ಕನ್ನಡಿಗ ಯೋಧನ ಮೃತದೇಹ ಬಿಹಾರದ ಕಿಶನ್ ಗಂಜ್ ನಲ್ಲಿ ಪತ್ತೆ…
ರಜೆಗೆ ಮನೆಗೆ ಬಂದಿದ್ದ ಕನ್ನಡಿಗ ಯೋಧ ವಾಪಸ್ ಸೇನೆ ಕೂಡಿಕೊಳ್ಳಲು ಹೋಗುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಸಿಗದ್ದೆ ಗ್ರಾಮದ ಯೋಧ ಗಣೇಶ್ ಮೃತದೇಹ ಬಿಹಾರದ ಕಿಶನ್ ಗಂಜ್ನಲ್ಲಿ ಪತ್ತೆಯಾಗಿದೆ.
ಮೃತ ಯೋಧ ಗಣೇಶ್ 15 ದಿನದ ಹಿಂದೆ ರಜೆ ಹಾಕಿ ಊರಿಗೆ ಬಂದಿದ್ದರು. ಏಪ್ರಿಲ್ 24ರಂದು ಊರಿಗೆ ಬಂದಿದ್ದು, ಜೂನ್ 09ರಂದು ಕರ್ತವ್ಯದ ಸಲುವಾಗಿ ಮನೆಯಿಂದ ವಾಪಸ್ ತೆರಳಿದ್ದರು. ಗುವಾಹಟಿಗೆ ತೆರಳುವಾಗ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್, ಮಸೀಗದ್ದೆ ನಾಗಯ್ಯ ಹಾಗೂ ಗಂಗಮ್ಮ ದಂಪತಿಯ ಪುತ್ರರಾಗಿದ್ದರು. ಗಣೇಶ್ ಗೆ ಐದು ವರ್ಷದ ಹೆಣ್ಣು ಮಗಳಿದ್ದಾಳೆ. ಮೃತ ಯೋಧ ಜಮ್ಮುವಿನಲ್ಲಿ ಸಿಗ್ನಲ್ ರೆಜಿಮೆಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಗಣೇಶ್ ನಿಧನದಿಂದಾಗಿ ಕುಟುಂಬಕ್ಕೆ ಆಧಾರವಿಲ್ಲದಂತಾಗಿದೆ, ಕುಟುಂಬ ಮತ್ತು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.