BJPvsCongress | ಡಿಕೆಶಿಗೆ ತಮಿಳುನಾಡು ಸರ್ಕಾರದ ವಿರುದ್ಧ ಧ್ವನಿ ಎತ್ತುವ ತಾಕತ್ತು ಇದೆಯೇ?
ಬೆಂಗಳೂರು : ಕುಡಿಯುವ ನೀರಿಗಾಗಿ ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿರುವ ಯೋಜನೆಗೆ ತಮಿಳುನಾಡಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಡಿಕೆಶಿ ಅವರಿಗೆ ತಮಿಳುನಾಡು ಸರ್ಕಾರದ ವಿರುದ್ಧ ಧ್ವನಿ ಎತ್ತುವ ತಾಕತ್ತು ಇದೆಯೇ? ನೀರಿನ ರಾಜಕಾರಣ ಮಾಡಿ ಸಿಎಂ ಆಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.
ರಾಜ್ಯ ಕಾಂಗ್ರೆಸ್ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಟ್ವಿಟ್ಟರ್ ನಲ್ಲಿ ಬಿಜೆಪಿ ಆಕ್ರೋಶ ಹೊರಹಾಕಿದ್ದು, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ತಮ್ಮದೇ ಮೈತ್ರಿ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಕೆ ಮೌನವಾಗಿದ್ದಾರೆ? ತಮಿಳುನಾಡಿಗೆ ಪಾದಯಾತ್ರೆ ಮಾಡುವುದೆಂದು ಎಂದು ಕುಟುಕಿದೆ.
ರಾಹುಲ್ ಗಾಂಧಿ ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರ ಜೊತೆ ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು. ಆದರೆ ಅಧಿಕಾರದ ದಾಹದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಕರ್ನಾಟಕದ ಪರವಾಗಿ ಮಾತನಾಡಲು ಹಿಂಜರಿದರು. ಡಿಕೆಶಿಯವರೇ, ಇಲ್ಲಿ ಪಾದಯಾತ್ರೆ ಮಾಡುವ ಬದಲು ತಮಿಳುನಾಡಿನ ಕಡೆಗೆ ಪಾದ ಬೆಳೆಸಿದ್ದರೆ ಏನಾದರೂ ಲಾಭವಾಗುತ್ತಿತ್ತಲ್ಲವೇ?
ರಾಜಕೀಯ ಲಾಭಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ಒಂದಲ್ಲ ಎರಡು ಬಾರಿ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎರಡು ಬಾರಿ #ಸುಳ್ಳಿನಜಾತ್ರೆ ಮಾಡಿ ಅಭ್ಯಾಸವಿರುವ ಡಿಕೆಶಿ ಅವರಿಗೆ ಮತ್ತೊಂದು ಬಾರಿ ಪಾದಯಾತ್ರೆ ಮಾಡುವುದು ಕಷ್ಟವೇನಿಲ್ಲ. ಮೂರನೇ ಬಾರಿ, ರಾಜ್ಯದ ಹಿತದೃಷ್ಟಿಯಿಂದ ತಮಿಳುನಾಡು ಕಡೆಗೆ ಪಾದಯಾತ್ರೆ ಮಾಡಿ. ನಿರೀಕ್ಷಿಸಬಹುದೇ?
ಮೇಕೆದಾಟು ಪಾದಯಾತ್ರೆಯ ಮೂಲಕ ಬೆಂಗಳೂರಿನ 15ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿರುವುದಾಗಿ ಡಿಕೆಶಿ ಹೇಳಿದ್ದಾರೆ. ಅದು ನೀರಿಗಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಎಂಬುದು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಲ್ಲೇ ಸ್ಪಷ್ಟವಾಗುತ್ತದೆ. ಹೋಳಿ ಹಬ್ಬ ಮುಗಿದಿದೆ, ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗುತ್ತಿದೆ.
ಮಹದಾಯಿ ಆಗಲಿ ಮೇಕೆದಾಟು ಆಗಲಿ ಕಾಂಗ್ರೆಸ್ ನಾಯಕರದು ಸದಾ ಇಬ್ಬಗೆಯ ನಿಲುವು. ಅಧಿಕಾರದಲ್ಲಿದ್ದಾಗ ಒಂದು ರೀತಿ, ಅಧಿಕಾರ ಕಳೆದುಕೊಂಡಾಗ ಇನ್ನೊಂದು ನೀತಿ. ತಮಿಳುನಾಡು ಸರ್ಕಾರ ತೆಗೆದುಕೊಂಡ ನಿರ್ಣಯದ ವಿರುದ್ಧ ಒಂದು ಸಾತ್ವಿಕ ಪ್ರತಿರೋಧ ತೋರುವ ಧೈರ್ಯವಾದರೂ ಡಿ.ಕೆ.ಶಿವಕುಮಾರ್ ಅವರಿಗೆ ಇದೆಯೇ?
ಮೇಕೆದಾಟು ಹೋರಾಟದ ನಾಟಕದ ಮೂಲಕ ಹಳೆ ಮೈಸೂರು ಭಾಗದಲ್ಲಿ ತಮ್ಮ ನಾಯಕತ್ವ ಪ್ರತಿಷ್ಠಾಪನೆ ಮಾಡುವುದಷ್ಟೇ ಡಿ.ಕೆ.ಶಿವಕುಮಾರ್ ಅವರ ಉದ್ದೇಶವಾಗಿತ್ತು. ಆದರೆ ಪಾದಯಾತ್ರೆಯ ಉದ್ದೇಶಕ್ಕೆ ಅವರ ಮೈತ್ರಿ ಪಕ್ಷದಿಂದಲೇ ಅಡ್ಡಿಯುಂಟಾಗಿದೆ. ಡಿಕೆಶಿ ಅವರೇ, ಜಲ ಜಪ ಮಾಡಿಕೊಂಡು ನಾಲ್ಕು ಹೆಜ್ಜೆ ನಡೆದವರೆಲ್ಲ ಭಗೀರಥರಾಗಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದೆ. bjpvscongress-DK Shivakumar Mekedatu yojane