ಚಂಡೀಗಢ : ಸರ್ಕಾರಿ ಅಧಿಕಾರಿಯೊಬ್ಬರಿಗೆ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರು ಚಪ್ಪಲಿಯಿಂದ ಹೊಡೆದಿದ್ದಾರೆ. ಈ ವಿಡಿಡೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಶುಕ್ರವಾರ ಸೋನಾಲಿ ಫೋಗಟ್ ಅವರು ಹಿಸಾರ್ ನ ಬಾಲ್ಸಮಂದ್ ಮಂಡಿಗೆ ಭೇಟಿ ನೀಡಿದ್ದರು. ಈ ವೇಳೆ ಹಿಸಾರ್ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಅವರು ನಿಮ್ಮಂಥ ಸುಂದರ ಚೆಲುವೆ, ಸ್ಟಾರ್ ಬಿಸಿಲಿನಲ್ಲಿ ಹೀಗೆ ಮಂಡಿಗೆ ಬರಬಾರದು ಎಂದು ಹೇಳಿದ್ದರು ಎನ್ನಲಾಗಿದೆ.
https://twitter.com/rssurjewala/status/1268851486458609664?s=20
ಇದರಿಂದ ಕೋಪಗೊಂಡ ಫೋಗಟ್, ಸಿಂಗ್ ಜೊತೆ ತೀವ್ರವಾಗಿ ಮಾತುಕತೆ ನಡೆಸಿದ್ದಾರೆ. ನಂತರ ಚಪ್ಪಲಿ ತೆಗೆದುಕೊಂಡು ಥಳಿಸಿದ್ದಾರೆ. ಈ ವಿಡಿಯೋವನ್ನು ಸ್ಥಳದಲ್ಲಿದ್ದವರು ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ನಡೆದ ನಂತರ ಫೋಗಟ್ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ, ಸುಲ್ತಾನ್ ಸಿಂಗ್ ಅಸಭ್ಯವಾಗಿ ಮಾತನಾಡಿ ನನ್ನನ್ನು ಅವಮಾನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಇತ್ತ ಸುಲ್ತಾನ್ ಸಿಂಗ್ ಕೂಡ ಒಬ್ಬ ಸರ್ಕಾರಿ ಅಧಿಕಾರಿಯ ಮೇಲೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಫೋಗಟ್ ವಿರುದ್ಧ ದೂರು ದಾಖಲಿಸಿದ್ದಾರೆ.








