ವಲಸೆ ಕಾರ್ಮಿಕರ ನೆರವಿಗೆ ಬಂದ ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್

ಮುಂಬೈ, ಜೂನ್ 10: ದೇಶದಲ್ಲಿ ಕೊರೊನಾ ಕಾರಣದಿಂದ ಲಾಕ್ ಡೌನ್ ಘೋಷಣೆ ಆದಾಗ ಬಹಳಷ್ಟು ಸಂಕಷ್ಟಕ್ಕೆ ಒಳಗಾದವರು ವಲಸೆ ಕಾರ್ಮಿಕರು. ಕೈನಲ್ಲಿ ಕಾಸಿಲ್ಲದೆ, ತಮ್ಮ ಊರಿಗೆ ತೆರಳಲಾಗದೇ ಅನೇಕರು ಕಾಲ್ನಡಿಗೆಯಲ್ಲಿ ಹೊರಟಾಗ ದೇಶವೇ ಅವರಿಗೆ ಮರುಕ ಪಟ್ಟಿತ್ತು. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಗುರಿಯಾದ ಜನರಿಗೆ ನೆರವಾಗಲು ಅನೇಕ ಜನರು ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ. ಅದರಲ್ಲಿ ಚಲನಚಿತ್ರರಂಗದ ನಟರೂ ಇದ್ದಾರೆ. ಬಾಲಿವುಡ್ ನಟ ಸೋನು ಸೂದ್ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಕೈಗೊಂಡ ಕಾರ್ಯಕ್ಕೆ ಇಡೀ ದೇಶವೇ ಶಹಬ್ಬಾಸ್ ಎಂದಿದೆ. ನೀವು ಬರೀ ಚಲನಚಿತ್ರದಲ್ಲಿ ಮಾತ್ರ ಹೀರೊ ಅಲ್ಲ ನಿಜ ಜೀವನದಲ್ಲೂ ಹೀರೋ ಎಂದಿದೆ.
ಇದೀಗ ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್ ಕೂಡ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಧಾವಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರು ಸುಮಾರು 1000 ವಲಸೆ ಕಾರ್ಮಿಕರನ್ನು ವಿಮಾನಗಳ ಮೂಲಕ ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಒಂದು ವಿಮಾನದಲ್ಲಿ 180 ಪ್ರಯಾಣಿಕರಂತೆ ಕಾರ್ಮಿಕರನ್ನು ಸುರಕ್ಷಿತವಾಗಿ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ಗೋರಖ್ಪುರ, ವಾರಣಾಸಿ ಮತ್ತು ಉತ್ತರ ಪ್ರದೇಶಕ್ಕೆ ವಲಸೆ ಕಾರ್ಮಿಕರನ್ನು ಇಂದು ಮತ್ತು ನಾಳೆ ವಿಮಾನದಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 10 ವಿಶೇಷ ಬಸ್ಗಳನ್ನೂ ಈ ಕಾರ್ಮಿಕರಿಗಾಗಿ ವ್ಯವಸ್ಥೆ ಮಾಡಿದ್ದಾರೆ ಎಂದು ಅಮಿತಾಭ್ ಬಚ್ಚನ್ ಕಾರ್ಪ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.








