಿತು.
ಇತ್ತ ವಿರೋಧ ಪಕ್ಷಗಳು ನಳಿನ್ ಕುಮಾರ್ ಕಟೀಲ್ ಅವರನ್ನ ಕೇವಲವಾಗಿ ತೆಗೆದುಕೊಂಡಿದ್ದವು. ಕೇವಲ ಒಂದು ಭಾಗಕ್ಕೆ ಸೀಮಿತವಾಗಿರುವ ಕಟೀಲ್ ನಮಗೆ ಯಾವುದೇ ಹಂತದಲ್ಲೂ ಪ್ರಬಲ ಎದುರಾಳಿ ಆಗಲಾರ ಎಂದು ಕಾಂಗ್ರೆಸ್ ಜೆಡಿಎಸ್ ಅಂದುಕೊಂಡಿದ್ದವು. ಅಲ್ಲದೆ ಕೆಲವರು ಕಟೀಲ್ ಅವರನ್ನ ಮಹಾಭಾರತದ ಉತ್ತರ ಕುಮಾರನಿಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದರು. ಕಾಂಗ್ರೆಸ್ ಕಟೀಲ್ ಅವರನ್ನ ಕಮಿಡಿಯನ್ ಎಂದು ಟೀಕೆ ಮಾಡಿತ್ತು.
ರಾಜಕೀಯ ಮಹಾಭಾರತದಲ್ಲಿ ಆಧುನಿಕ ಕೃಷ್ಣಾರ್ಜುನರು
ವೀರನಿಗೆ ಯುದ್ಧ ಗೆಲ್ಲೋದಿಕೆ ಚಿಕ್ಕ ಚಾಕು ಇದ್ದರೇ ಸಾಕು ಎಂಬಂತೆ ಕೇವಲ ಸಂಘಟನೆಯನ್ನೇ ಅಸ್ತ್ರವಾಗಿಸಿಕೊಂಡು ಉಪಚುನಾವಣೆಗಳಲ್ಲಿ ಎದುರಾಳಿಗೆ ಕಟೀಲ್ ಟಕ್ಕರ್ ನೀಡಿದರು. ತಮ್ಮನ್ನ ಕೇವಲವಾಗಿ ತೆಗೆದುಕೊಂಡಿದ್ದ ವಿರೋಧಿಗಳಿಗೆ ಕಟೀಲ್ ಮುಟ್ಟಿನೋಡಿಕೊಳ್ಳುವಂತಹ ಆಘಾತ ನೀಡಿದ್ರು. ಉಪಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ಕೇಕೆ ಹಾಕುವಂತೆ ಮಾಡಿದರು. ಕರ್ನಾಟಕದ ಇತಿಹಾಸದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಹಿಂದೆಂದೂ ಮಾಡದಂತಹ ಸಾಧನೆ ಮಾಡುವಂತೆ ಮಾಡಿದ್ದು ಕಟೀಲ್ ಅವರ ಸಂಘಟನೆಯ ಚತುರತೆಗೆ ಹಿಡಿದ ಕೈಗನ್ನಡಿ.. ಅದರಲ್ಲೂ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನಳಿನ್ ಕುಮಾರ್ ಕಟೀಲ್ ಅವರ `ಗ್ರಾಮ ಸ್ವರಾಜ್’ ಪರಿಕಲ್ಪನೆ ಪಕ್ಷಕ್ಕೆ ಭದ್ರಬುನಾದಿ ಹಾಕಿಕೊಡ್ತು.
ಕಟೀಲ್ ಅವರ ಈ ಸಾಧನೆಗೆ ಪ್ರಮುಖ ಕಾರಣ ಬಿ.ಎಲ್.ಸಂತೋಷ್. ಹೌದು..! ಈಗ ನಳಿನ್ ಕುಮಾರ್ ಕಟೀಲ್ ಬಿಜೆಪಿ ಸಾರಥಿ ಆಗಿದ್ದಾರೆ ಅಂದ್ರೆ ಸಂತೋಷ್ ಮುಖ್ಯಕಾರಣ. ರಾಜಕೀಯ ಮಹಾಭಾರತದಲ್ಲಿ ಮುಂಬರುವ ಲೋಕ ಕುರುಕ್ಷೇತ್ರ ಯುದ್ಧವನ್ನ ಗಮನದಲ್ಲಿಟ್ಟುಕೊಂಡು ಸಂತೋಷ್ ಮತ್ತು ಕಟೀಲ್ ಕೃಷ್ಣಾರ್ಜುನರಾಗಿ ಪಕ್ಷವನ್ನ ಸಂಘಟಿಸುತ್ತಿದ್ದಾರೆ. ಇಲ್ಲಿ ಕಟೀಲ್ ಗೆ ಪ್ರತಿ ಹಂತದಲ್ಲಿ ಬೆಂಬಲವಾಗಿ ಕೃಷ್ಣನಂತೆ ಸಂತೋಷ್ ಅವರು ನಿಂತಿದ್ದಾರೆ. ರಾಜಕೀಯ ಶಕುನಿಗಳ ತಂತ್ರಗಳಿಗೆ ಪ್ರತಿತಂತ್ರಗಳನ್ನ ರೂಪಿಸುತ್ತಾ ಪಕ್ಷವನ್ನ ಗಟ್ಟಿಗೊಳಿಸುತ್ತಿದ್ದಾರೆ.
ಕಟೀಲ್ ವಿರುದ್ಧ ನಡಿತಿದ್ಯಾ ಸಂಚು..?
ಸದ್ಯ ಬೆಳವಣಿಗೆಗಳನ್ನ ಗಮನಿಸಿದ್ರೆ ಕಟೀಲ್ ವಿರುದ್ಧ ಸಂಚು ನಡಿತಿದ್ಯಾ ಅನ್ನೋ ಪ್ರಶ್ನೆ ಮೂಡೋದು ಸಾಮಾನ್ಯ. ಯಾಕೆಂದ್ರೆ ಪಕ್ಷದಲ್ಲಿ ಎಷ್ಟೇ ಗೊಂದಲಗಳಿರಲಿ, ಸರ್ಕಾರ ಎಷ್ಟೇ ಇಕ್ಕಟ್ಟಿನಲ್ಲಿರಲಿ ಕಟೀಲ್ ಪಕ್ಷ ಸಂಘಟನೆಯನ್ನ ಮಾತ್ರ ಬಿಡುತ್ತಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಮೂಲೆ ಮೂಲೆಗೂ ಭೇಟಿ ನೀಡಿ ಕೇಸರಿ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದಾರೆ. ಗ್ರಾಮದ ಮಟ್ಟದಿಂದ ಪಕ್ಷವನ್ನ ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ. ಆದ್ರೆ ಅವರದ್ದೇ ಪಕ್ಷದಲ್ಲಿ ಕಟೀಲ್ ಅವರನ್ನ ಸೈಡ್ ಲೇನ್ ಮಾಡುವ ಮತ್ತು ದೆಹಲಿ ವರಿಷ್ಠರ ಮುಂದೆ ಕಟೀಲ್ ಅವರನ್ನ ಡಮ್ಮಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಕಟೀಲ್ ಅವರ ಬೆಳವಣಿಗೆಯನ್ನ ಸಹಿಸಿಕೊಳ್ಳದ ಕೆಲ ಸ್ವಪಕ್ಷಿಗಳು ಕಟೀಲ್ ವಿರುದ್ಧ ಸಂಜು ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಸಹ ಕೇಳಿಬರುತ್ತಿವೆ.
ಸದ್ಯ ರಾಜ್ಯ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ದಿವಂಗರ ಅನಂತ್ ಕುಮಾರ್ ಅವರ ಬೆಂಬಲಿಗರನ್ನ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಜಗನ್ನಾಥ ಭವನ ಈಗ ಸಂತೋಷ್ ಮಯವಾಗಿಬಿಟ್ಟಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಸಂತೋಷ್ ರ ಆಪ್ತರಾಗಿರುವ ಕಟೀಲ್ ವಿರುದ್ಧ ಸ್ವಪಕ್ಷದವರೇ ಸಂಚು ರೂಪಿಸುತ್ತಿದ್ದಾರೆ ಅನ್ನೋದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.