ಬಾಂಬೈ ಟೀಂನಲ್ಲಿ ಢವಢವ : ಸಿಎಂ ಬದಲಾದ್ರೆ ವಲಸಿಗರ ಕಥೆ ಏನು..?
ಬೆಂಗಳೂರು : ಜುಲೈ 26ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಜೋರಾಗಿ ಸದ್ದು ಮಾಡುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚನೆಯಾದ ಎರಡನೇ ವರ್ಷದ ದಿನದಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಎಸ್ ವೈ ಜುಲೈ 26ರಂದು ರಾಜ್ಯಪಾಲರನ್ನು ಭೇಟಿ ಆಗಲಿದ್ದು, ಅವತ್ತೆ ತಾಂತ್ರಿಕವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಅನ್ನುವ ಮಾಹಿತಿ ಈಗಾಗಲೇ ಹೊರಬಿದ್ದಿದೆ. ಇದರ ಬೆನ್ನಲ್ಲೆ ಬಿ.ಎಸ್.ಯಡಿಯೂರಪ್ಪ ಅವರನ್ನು ನಂಬಿ ಪಕ್ಷಬಿಟ್ಟು ಬಿಜೆಪಿ ಸೇರಿರುವ ವಲಸೆ ಬಿಜೆಪಿಗರ ಕಥೆ ಏನು..? ಅನ್ನೋ ಕುತೂಹಲ ಕೆರಳಿಸಿದೆ.
ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಬಾಂಬೈ ಟೀಂ ನಲ್ಲಿ ಢವಢವ ಶುರುವಾಗಿದೆ. ಈಗಾಗಲೇ ಇವರು ಮುಖ್ಯಮಂತ್ರಿಗಳ ಭೇಟಿಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಸಿಎಂ ಬದಲಾದ್ರೆ ಸಚಿವ ಸಂಪುಟ ಪುನರ್ ರಚನೆ ಪಕ್ಕಾ ಆಗಿದ್ದು, ತಮ್ಮನ್ನು ಕೈ ಬಿಟ್ಟರೇ ಮುಂದಿನ ಕಥೆ ಏನು ಅನ್ನೋದು ವಲಸಿಗರ ಆತಂಕಕ್ಕೆ ಕಾರಣವಾಗಿದೆ.
ಅಲ್ಲದೆ ಬಿಎಸ್ ವೈ ರಾಜೀನಾಮೆ ನೀಡಿ ಪಕ್ಷದಲ್ಲಿ ಸೈಲೆಂಟ್ ಆದ್ರೆ ವಲಸಿಗರನ್ನು ಮೂಲ ಬಿಜೆಪಿಗರು ಮೂಲೆಗುಂಪು ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂಗಿಲ್ಲ. ಈ ಎಲ್ಲಾ ಕಾರಣದಿಂದಾಗಿ ವಲಸಿಗರಿಗೆ ಇದೀಗ ತಲೆನೋವು ಶುರುವಾಗಿದೆ.