ರಾಜ್ಯದಲ್ಲಿ 97 ಜನರಲ್ಲಿ ಬ್ಲ್ಯಾಕ್ ಫಂಗಸ್ : ಆರೋಗ್ಯ ಸಚಿವರಿಂದ ಆಘಾತಕಾರಿ ಮಾಹಿತಿ
ಬೆಂಗಳೂರು : ರಾಜ್ಯದಲ್ಲಿ 97 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಸೋಂಕಿನ ಲಕ್ಷಣಗಳು ಕಂಡುಬಂದರೇ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದ್ದು, ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಿ. ರಾಜ್ಯದಲ್ಲಿ 97 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಆದರೆ ಕೊರೊನಾ ರೀತಿಯಲ್ಲಿಯೇ ಬ್ಲ್ಯಾಕ್ ಫಂಗಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂಬುದು ಸುಳ್ಳು ಎಂದು ಸ್ಪಷ್ಟ ಪಡಿಸಿದರು.
ಇನ್ನು ಬ್ಲ್ಯಾಕ್ ಫಂಗಸ್ ಮುಚ್ಚಿಡುವಂತಹ ಕಾಯಿಲೆಯಲ್ಲ. ಬ್ಲ್ಯಾಕ್ ಫಂಗಸ್ ಬಂದರೆ ಅದು ಎಲ್ಲರಿಗೂ ಗೊತ್ತಾಗುತ್ತದೆ. ಆರಂಭದಲ್ಲಿ ಕಣ್ಣಿಗೆ ಅಟ್ಯಾಕ್ ಆಗುತ್ತದೆ. ಕಣ್ಣಲ್ಲಿ ನೋವು, ಊತ ಕಾಣಿಸಿಕೊಳ್ಳುತ್ತದೆ. ಬಳಿಕ ಮೂಗು, ಬಳಿಕ ಮೆದುಳಿಗೆ ಅಟ್ಯಾಕ್ ಆಗುತ್ತದೆ. ಕಣ್ಣಿಗೆ ತೊಂದರೆಯಾದಾಗಲೇ ಆಸ್ಪತ್ರೆಗೆ ದಾಖಲಾಗುತ್ತಾರೆ. ಹಾಗಾಗಿ ಬ್ಲ್ಯಾಕ್ ಫಂಗಸ್ ಲಕ್ಷಣ ಕಂಡುಬಂದರೆ ಮುಚ್ಚಿಡಲಾಗದು ಎಂದರು.
ಶುಗಲ್ ಇರುವವರು ಅಧಿಕ ಸ್ಟಿರಾಯ್ಡ್ ಬಳಕೆ ಮಾಡಿದಲ್ಲಿ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಹೆಚ್ಚು ಎಂದು ವಿವರಿಸಿದ ಆರೋಗ್ಯ ಸಚಿವರು, ಕೊರೊನಾ ಸೋಂಕು ಬಂದವರು ಸ್ಟಿರಾಯ್ಡ್ ಬಳಸಿದರೆ ಅಂತವರಲ್ಲಿ ಶುಗರ್ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ ಇಂತವರು ಶುಗರ್ ನಿಯಂತ್ರಣದಲ್ಲಿಟ್ಟುಕೊಂಡಿರಬೇಕು ಎಂದು ತಿಳಿಸಿದ್ದಾರೆ.