ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ʻಸಂಕಲ್ಪ ಪತ್ರʼ (ಪ್ರಣಾಳಿಕೆ)ವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಮೂಲಕ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ.
ದೆಹಲಿ ವಿಧಾನಸಭೆಗೆ ಫೆ. 5ರಂದು ಮತದಾನ ನಡೆಯಲಿದೆ. ಹೀಗಾಗಿ ಕೇಂದ್ರ ಸಚಿವ ಹಾಗೂ ಪಕ್ಷದ ರಾಷ್ಟ್ರೀಯ ಜೆ.ಪಿ ನಡ್ಡಾ ಸಂಕಲ್ಪ ಪತ್ರ ಬಿಡುಗಡೆ ಮಾಡುವುದರ ಮೂಲಕ ಹಲವು ಗ್ಯಾರಂಟಿಗಳನ್ನು ಘೋಷಿಸಿದರು.
ಮಹಿಳೆಯರಿಗೆ 6 ಪೌಷ್ಠಿಕಾಂಶ ಕಿಟ್‌ಗಳು, ಗರ್ಭಿಣಿಯರಿಗೆ 21,000 ರೂ. ನೀಡುವುದು, ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೆರವು, 500 ರೂ. ಗೆ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಬಿಜೆಪಿ ಘೋಷಿಸಿದೆ.
ಅಲ್ಲದೇ, 60 ರಿಂದ 70 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ 2,500 ರೂ. ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾಸಿಕ 3 ಸಾವಿರ ರೂ. ನೆರವು ನೀಡುವುದಾಗಿ ಘೋಷಿಸಿದೆ. ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲೇ ಆಯುಷ್‌ಮಾನ್ ಭಾರತ್ ಯೋಜನೆ ಜಾರಿಗೆ ಒಪ್ಪಿಗೆ ನೀಡಲಾಗುವುದು. ಆರೋಗ್ಯ ರಕ್ಷಣೆಗಾಗಿ 5 ಲಕ್ಷ ರೂ. ನೀಡಲಾಗುವುದು. 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡುವ ಜೊತೆಗೆ ಹೋಳಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ 1 ಉಚಿತ ಸಿಲಿಂಡರ್ ನೀಡಲಾಗುವುದು ಎಂಬ ಗ್ಯಾರಂಟಿ ಘೋಷಿಸಿದರು.








