ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ : ಈಶ್ವರಪ್ಪ ಹೇಳಿಕೆ ಮರ್ಮವೇನು..?
ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡಲು ಆರಂಭವಾಗಿದೆ. ಸಚಿವ ಸಂಪುಟ ರಚನೆಗೂ ಮೊದಲೇ ಬಿಜೆಪಿ ಹಿರಿಯ ನಾಯಕರಲ್ಲಿ ಒಂದಿಷ್ಟು ಬೇಸರ ಕುದಿಯುತ್ತಿದೆ.
ಅದಕ್ಕೆ ಪುಷ್ಠಿ ನೀಡುವಂತೆ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಹೇಳಿಕೆಗಳನ್ನು ನೀಡಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರುವುದಿಲ್ಲ. ನಾನು ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕನಾಗಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷದ ವರಿಷ್ಠರು ಜವಾಬ್ದಾರಿ ನೀಡಿದರೆ ನಿರ್ವಹಿಸುತ್ತೇನೆ. ಇದು ನನ್ನ ವೈಯಕ್ತಿಕ ನಿರ್ಧಾರ. ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ. ಆ ಮೂಲಕ ಯಾವುದೇ ಕಾರಣಕ್ಕೂ ಬೊಮ್ಮಾತಿ ಸಂಪುಟದಲ್ಲಿ ಸೇರೋದಿಲ್ಲ ಎಂದು ಕಡ್ಡಿತುಂಡಾದಂತೆ ಶೆಟ್ಟರ್ ಹೇಳಿದ್ದಾರೆ.
ಇತ್ತ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಈಗಷ್ಟೇ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇನ್ನೂ ಹಲವು ಬದಲಾವಣೆಗೆಳು ಆಗಲಿವೆ. ಎಲ್ಲವನ್ನೂ ಕಾದು ನೋಡಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಇಬ್ಬರು ನಾಯಕರುಗಳ ಹೇಳಿಕೆಗಳನ್ನು ಗಮನಿಸಿದ್ರೆ ಬಿಜೆಪಿಯಲ್ಲಿ ಅಸಮಾಧಾನ ಮನೆ ಮಾಡಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಈ ಹೇಳಿಕೆಗೆ ಕಾರಣವೇನು..?
ಜಗದೀಶ್ ಶೆಟ್ಟರ್, ಕೆ ಎಸ್ ಈಶ್ವರಪ್ಪ ಮೂಲತಃ ಬಿಜೆಪಿ ಮತ್ತು ಸಂಘಪರಿವಾರ ಕಟ್ಟಾಳುಗಳು. ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಲು ಒಂದಿಷ್ಟು ಕೆಲಸ ಮಾಡಿದ್ದಾರೆ. ಎಂತಹದ್ದೇ ಪರಿಸ್ಥಿತಿಯಲ್ಲೂ ಪಕ್ಷದ ಪರ ನಿಂತಿದ್ದಾರೆ. ಹೀಗಿರುವಾಗ ಹಿರಿತನದಲ್ಲಿ ನೋಡಿದ್ರೆ ಬೊಮ್ಮಾಯಿ ಈ ಇಬ್ಬರು ನಾಯಕರುಗಳಿಂತ ಕಿರಿಯರು. ಅದರಲ್ಲೂ ಅವರು ಜನತಾ ಪರಿವಾರದಿಂದ ಬಂದವರು. ಮುಖ್ಯಮಂತ್ರಿ ಆಯ್ಕೆಯಲ್ಲಿ ಎಲ್ಲೋ ಒಂದು ಕಡೆ ನಮ್ಮನ್ನು ಕಡೆಗಣಿಸಲಾಗಿದೆ. ಜೊತೆಗೆ ಸಚಿವ ಸಂಪುಟದಿಂದ ಕೈ ಬಿಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಇವರಿಗಿದ್ದು, ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..