ಬೆಂಗಳೂರು: ಪಾಶ್ಚಿಮಾತ್ಯ ದೇಶಗಳಿಗಿಂತ ಒಂದು ದಶಕ ಮುಂಚಿತವಾಗಿಯೇ ಭಾರತೀಯರಲ್ಲಿ ಕಾಣಿಸಿಕೊಳ್ಳುವ ಹಾಗೂ ಪದೇಪದೇ ಮರುಕಳಿಸುವ ‘ಮಲ್ಟಿಪಲ್ ಮೈಲೋಮಾ’ (ರಕ್ತದ ಕ್ಯಾನ್ಸರ್) ಚಿಕಿತ್ಸೆಗೆ ಹೊಸ ಔಷಧವೊಂದು ಮಾರುಕಟ್ಟೆಗೆ ಬಂದಿದೆ. ಗ್ಲಾಕ್ಸೊಸ್ಮಿತ್ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿ. (ಜಿಎಸ್ಕೆ ಇಂಡಿಯಾ) ಸಂಸ್ಥೆಯು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ (ಸಿಡಿಎಸ್ಸಿಒ) ಅನುಮೋದನೆ ಪಡೆದ ‘ಬ್ಲೆನ್ರೆಪ್’ (ಬೆಲಾಂಟಮ್ಯಾಬ್ ಮಾಫೊಡೋಟಿನ್) ಔಷಧವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಈ ಹಿಂದೆ ಕನಿಷ್ಠ ಒಂದು ಹಂತದ ಚಿಕಿತ್ಸೆ ಪಡೆದಿರುವ, ರೋಗ ಮರುಕಳಿಸಿದ ಅಥವಾ ಹಳೆಯ ಚಿಕಿತ್ಸೆಗೆ ಸ್ಪಂದಿಸದ ವಯಸ್ಕ ಮಲ್ಟಿಪಲ್ ಮೈಲೋಮಾ ರೋಗಿಗಳಿಗೆ ಇತರ ಔಷಧಗಳೊಂದಿಗೆ ಸಂಯೋಜಿಸಿ ಇದನ್ನು ನೀಡಲು ಅನುಮತಿ ದೊರೆತಿದೆ.
ಜಾಗತಿಕವಾಗಿ ಎರಡನೇ ಅತಿ ಸಾಮಾನ್ಯ ರಕ್ತದ ಕ್ಯಾನ್ಸರ್ ಆಗಿರುವ ಮಲ್ಟಿಪಲ್ ಮೈಲೋಮಾದ 1.96 ಲಕ್ಷಕ್ಕೂ ಹೆಚ್ಚು ಪ್ರಕರಣಗಳು 2024ರಲ್ಲಿ ವಿಶ್ವದಾದ್ಯಂತ ವರದಿಯಾಗಿದ್ದು, ಭಾರತದಲ್ಲೇ 17,529 ಹೊಸ ಪ್ರಕರಣಗಳು ದಾಖಲಾಗಿವೆ. ಚಿಕಿತ್ಸೆ ನೀಡಬಹುದಾದರೂ ಸಂಪೂರ್ಣ ಗುಣಪಡಿಸಲಾಗದ ಈ ಕಾಯಿಲೆಯು ಭಾರತದಲ್ಲಿ ಹೆಚ್ಚುತ್ತಿರುವ ಜೀವಿತಾವಧಿ ಮತ್ತು ನಗರೀಕರಣದೊಂದಿಗೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದೇ ಹೊತ್ತಲ್ಲಿ ಈ ಹೊಸ ಔಷಧ ಬಿಡುಗಡೆಯಾಗಿದೆ.
ಅಮೆರಿಕ ಮತ್ತು ಯುರೋಪ್ ದೇಶಗಳಲ್ಲೂ ಅನುಮೋದನೆ ಪಡೆದಿರುವ ‘ಬ್ಲೆನ್ರೆಪ್’, ಮಲ್ಟಿಪಲ್ ಮೈಲೋಮಾ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಕೋಶಗಳನ್ನು ಗುರುತಿಸಿ ನೇರವಾಗಿ ದಾಳಿ ಮಾಡುವ ವಿಶೇಷ ‘ಎಡಿಸಿ’ ವಿಧಾನದ ವಿಶ್ವದ ಮೊದಲ ಔಷಧವಾಗಿದೆ. ಇದು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಜೊತೆಗೆ, ದೇಹದ ರೋಗನಿರೋಧಕ ಶಕ್ತಿ ಕುಂದದಂತೆ ನೋಡಿಕೊಂಡು ದೀರ್ಘಕಾಲ ರೋಗವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.
‘ಡ್ರೀಮ್-7’ ಮತ್ತು ‘ಡ್ರೀಮ್-8’ ಎಂಬ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಬ್ಲೆನ್ರೆಪ್ ಬಳಕೆಯಿಂದ ರೋಗ ಉಲ್ಬಣಗೊಳ್ಳದೆ ನಿಯಂತ್ರಣದಲ್ಲಿರುವ ಅವಧಿಯು ಪ್ರಮಾಣಿತ ಚಿಕಿತ್ಸೆಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿರುವುದು ದೃಢಪಟ್ಟಿದೆ.
ಪ್ರಸ್ತುತ ಬಳಕೆಯಲ್ಲಿರುವ ಇತರ ಕ್ಯಾನ್ಸರ್ ಔಷಧಗಳೊಂದಿಗೆ ಸಂಯೋಜಿಸಿ ಬ್ಲೆನ್ರೆಪ್ ನೀಡಿದಾಗ, ‘ಡ್ರೀಮ್-7’ ಅಧ್ಯಯನದಲ್ಲಿ ರೋಗ ನಿಯಂತ್ರಣ ಅವಧಿ 36.6 ತಿಂಗಳಾಗಿದೆ (ಹೋಲಿಕೆ ಚಿಕಿತ್ಸೆಯಲ್ಲಿ 13.4 ತಿಂಗಳು). ‘ಡ್ರೀಮ್-8’ ಅಧ್ಯಯನದಲ್ಲಿ ಇದು 32.6 ತಿಂಗಳಾಗಿದ್ದು (ಹೋಲಿಕೆ ಚಿಕಿತ್ಸೆಯಲ್ಲಿ 12.5 ತಿಂಗಳು), ಎರಡೂ ಪ್ರಯೋಗಗಳಲ್ಲಿ ರೋಗ ಉಲ್ಬಣ ಅಥವಾ ಮರಣದ ಅಪಾಯ ಕ್ರಮವಾಗಿ ಶೇ. 59 ಮತ್ತು ಶೇ. 51ರಷ್ಟು ತಗ್ಗಿದೆ.
ವಿಶೇಷವೆಂದರೆ, ಈ ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಹೊರರೋಗಿ ವಿಭಾಗದಲ್ಲಿ ಕೇವಲ 30 ನಿಮಿಷಗಳಲ್ಲಿ ರಕ್ತನಾಳದ ಮೂಲಕ (ಇನ್ಫ್ಯೂಷನ್) ಈ ಔಷಧವನ್ನು ನೀಡಬಹುದಾಗಿದೆ.
ಚಿಕಿತ್ಸೆಯ ವೇಳೆ ಕಣ್ಣಿಗೆ ಸಂಬಂಧಿಸಿದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದರೂ, ಅವು ಮೊದಲೇ ಊಹಿಸಬಹುದಾದ ಹಾಗೂ ಡೋಸ್ ಬದಲಾವಣೆಯ ಮೂಲಕ ಸಂಪೂರ್ಣವಾಗಿ ಸರಿಪಡಿಸಬಹುದಾದ (ಸಹಜ ಸ್ಥಿತಿಗೆ ಮರಳುವ) ಸ್ವರೂಪದ್ದಾಗಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಅರ್ಹ ರೋಗಿಗಳಿಗೆ ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸಲು ‘ಫೀನಿಕ್ಸ್ ರೋಗಿ ಬೆಂಬಲ ಕಾರ್ಯಕ್ರಮ’ವನ್ನೂ ಒದಗಿಸಲಾಗುತ್ತಿದೆ.
ಕಳೆದ ವರ್ಷ ಜೆಂಪರ್ಲಿ ಮತ್ತು ಝೆಜುಲಾ ಔಷಧಗಳೊಂದಿಗೆ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರಕ್ಕೆ ಪ್ರವೇಶಿಸಿದ್ದ ಜಿಎಸ್ಕೆ ಇಂಡಿಯಾ, ಈಗ ಬ್ಲೆನ್ರೆಪ್ ಮೂಲಕ ರಕ್ತದ ಕ್ಯಾನ್ಸರ್ ವಿಭಾಗಕ್ಕೂ ವಿಸ್ತರಿಸುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಅಕ್ಷಿಕರ್ ಮಾಹಿತಿ ನೀಡಿದರು.
ರೋಗದ ಮೂಲ ಸ್ವರೂಪವನ್ನು ಅರ್ಥಮಾಡಿಕೊಂಡು ರೂಪಿಸಿರುವ ಈ ಚಿಕಿತ್ಸೆಯು ಭಾರತೀಯ ರೋಗಿಗಳಿಗೆ ಮಹತ್ವದ ಪ್ರಗತಿಯಾಗಿದೆ ಎಂದು ಸಂಸ್ಥೆಯ ವೈದ್ಯಕೀಯ ವಿಭಾಗದ ಉಪಾಧ್ಯಕ್ಷೆ ಡಾ. ಶಾಲಿನಿ ಮೆನನ್ ಅಭಿಪ್ರಾಯಪಟ್ಟರು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 2024ರಲ್ಲಿ ಕ್ಯಾನ್ಸರ್ನಿಂದ ಜಾಗತಿಕವಾಗಿ ಸುಮಾರು 1 ಕೋಟಿ ಮಂದಿ ಮೃತಪಟ್ಟಿದ್ದು, ಜಿಎಸ್ಕೆ ಪ್ರಸ್ತುತ ಭಾರತದಲ್ಲಿ ತಲೆ – ಕತ್ತು, ಕರುಳು, ಶ್ವಾಸಕೋಶ, ಪ್ರೋಸ್ಟೇಟ್ ಮತ್ತು ಮಹಿಳೆಯರ ಸಂತಾನೋತ್ಪತ್ತಿ ಅಂಗಗಳ ಕ್ಯಾನ್ಸರ್ ಸೇರಿದಂತೆ ಒಟ್ಟು 15 ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದೆ.








